Advertisement

ರಾಜ್ಯದ ಯಾವ ವಿವಿಗೂ ಇಲ್ಲ 5 ಸ್ಟಾರ್‌ ಪಟ್ಟ

10:50 AM Apr 01, 2017 | Team Udayavani |

ಬೆಂಗಳೂರು: ಕರ್ನಾಟಕ ರಾಜ್ಯ ಶೈಕ್ಷಣಿಕವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದರೂ, ರಾಜ್ಯದಲ್ಲಿನ 38 ವಿವಿಗಳಲ್ಲಿ ಒಂದೇ ಒಂದು ವಿವಿ ಫೈವ್‌ ಸ್ಟಾರ್‌ ಅಂಕ ಪಡೆಯಲು ಅರ್ಹತೆ ಪಡೆದಿಲ್ಲ.

Advertisement

ಅಷ್ಟೇ ಅಲ್ಲ, ಸರ್ಕಾರವೇ ಅತೀವ ಕಾಳಜಿ ವಹಿಸಿ ಸ್ಥಾಪಿಸಿರುವ ಹಂಪಿ ಕನ್ನಡ ವಿವಿ, ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ವಿವಿ, ಸಂಸ್ಕೃತ ವಿವಿ, ಜಾನಪದ ವಿವಿಗಳ ಗುಣಮಟ್ಟ ಕಳಪೆ ಮಟ್ಟದ್ದಾಗಿದೆ.

ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಪರಿಷತ್‌ ನಡೆಸಿದ ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ಗುಣಮಟ್ಟ ಮತ್ತು ಮೂಲಸೌಕರ್ಯ ಕುರಿತ ಸಮೀಕ್ಷೆಯಲ್ಲಿ ಈ ವಿಷಯ ಬಯಲಾಗಿದೆ.

ಸಾರ್ವಜನಿಕರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳೆಂದು ಭಾವಿಸಿರುವ ಪಿಇಎಸ್‌, ಜೆಎಸ್‌ಎಸ್‌, ಜೈನ್‌, ಎಂ.ಎಸ್‌.ರಾಮಯ್ಯ ಡೀಮ್ಡ್ ವಿಶ್ವವಿದ್ಯಾನಿಲಯಗಳು ಸಹ ಫೈವ್‌ಸ್ಟಾರ್‌ ಅಂಕ ಪಡೆಯಲು ಸಾಧ್ಯವಾಗದೇ ಫೋರ್‌ ಸ್ಟಾರ್‌ ಪಡೆಯಲಷ್ಟೇ ಶಕ್ತವಾಗಿವೆ.

ಸಮೀಕ್ಷೆ ವೇಳೆ ವಿವಿಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿತ್ತು. 10ವರ್ಷಕ್ಕಿಂತ ಮೇಲ್ಪಟ್ಟ ವಿವಿಗಳ ಪಟ್ಟಿಯಲ್ಲಿ 8 ವಿವಿಗಳ ಪೈಕಿ ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ ಸಂಸ್ಥೆ 4 ಸ್ಟಾರ್‌ ಪಡೆದುಕೊಂಡಿದ್ದು, ಉಳಿದ ವಿವಿಗಳು 3 ಸ್ಟಾರ್‌ಗೆ ತೃಪ್ತಿ ಪಟ್ಟಿವೆ. ಇನ್ನು 5ರಿಂದ 10 ವರ್ಷದೊಳಗೆ ಆರಂಭವಾಗಿರುವ 11 ವಿಶ್ವವಿದ್ಯಾಲಯಗಳಲ್ಲಿ ಜೆಎಸ್‌ಎಸ್‌ ಮೈಸೂರು ಮತ್ತು ಜೈನ್‌ ವಿವಿಗಳು 4 ಸ್ಟಾರ್‌ ಪಟ್ಟ ಗಿಟ್ಟಿಸಿದ್ದು, ಉಳಿದ ವಿವಿಗಳು 3 ಮತ್ತು 2 ಸ್ಟಾರ್‌ ಪಟ್ಟ ಪಡೆದಿವೆ. 5 ವರ್ಷದ ಒಳಗೆ ಆರಂಭವಾಗಿರುವ ಹೊಸ ವಿವಿಗಳಲ್ಲಿ ಪಿಇಎಸ್‌ ಮತ್ತು ಎಂಎಸ್‌ ರಾಮಯ್ಯ ವಿವಿಗಳು 4 ಸ್ಟಾರ್‌ ಪಟ್ಟ ಪಡೆದಿವೆ. 

Advertisement

ವಿಶೇಷ ವಿಶ್ವವಿದ್ಯಾಲಯಗಳಲ್ಲಿ ಧಾರವಾಡ, ಬೆಂಗಳೂರು ಕೃಷಿ ವಿವಿಗಳು ಹಾಗೂ ಬೀದರ್‌ನ ಪಶು ಸಂಗೋಪನಾ ವಿವಿ 4 ಸ್ಟಾರ್‌ ಪಡೆದಿವೆ. ಶತಮಾನ ಕಂಡಿರುವ ಮೈಸೂರು ವಿವಿ, ಬೆಂಗಳೂರು ವಿವಿ ಸಹ ಫೈವ್‌ಸ್ಟಾರ್‌ ಮಾನ್ಯತೆ ಪಡೆಯಲು ವಿಫ‌ಲವಾಗಿವೆ.ಈ ಮಧ್ಯೆ, ಕರ್ನಾಟಕ ವಿವಿ ಧಾರವಾಡ ಮತ್ತು ಶಿವಮೊಗ್ಗದ ಕುವೆಂಪು ವಿವಿ ವರದಿಯೇ ಇನ್ನೂ ಉನ್ನತ ಶಿಕ್ಷಣ ಪರಿಷತ್ತಿಗೆ ಸಲ್ಲಿಕೆಯಾಗಿಲ್ಲ.

ಸಮೀಕ್ಷೆಯಿಂದ ಬಯಲು
ರಾಜ್ಯ ಸರ್ಕಾರದ ಹಂಪಿ ಕನ್ನಡ ವಿವಿ, ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶನ ಕಲೆ ವಿವಿ, ಕರ್ನಾಟಕ ಸಂಸ್ಕೃತ ವಿವಿ, ಕರ್ನಾಟಕ ಮುಕ್ತ ವಿವಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯಗಳು ಸಂಶೋಧನೆ ಮತ್ತು ಆವಿಷ್ಕಾರ ವಿಭಾಗದಲ್ಲಿ ಶೂನ್ಯ ಸಾಧನೆ ಮಾಡಿರುವುದು ಸಮೀಕ್ಷೆಯಿಂದ ಬಯಲಾಗಿದೆ. ಈ ಸಮೀಕ್ಷೆಯಿಂದ ವಿಶ್ವವಿದ್ಯಾಲಯಗಳು ಯಾವ ವಿಚಾರದಲ್ಲಿ ಹಿಂದುಳಿದಿವೆ ಎನ್ನುವುದನ್ನು ತಿಳಿದುಕೊಂಡು ಅದನ್ನು ಸರಿಪಡಿಸಲು ಹೆಚ್ಚಿನ ಅವಕಾಶ ದೊರೆಯುತ್ತದೆ. ಅಲ್ಲದೇ, ವಿವಿಗಳಲ್ಲಿನ ಕೊರತೆಗಳು ಸರ್ಕಾರದ ಗಮನಕ್ಕೆ ಬರುವುದರಿಂದ ಸರ್ಕಾರವೂ ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಅನುಕೂಲ ಆಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next