Advertisement

ಕೋಟ ಗಣಪತಿ ವಿಲಾಸ್‌ನಲ್ಲಿ ಏನುಂಟು, ಏನಿಲ್ಲ?

12:30 AM Mar 11, 2019 | |

ಹೋಟೆಲ್‌ ಉದ್ಯಮ ಈಗ ಬೃಹದಾಕಾರವಾಗಿ ಬೆಳೆದಿದೆ. ಸಣ್ಣ ಪಟ್ಟಣಗಳಲ್ಲೂ ಸ್ಟಾರ್‌ ಹೋಟೆಲ್‌ಗ‌ಳನ್ನು ಹೋಲುವಂಥ ಹೋಟೆಲ್‌ಗ‌ಳೇ ತಲೆ ಎತ್ತುತ್ತಿವೆ. ಇದರ ಹೊಡೆತ್ತಕ್ಕೆ ಸಿಲುಕಿ ಕಡಿಮೆ ದರದಲ್ಲಿ ರುಚಿಯಾದ ಊಟ, ತಿಂಡಿಯನ್ನು ಒದಗಿಸುತ್ತಾ, ಹಸಿವು ನೀಗಿಸುತ್ತಿದ್ದ ಕೆಲ ಹೋಟೆಲ್‌ಗ‌ಳು ಮುಚ್ಚಿಹೋಗಿವೆ. ಇನ್ನೂ ಕೆಲವು ಮುಚ್ಚಿ ಹೋಗುವ ಹಂತದಲ್ಲಿವೆ.

Advertisement

ಇವೆಲ್ಲದರ ನಡುವೆ ಕೆಲವರು ತಮಗೆ ಬದುಕು ಕಟ್ಟಿಕೊಟ್ಟ ಹೋಟೆಲ್‌ಗ‌ಳನ್ನು ಮುಚ್ಚಲು ಇಷ್ಟವಿಲ್ಲದೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಆಹಾರ ಪದಾರ್ಥಗಳು ದುಬಾರಿಯಾಗಿರುವ ಈ ಕಾಲದಲ್ಲೂ ಸಾಧ್ಯವಾದಷ್ಟು ಕಡಿಮೆ ದರದಲ್ಲಿ ರುಚಿಯನ್ನು ಕೆಡಿಸದೇ ಗ್ರಾಹಕರಿಗೆ ಊಟ, ತಿಂಡಿಯನ್ನು ಒದಗಿಸುತ್ತಿದ್ದಾರೆ. ಇಂತಹ ಹೋಟೆಲ್‌ಗ‌ಳಲ್ಲಿ ಕೋಟದಲ್ಲಿರುವ ಗಣಪತಿ ವಿಲಾಸ್‌ ಕೂಡ ಒಂದು. ಇದನ್ನು ಕೋಟದ ಕಾರ್ತಟ್ಟುವಿನಲ್ಲಿ 1968ರಲ್ಲಿ ಬಾಬುರಾಯ ಪೈ ಅವರು ಪ್ರಾರಂಭಿಸಿದ್ದರು. ಕಡುಬಡತನದಲ್ಲೇ ಬೆಳೆದ ಇವರು, ಜೀವನಕ್ಕಾಗಿ ಚೆನ್ನೈನಲ್ಲಿದ್ದ ತನ್ನ ದೊಡ್ಡಪ್ಪ ನಾರಾಯಣರಾವ್‌ ಅವರ ಹೋಟೆಲ್‌ನಲ್ಲಿ 10 ರೂ. ಸಂಬಳಕ್ಕೆ ಕೆಲಸಕ್ಕೆ ಸೇರಿಕೊಂಡರು. ಕೆಲವು ವರ್ಷಗಳ ನಂತರ ಅಲ್ಲೇ ಇದ್ದ ಉಡುಪಿಯ ಸೀತಾರಾಮರಾವ್‌ ಅವರ ಹೋಟೆಲ್‌ನಲ್ಲಿ 32 ರೂ. ಸಂಬಳಕ್ಕೆ ಸೇರಿಕೊಂಡು 10 ವರ್ಷ ಕೆಲಸ ಮಾಡಿದರು. ನಂತರ ಊರಿಗೆ ವಾಪಸ್ಸಾದವರು. ಇಲ್ಲಿ ತಮ್ಮ ತಂದೆ ಮಾಡುತ್ತಿದ್ದ ಕೆಲಸವನ್ನೇ ಮುಂದುವರಿಸಿದರು.


ಆರಂಭದಲ್ಲಿ ಮಿಠಾಯಿ, ಜಿಲೇಬಿ, ಚಿಪ್ಸ್‌ ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ನಂತರ ಪುಟ್ಟದಾಗಿ ಹೋಟೆಲ್‌ ಆರಂಭಿಸಿದರು. ನಂತರ ತಮ್ಮಂದಿರು ಮತ್ತು ಪತ್ನಿ ವಿಜಯಾ ಪೈ ಎಲ್ಲರೂ ಈ ಹೋಟೆಲ್‌ನಲ್ಲೇ ಕೆಲಸ ಮಾಡಲು ಆರಂಭಿಸಿದರು. ಇಲ್ಲಿ ಕೊಡುತ್ತಿದ್ದ ಖೀರು(ಪಾಯಸ), ಬನ್ಸ್‌, ದೋಸೆ, ಇಡ್ಲಿ, ಸಾಂಬಾರ್‌ ಕೂಡ ಗ್ರಾಹಕರ ಮನಸ್ಸಿಗೆ ಹಿಡಿಸಿತ್ತು. ಪಡುಕೆರೆಯ ಸಮುದ್ರದಲ್ಲಿ ಮೀನು ಹಿಡಿಯುವವರು. ಇಟ್ಟಿಗೆ ಕಾರ್ಖಾನೆಯವರು, ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುತ್ತಿದ್ದ ವಾಹನ ಸವಾರರು ತಿಂಡಿ, ಊಟಕ್ಕೆ ಈ ಹೋಟೆಲ್‌ಗೆ ಬರುತ್ತಿದ್ದರು. ಬೆಳಗಿನ ಜಾವ 3.30ಕ್ಕೆ ಆರಂಭವಾಗುತ್ತಿದ್ದ ಹೋಟೆಲ್‌ ತಡರಾತ್ರಿವರೆಗೂ ನಡೆಯುತ್ತಿತ್ತು. ಆ ಕಾಲದಲ್ಲಿಯೇ ದೋಸೆಗಾಗಿ ದಿನಕ್ಕೆ 25 ಕೆ.ಜಿ.ವರೆಗೂ ಅಕ್ಕಿಯನ್ನು ರುಬ್ಬುತ್ತಿದ್ದರಂತೆ. ಕಂಬಳ, ವಿಶೇಷ ಸಮಾರಂಭಗಳು ನಡೆದರೆ ಗಣಪತಿ ವಿಲಾಸ್‌ ಈ ಹೋಟೆಲ್‌ನ ಖೀರಿಗೆ ಬಲು ಬೇಡಿಕೆ ಬರುತ್ತಿತ್ತು. ಶಾಲಾ ಕಾಲೇಜು ವಿದ್ಯಾರ್ಥಿಗಳು ಇಲ್ಲಿನ ಬನ್ಸ್‌, ಖೀರು, ಮಸಾಲೆ ದೋಸೆಗೆ ಮನಸೋತಿದ್ದರು. ಕಾಲ ಬದಲಾದಂತೆ ಹೋಟೆಲ್‌ಗ‌ಳು ಹೆಚ್ಚೆಚ್ಚು ಆರಂಭವಾದ್ದರಿಂದ ಜನ ಕಡಿಮೆಯಾಗಿದ್ದಾರೆ. ಆದರೂ ಹೋಟೆಲ್‌ನ ರುಚಿಯನ್ನು ಕಂಡಿರುವ ಜನ. ಈಗಲೂ ಗಣಪತಿ ವಿಲಾಸ್‌ ನಂಟು ಬಿಟ್ಟಿಲ್ಲ. ಹೋಟೆಲ್‌ ಮಾಲೀಕರೂ ತಮಗೆ 70 ವರ್ಷವಾದ್ರೂ ಪತ್ನಿಯ ಸಹಕಾರದೊಂದಿಗೆ ಹಿಂದಿನಂತೆ ತಮಗೆ ಎಷ್ಟು ಸಾಧ್ಯವೋ ಅಷ್ಟು ತಿಂಡಿಯನ್ನು ಮಾಡಿ ಜನರಿಗೆ ಕಡಿಮೆ ದರದಲ್ಲಿ ವಿತರಿಸುತ್ತಿದ್ದಾರೆ.

ವಿಶೇಷ ತಿಂಡಿ:
ತುಪ್ಪದ ದೋಸೆ(20 ರೂ.), ಇಡ್ಲಿ, ಸಾಂಬಾರ್‌ ಹೋಟೆಲ್‌ನ ವಿಶೇಷ. ದರ ಕೇವಲ 10 ರೂ.

ಹೋಟೆಲ್‌ನ ತಿಂಡಿ:
ಬೆಳಗ್ಗೆ ವೇಳೆ ಇಡ್ಲಿ(ಸಿಂಗಲ್‌ 5 ರೂ.), ವಡೆ, ಸಾಂಬಾರು (6 ರೂ.), ಪೂರಿ, ಬನ್ಸ್‌(15 ರೂ.), ಗೋಲಿಬಜೆ, ಉಪ್ಪಿಟ್ಟು ಅವಲಕ್ಕಿ(10 ರೂ.)ಗೆ ಸಿಗುತ್ತದೆ. ಸಂಜೆ 4.30ರ ನಂತರ ಖಾಲಿ ದೋಸೆ, ಈರುಳ್ಳಿ ದೋಸೆ, ಮಸಾಲೆ ದೋಸೆ, ತುಪ್ಪದ ದೋಸೆ ಸಿಗುತ್ತದೆ. ದರ ಕೇವಲ 20 ರೂ..

ವಿಳಾಸ:
ಗಣಪತಿ ವಿಲಾಸ್‌, ವಿವೇಕ್‌ ಹೈಸ್ಕೂಲ್‌ ಸಮೀಪ, ರಾಷ್ಟ್ರೀಯ ಹೆದ್ದಾರಿ 66ರ ಪಕ್ಕ, ಕೋಟ.
ಸಮಯ: ಬೆಳಗ್ಗೆ 6.30 ರಿಂದ ಮಧ್ಯಾಹ್ನ 1.30, ಸಂಜೆ 4.30ರಿಂದ ರಾತ್ರಿ 8.30ರವರೆಗೆ.

Advertisement

– ಭೋಗೇಶ ಆರ್‌.ಮೇಲುಕುಂಟೆ

Advertisement

Udayavani is now on Telegram. Click here to join our channel and stay updated with the latest news.

Next