Advertisement
ಮಾನವನಾದವನಿಗೆ ಬದುಕಿನಲ್ಲಿ ನೆಮ್ಮದಿಯೊಂದಿದ್ದರೆ ಏನಿದ್ದರೂ ಬದುಕಬಲ್ಲ; ಏನಿರದಿದ್ದರೂ ಬದುಕಬಲ್ಲ! ಈ ನೆಮ್ಮದಿ ಎಂಬುದಕ್ಕೆ ವಿಶಾಲ ಅರ್ಥವಿದೆ. ನೆಮ್ಮದಿಯೆಂದರೆ, ನಮ್ಮೆಲ್ಲ ವಾಂಛೆಗಳು ಈಡೇರುವುದು ಎಂದುಕೊಂಡಿದ್ದೇವೆ. ಆದರೆ, ಈ ನೆಮ್ಮದಿ ಎಂಬುದು ಕೇವಲ ಐಹಿಕ ಸಂತೃಪ್ತಿಯಲ್ಲ. ಅದು ನಾವು ಪರಮಯೋಗಿಯಾಗುವುದೇ ನಿಜವಾದ ನೆಮ್ಮದಿ. ರೂಢಿಯೊಲ್ಲೊಂದು ಮಾತಿದೆ:”ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ’ ಎಂಬುದಾಗಿ. ಇದು ತೀರಾ ಸರಳವಾದ ನುಡಿ. ಆದರೆ ಇಲ್ಲಿ ಚಿಂತೆ ಎಂಬುದು ಕೇವಲ ತಮಗೆ ಮಾತ್ರ ಸಂಬಂಧಿಸಿದ್ದು, ಅದೇ ಸಂತೆ ಎಂಬುದು ಜಗತ್ತು, ಎಲ್ಲರಿಗೂ ಸಂಬಂಧಿಸಿದ್ದು. ಅಂಥ ಜಾಗದಲ್ಲೂ ವ್ಯಕ್ತಿಯೊಬ್ಬ ನಿದ್ರಿಸುತ್ತಾನೆ ಎಂದರೆ, ಒಂದೋ ಆತ ತನ್ನೊಳಗಿನ ಚಿಂತೆಯನ್ನು ಬಿಟ್ಟವನಾಗಿದ್ದಾನೆ ಅಥವಾ ಪ್ರಪಂಚದ ಎಲ್ಲರ ಚಿಂತೆಯನ್ನು ಅನುಭವಿಸಿದವನಾಗಿದ್ದಾ ನೆ ಎಂದರ್ಥ.ಅರ್ಥಾತ್ ಆತ ಪರಮಯೋಗಿಯೇ ಆಗಿದ್ದಾನೆ ಅನ್ನಬಹುದು.
ಆತ್ಮೌಪಮ್ಯೇನ ಸರ್ವತ್ರ ಸಮಂ ಪಶ್ಯತಿ ಯೋರ್ಜುನ |
ಸುಖಂ ವಾ ಯದಿ ವಾ ದುಃಖಂ ಸ ಯೋಗೀ ಪರಮೋ ಮತಃ || (ಅಧ್ಯಾಯ 6 ಶ್ಲೋಕ 32) ಸಕಲ ಜೀವಿಗಳ ಸುಖವನ್ನೂ ದುಃಖವನ್ನೂ ಯಾವನು ತನ್ನದೇ ಎಂದು ಭಾವಿಸುತ್ತಾನೋ, ಎಲ್ಲೆಲ್ಲಿಯೂ ಯಾರು ಏಕತೆಯನ್ನು ಕಾಣುತ್ತಾನೆಯೋ ಅವನೇ ಪರಮಯೋಗಿ ಎಂಬುದು ಇದರ ಅರ್ಥ.
ಪ್ರತಿಯೊಬ್ಬರ ಜೀವನವೂ ಸುಖದುಃಖಗಳಿಂದ ಕೂಡಿರುತ್ತದೆ. ಅಂದರೆ, ಪ್ರತಿಯೊಬ್ಬನಿಗೂ ನೋವುನಲಿವುಗಳ ಸಂಪೂರ್ಣ ಅರಿವಿದೆ. ಇಲ್ಲಿ ನಾವು ಉದಾತ್ತರಾಗಬೇಕು. ಕೇವಲ ನಮ್ಮ ನೋವನ್ನಷ್ಟೇ ಅಲ್ಲದೆ ಎಲ್ಲರ ನೋವುಗಳನ್ನು ಅರಿತು, ಅದೂ ಕೂಡ ತನ್ನದೇ ನೋವು ಎಂಬ ಪ್ರಜ್ಞೆಯೊಂದಿಗೆ ಬಾಂಧವ್ಯವನ್ನು ಬೆಸೆದುಕೊಂಡು ಜೀವಿಸುವವನೇ ಪರಮಯೋಗಿ. ಎÇÉೆಲ್ಲಿಯೂ ಏಕತೆಯನ್ನು ಕಾಣುವವನು ಅಂದರೆ ಎಲ್ಲರೂ ಒಂದೇ, ನಾನು ಎಂಬುದನ್ನು ಬಿಟ್ಟು ನಾವು ಎಂಬ ದೃಷ್ಟಿಯನ್ನು ಹೊಂದಿದವನು ಪರಮಯೋಗಿಯಾಗುತ್ತಾನೆ. ಈ ಏಕತಾಭಾವದಿಂದಾಗಿ ಎಲ್ಲರೂ ಪರಮಯೋಗಿಗಳಾಗಿ ಪರಿವರ್ತನೆ ಹೊಂದಿದ ಜಗತ್ತಿನಲ್ಲಿ ನೆಮ್ಮದಿಯು ಶಾಶ್ವತವಾಗಿ ನೆಲೆಸುತ್ತದೆ. ಯಾಕೆಂದರೆ ಪ್ರತಿಯೊಬ್ಬರ ಕಷ್ಟವನ್ನು ತನ್ನದೇ ಕಷ್ಟವೆಂದುಕೊಂಡು ವ್ಯವಹರಿಸುವಾಗ ಪರಸ್ಪರ ಸಹಾಯಕ್ಕೆ ನಿಲ್ಲುವ ಮನಸ್ಸು ಸರ್ವವ್ಯಾಪಿಯಾಗಿ ಎಲ್ಲರೂ ಆನಂದದ ಬದುಕನ್ನು ಹೊಂದಲು ಸಾಧ್ಯ.
Related Articles
Advertisement
ವಿಷ್ಣು ಭಟ್ , ಹೊಸ್ಮನೆ (ಭಾಸ್ವ)