Advertisement

ನಮ್ಮನ್ನು ಬಿ.ಟೀಮ್‌ ಎಂದಿದ್ದ ಸಿದ್ದು ಈಗ ಏನು ಹೇಳ್ತಾರೆ?

09:27 PM Nov 16, 2019 | Team Udayavani |

ಹುಣಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್‌ ಪಕ್ಷವನ್ನು ಬಿಜೆಪಿಯ ಬಿ.ಟೀಮ್‌ ಎನ್ನುತ್ತಾ ಕೋಮುವಾದಿಗಳೆಂದು ಬಿಂಬಿಸುತ್ತಿದ್ದರು. ಇದೀಗ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಪಕ್ಷವು ಪ್ರಖರ ಹಿಂದುತ್ವದ ವಿಚಾರಧಾರೆಯುಳ್ಳ ಶಿವಸೇನೆ ಜೊತೆ ಸೇರಿ ಸರ್ಕಾರ ರಚಿಸಲು ಹೊರಟಿದೆ. ಈ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.

Advertisement

ನಗರದಲ್ಲಿ ಶನಿವಾರ ಜೆಡಿಎಸ್‌ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಒನ್‌ ಬೈ ತ್ರಿ ಸರ್ಕಾರ ರಚನೆಯಾಗುತ್ತಿದ್ದು, ಚುನಾವಣಾ ಪೂರ್ವದಲ್ಲೇ ಶಿವಸೇನೆಯೊಂದಿಗೆ ಸೇರಿ ಒನ್‌ ಬೈಟು ಮಾಡಿಕೊಳ್ಳಬಹುದಿತ್ತು ಎಂದು ಲೇವಡಿ ಮಾಡಿದರು.

ಬಿಜೆಪಿ ಮೃದು ಹಿಂದುತ್ವವಾದರೆ, ಶಿವಸೇನೆ ಪ್ರಖರ ಹಿಂದುತ್ವ ಧೋರಣೆ ಹೊಂದಿದೆ. ಮುಸಲ್ಮಾನರು ಈ ದೇಶದಿಂದ ತೊಲಗಬೇಕು ಎನ್ನುವವರ ಜೊತೆ ಹೊಂದಾಣಿಕೆ ಮಾಡಿಕೊಂಡು ಸರಕಾರ ರಚನೆಗೆ ಮುಂದಾಗಿರುವುದು ನಿಮ್ಮ ಇಬ್ಬುಗೆ ನೀತಿಯನ್ನು ತೋರುತ್ತದೆ ಎಂದು ವಾಗ್ಧಾಳಿ ನಡೆಸಿದರು.

ಇನ್ನು ತಮ್ಮ ಪಕ್ಷವನ್ನು ಕೋಮವಾದಿ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಬಿ.ಟೀಮ್‌ ಎಂಬ ಅಪ ಪ್ರಚಾರದಿಂದಾಗಿ ಅಲ್ಪಸಂಖ್ಯಾತರು ದೂರವಾಗಿದ್ದರು. ಆದರೆ, ಆ ವರ್ಗದ ಜನರಿಗೆ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದೇವೆ. ಈ ಬಾರಿ ಪಕ್ಷವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.

ಮಾಜಿ ಸಚಿವ, ಬಿಜೆಪಿ ಅಭ್ಯರ್ಥಿ ಎಚ್‌.ವಿಶ್ವನಾಥ್‌ ಅವರು ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ಆಹ್ವಾನದ ಮೇರೆಗೆ ಬಿಜೆಪಿ ಸೇರಿದ್ದೇನೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಳೆದ ಮೂರು ತಿಂಗಳಿನಿಂದ ಅವರ ಹೇಳಿಕೆಗಳನ್ನು ಮಾಧ್ಯಮದವರೇ ಗಮನಿಸಿದ್ದೀರಿ, ನೀವೇ ಪರಾಮರ್ಶಿಸಿ ಎಂದರು.

Advertisement

ಈ ಉಪ ಚುನಾವಣೆಗಳು ಮೂರು ಪಕ್ಷಗಳಿಗೆ ಅಗ್ನಿ ಪರೀಕ್ಷೆಯಾಗಿದ್ದು, ಫಲಿತಾಂಶದ ನಂತರ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ. ಯಾವ ಪಕ್ಷಗಳು ಎಷ್ಟು ಸೀಟ್‌ ಪಡೆಯುವುದರ ಮೇಲೆ ಎಲ್ಲವೂ ಅಡಗಿದೆ ಮಾರ್ಮಿಕವಾಗಿ ನುಡಿದರು.

ತಕ್ಕ ಪಾಠ ಕಲಿಸಿ: ಜೆಡಿಎಸ್‌ ಪಕ್ಷಕ್ಕೆ ಹುಣಸೂರು ಕ್ಷೇತ್ರದ ಜೊತೆ ಅವಿನಾಭಾವ ಸಂಬಂಧ ಇದೆ. ಶಾಸಕ ಸ್ಥಾನವನ್ನು ಮಾರಿಕೊಂಡವರಿಂದಾಗಿ ಚುನಾವಣೆ ಬಂದಿದೆ. ತಾವು ಕ್ಷೇತ್ರದ ಎಲ್ಲಾ ಹಳ್ಳಿಗಳಿಗೂ ಭೇಟಿ ನೀಡಿ, ಮತ ಯಾಚಿಸುವೆ. ತಮ್ಮ ಅವಧಿಯಲ್ಲಿ ಸಾಲಮನ್ನಾ ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವ ಹೆಮ್ಮೆ ಇದೆ. ಈ ಭಾಗದಲ್ಲಿ ತಂಬಾಕಿನ ಸಮಸ್ಯೆ ಎದುರಾದಾಗ ಎಚ್‌.ಡಿ.ದೇವೇಗೌಡರು ಸ್ಪಂದಿಸಿ ಉತ್ತಮ ಬೆಲೆ ಕೊಡಿಸಿದ್ದರು ಎಂಬುದನ್ನು ಕ್ಷೇತ್ರದ ಜನತೆ ಮರೆಯಬಾರದು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next