ಟೇಬಲಿನ ಮೇಲೆ ಐದು ಬೇರೆ ಬೇರೆ ಇಸವಿಯ ನಾಣ್ಯಗಳನ್ನು ಇಡಲಾಗಿದೆ. ಜಾದೂಗಾರ ಪ್ರೇಕ್ಷಕನಿಗೆ ಯಾವುದಾದರೂ ಒಂದು ನಾಣ್ಯವನ್ನು ತೆಗೆದುಕೊಂಡು ಅದರ ಇಸವಿಯನ್ನು ನೆನಪಿಟ್ಟುಕೊಳ್ಳಲು ಹೇಳುತ್ತಾನೆ. ಹಾಗೆಯೇ ಆ ನಾಣ್ಯವನ್ನು ಮುಷ್ಟಿಯಲ್ಲಿ ಭದ್ರವಾಗಿ ಹಿಡಿದು ಎರಡು ನಿಮಿಷಗಳ ಕಾಲ ತನ್ನ ಇಷ್ಟ ದೇವತೆಯನ್ನು ನೆನೆಯಲು ಸೂಚಿಸುತ್ತಾನೆ. ನಂತರ ಆ ನಾಣ್ಯವನ್ನು ಉಳಿದ ನಾಣ್ಯಗಳ ಜತೆ ಇಟ್ಟು ಅವುಗಳ ಸ್ಥಾನಪಲ್ಲಟ ಮಾಡಲು ಹೇಳುತ್ತಾನೆ. ಪ್ರೇಕ್ಷಕ ಇದನ್ನೆಲ್ಲ ಮಾಡುತ್ತಿರಬೇಕಾದರೆ ಜಾದೂಗಾರ ನಾಣ್ಯಗಳಿಗೆ ಬೆನ್ನು ಹಾಕಿ ಕುಳಿತಿರುತ್ತಾನೆ. ಹಿಂದಕ್ಕೆ ತಿರುಗಿದ ಜಾದೂಗಾರ ಗುಂಪಿನಲ್ಲಿರುವ ಒಂದು ನಾಣ್ಯವನ್ನು ತೆಗೆದು ಪ್ರೇಕ್ಷಕನಿಗೆ ಕೊಡುತ್ತಾನೆ. ಅದರ ಇಸವಿಯನ್ನು ಪರೀಕ್ಷಿಸಿದಾಗ ಅದು ಅವನು ಆರಿಸಿದ್ದ ನಾಣ್ಯವೇ ಆಗಿರುತ್ತದೆ. ಅರೆ, ಇದು ಹೇಗೆ ಸಾಧ್ಯ ಅಂತ ಯೋಚಿಸುತ್ತಿದ್ದೀರಾ? ಇಲ್ಲಿದೆ ನೋಡಿ ಅದರ ಸಿಂಪಲ್ ಸೀಕ್ರೆಟ್!
ಬೇಕಾಗುವ ಸಾಮಗ್ರಿ:
ಬೇರೆ ಬೇರೆ ಇಸವಿಯ ಐದು ನಾಣ್ಯಗಳು
ರಹಸ್ಯ:
ಪ್ರೇಕ್ಷಕ ಸುಮಾರು ಎರಡು ನಿಮಿಷ ನಾಣ್ಯವನ್ನು ಮುಷ್ಟಿಯಲ್ಲಿ ಭದ್ರವಾಗಿ ಹಿಡಿದುಕೊಂಡಾಗ ದೇಹದ ಶಾಖದಿಂದಾಗಿ ಅದು ಬೆಚ್ಚಗಾಗುತ್ತದೆ. ಆದ್ದರಿಂದ ಬೆಚ್ಚಗಿನ ನಾಣ್ಯವನ್ನು ಸ್ಪರ್ಶ ಮಾತ್ರದಿಂದ ಕಂಡು ಹಿಡಿದರೆ ಪ್ರೇಕ್ಷಕ ಆರಿಸಿದ ನಾಣ್ಯ ಪತ್ತೆಯಾಗುತ್ತದೆ. ಒಂದು ಮುಖ್ಯವಾದ ವಿಚಾರವೆಂದರೆ ಪ್ರೇಕ್ಷಕ ನಾಣ್ಯವನ್ನು ಮರಳಿ ಟೇಬಲ್ ಮೇಲೆ ಇಟ್ಟ ನಂತರ ತುಂಬಾ ಸಮಯ ವ್ಯರ್ಥ ಮಾಡಬಾರದು. ಏಕೆಂದರೆ ಸಮಯ ವ್ಯರ್ಥವಾದಷ್ಟೂ ನಾಣ್ಯದ ಶಾಖ ಕಡಿಮೆಯಾಗುತ್ತಾ ಸಾಗುತ್ತದೆ.
– ಉದಯ್ ಜಾದೂಗಾರ್