ಪಾಟ್ನಾ: ಬಿಹಾರದಲ್ಲಿ ಮೊದಲ ಹಂತದ ಚುನಾವಣೆ ಮುಕ್ತಾಯವಾಗಿದ್ದು, ಏತನ್ಮಧ್ಯೆ ಪ್ರಧಾನಿ ನರೇಂದ್ರ ಮೋದಿ, ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿ, ಎನ್ ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮಾತ್ರ ಬಿಹಾರ ರಾಜ್ಯ ಅಭಿವೃದ್ಧಿ ಪಥದತ್ತ ಸಾಗುತ್ತದೆ, ಒಂದು ವೇಳೆ ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ ಇಡೀ ರಾಜ್ಯ ‘ಜಂಗಲ್ ರಾಜ್ಯವಾಗಲಿದೆ’ ಎಂದು ತಿಳಿಸಿದ್ದಾರೆ.
ಬಿಹಾರದಲ್ಲಿ ಎರಡು ಯುವರಾಜರು ಅಧಿಕಾರ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಒಬ್ಬರು ಕುಟುಂಬ ರಾಜಕಾರಣದ ಪರಂಪರೆಯಿಂದ ಬಂದಿದ್ದರೆ, ಮತ್ತೊಬ್ಬರು ಜಂಗಲ್ ರಾಜ್ ಆಡಳಿತದ ಪರಂಪರೆಯಿಂದ ಬಂದಿದ್ದಾರೆ ಎಂದು ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಉದ್ದೇಶಿಸಿ ಮಾತನಾಡಿದರು. ಮಾತ್ರವಲ್ಲದೆ ಡಬಲ್ ಎಂಜಿನ್ (ನಿತೀಶ್ ಕುಮಾರ್ ಸರ್ಕಾರ) ಸರ್ಕಾರ ರಾಜ್ಯದ ಪ್ರಗತಿಗೆ ಹೆಚ್ಚಿನ ಮಹತ್ವ ನೀಡಿದೆ. ಈ ಕಾರಣಕ್ಕಾಗಿ ರಾಜ್ಯದ ಜನತೆ ಅಭಿವೃದ್ಧಿಯಲ್ಲಿ ತೊಡಗಿರುವ ಸರ್ಕಾರಕ್ಕೆ ಮತ ನಿಡಬೇಕು ಎಂದರು.
3 ವರ್ಷಗಳ ಹಿಂದೆ ಉತ್ತರ ಪ್ರದೇಶ ಚುನಾವಣೆಯಲ್ಲಿ ಕೂಡ ಎರಡು ಯುವರಾಜರು (ಅಖಿಲೇಶ್ ಯಾದವ್ ಹಾಗೂ ರಾಹುಲ್ ಗಾಂಧಿ) ಅಧಿಕಾರ ಪಡೆಯಲು ಪಣತೊಟ್ಟಿದ್ದರು. ಆದರೇ ಉತ್ತರಪ್ರದೇಶ ಜನತೆ ಅವರನ್ನು ಮನೆಗೆ ಕಳುಹಿಸಿದರು ಎಂದು ಸಮಾವೇಶದಲ್ಲಿ ತಿಳಿಸಿದ್ದಾರೆ.
ಈ ಹಿಂದಿನ ಸಮಾವೇಶದಲ್ಲೂ ಕೂಡ ಬಿಹಾರ ಮಹಾಘಟಬಂಧನ್ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ವಿರುದ್ಧ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನೇರವಾಗಿ ಟಾಂಗ್ ನೀಡಿದ್ದು, “ಜಂಗಲ್ ರಾಜ್ ಕಾ ಯುವರಾಜ್” ಎಂಬುದಾಗಿ ವಾಗ್ದಾಳಿ ನಡೆಸಿದ್ದರು.