Advertisement

ಏನೆಂದು ಹೆಸರಿಡಲಿ?

06:00 AM Jun 24, 2018 | |

ಹೆಸರಿನಲ್ಲೇನಿದೆ!? ಎಂಬುದು ಶೇಕ್ಸ್‌ಪಿಯರ್‌ನ ಪ್ರಸಿದ್ಧ ವಾಕ್ಕು. ನನಗೋ ಹೆಸರೆಂದರೆ ; ಬಾಲ್ಯದಿಂದ ಮುಗಿಯಲಾರದ ಬೆರಗು. ಹುಟ್ಟಿದ ಊರು, ಮನೆಯ ಹಿತ್ತಲಲ್ಲಿ ಅರಳುವ ತರಹವೇವಾರಿ ಹೂ, ತವರೂರ ದಾರಿಯ ಮುಂದಿನ ತಿಟ್ಟೆ, ದೊಗರಿನ ದಿಬ್ಬ, ಜುಳುಜುಳು ಹರಿಯುವ ನೀರ ತೊರೆ, ಮರ್ಮರಿಸುವ ಕಾಡಿನ ಮರ ಗಿಡ, ನಭೋಮಂಡಲದಲ್ಲಿ ಹೊಳೆವ ಗ್ರಹ ನಕ್ಷತ್ರ- ಯಾವುದಕ್ಕೆ ಹೆಸರಿಲ್ಲ ಹೇಳಿ? ಈ ಎಲ್ಲವಕ್ಕೆ ಹೆಸರಿಟ್ಟವರಾರು? ಆ ಇಟ್ಟ ಹೆಸರ ಶತಮಾನಗಳ ಕಾಲ ಹೊತ್ತು ತಂದವರಿಗೆ ಅದರ ಅರ್ಥ ಕಾಡಲಿಲ್ಲವೆ?

Advertisement

ನಾಮಪದಕ್ಕೆ ಅರ್ಥವಿರಲೇಬೇಕೆಂದಿಲ್ಲ ಎನ್ನುತ್ತದೆ ವ್ಯಾಕರಣ. ಆದರೆ ನನಗೋ ಪ್ರತಿಯೊಂದು ಹೆಸರಲ್ಲಿ ಒಂದೇ ಅಲ್ಲ, ಬಹು ಅರ್ಥಗಳೇ ಕಾಣುತ್ತವೆ. ಪ್ರತಿ ಊರ ಹೆಸರುಗಳಲ್ಲಿ ಯಾರೋ ಅಡಗಿ ಕುಳಿತಂತೆ ಭಾಸವಾಗುವುದೇಕೋ? ನನ್ನ ತಾತನ ಊರಾದ ದಾವಣಗೆರೆ ತಾಲ್ಲೂಕಿನ “ಕುಕ್ವಾಡ’ ಹೋಲುವ “ಕುಪ್ವಾರ’ ಕಾಶ್ಮೀರದಲ್ಲೂ ಇರುವುದು ಬೆರಗಲ್ಲವೆ? ನಾನು ಆಡಿ ಬೆಳೆದ “ಕಂಪ್ಲಿ’ಯಲ್ಲಿ ಕಂಪಿಲ ರಾಯ ಅಡಗಿ ಕುಳಿತು – ನಾನು ಆಡಿದ್ದು ಬಯಲಲ್ಲೋ? ಕಂಪಿಲ ರಾಯನ ತೊಡೆಯ ಮೇಲೊ? ಎಂಬ ಗೊಂದಲದ ಬೆರಗು. 

ಕಲ್ಲಿನ ರಾಶಿಯೇ ಬಳ್ಳಾರಿಯೇ? ಸ್ಕಂದ ಪುರವೇ ಸಂಡೂರೇ? ಹರಪುಣ್ಯ ಹಳ್ಳಿಯೇ ಹರಪನಹಳ್ಳಿಯೇ!? ನಾರಾಯಣ ದೇವರ ಕೆರೆಯೇ ತುಂಗಭದ್ರಾ ಡ್ಯಾಮಿನಲ್ಲಿ ಮುಳುಗಿ ಅಳಿದುಳಿದ ಪಳೆಯುಳಿಕೆಗಳ ತಂದು ಗುಡ್ಡೆ ಹಾಕಿದ ಜಾಗದಲ್ಲಿ ಕ್ರಿಶ್ಚಿಯನ್ನರ ಮೇರಿಯಮ್ಮನೂ ನೆಲೆನಿಂತು- ಮರಿಯಮ್ಮನ ಹಳ್ಳಿಯೆ?

ನನ್ನ ತಾಯಿಯ ತವರು ಗುಂಜಿಗನೂರಿನ ಆ ಗುಂಜಿಗ ಯಾರು? ಅರಸೀಕೆರೆಯ ಈ ಅರಸಿ ಯಾರು? ಸಿರುಗುಪ್ಪವೋ ಸಿರಿಗುಪ್ಪೆಯೋ? ಕಾಂಚನಗಢವೋ ಕೆಂಚನಗುಡ್ಡವೋ? ಶ್ರೀಧರಗಡ್ಡ ಎಂಬುದು ಶ್ರೀಧರ ಗಢವಲ್ಲವೇ- ಎಂದು ಗಡ್ಡ ಕೆರೆದುದಷ್ಟೇ- ಅರ್ಥ ಹೊಳೆಯಲಿಲ್ಲ ! ಬಾಲ್ಯದ ನನ್ನೆಲ್ಲ ಗೊಂದಲಗಳಿಗೆ ಒಂದು ಪರಿಹಾರ ಇದ್ದುದೆಂದರೆ ಅದು ನನ್ನಪ್ಪನ ಬಳಿ.

“”ಮಗೂ ನೋಡು, ಕನ್ನಡದ ನೆಲವನ್ನ ದೂರದ ಮಹಾರಾಷ್ಟ್ರದಿಂದ ಬಂದು ಆಳಿದವರು ಕಟ್ಟಿದ ಕೋಟೆ ಕಾಲಾನಂತರದಲ್ಲಿ ಮುರಿದಿದೆಯಷ್ಟೇ. ಮುನ್ನ ಶತಕೋಟಿ ರಾಯರಾಳಿದ್ದರೂ ಈ ನೆಲಕ್ಕೆ ಅದರದೇ ಸ್ವಂತಿಕೆ ಇದೆ, ಸೊಗಡಿದೆ. ಅದು ಶತಶತಮಾನಗಳಿಂದ ಕಟ್ಟಿ ತಂದ ಭಾಷೆ ಬದುಕಿನ ಬುತ್ತಿ ಎಂದೂ ಹಳಸುವುದಿಲ್ಲ. ಹಾಗೆಂದೇ ಅವರ ಕಾಂಚನಗಢವನ್ನು ನಮ್ಮ ನೆಲದ ಭಾಷೆ “ಕೆಂಚನ ಗುಡ್ಡ’ ಎಂದು ದಾಖಲಿಸಿಕೊಂಡಿದೆ!” ಅಪ್ಪನ ಈ ಮಾತುಗಳಲ್ಲಿ ಗತ ಇತಿಹಾಸವನ್ನು ಅರಗಿಸಿಕೊಂಡು ಅರಳಿದ ಹೊಸ ಹಗಲಿನ ನಿರುಮ್ಮಳತೆ ಇತ್ತು. ವರ್ತಮಾನ ಇರಬೇಕಾದುದೇ ಹಾಗಲ್ಲವೆ? ಭೂತವನ್ನು ಜೀರ್ಣಿಸಿಕೊಂಡು ಭವಿಷ್ಯವನ್ನು ಕನಸುವ  ಹಾಗೆ?

Advertisement

ಊರೆಂದರೆ ಊರಷ್ಟೇ ಅಲ್ಲ- ಅದು ನಡೆಯದೇ ನಿಂತಂತೆ ಕಾಣುವ- ಕಾಲನ ಗಂಟೆ ಮುಳ್ಳು ಎಂದೆನಿಸುವುದು ಬೆರಗಲ್ಲವೆ? ನೆಲೆ ನಿಂತ ಊರಷ್ಟೇ ಅಲ್ಲ, ಹರಿವ ನೀರೂ ಆ ಕಾಲನ ಚಲನೆಯ ಮಾಪಕವೇ. ಒರತೆಯ ಜಿನುಗು, ಓಯಸಿಸ್‌ನ ಬಸಿ, ಚಿಕ್ಕ ಹರಿವಿನ ತೊರೆ, ಹರಿದು ಅಗಲವಾಗುವ ಹಳ್ಳ, ನಡೆಯುತ್ತ ಸಾವಿರ ಪಾದ ಪಡೆಯುವ ನದಿ- ಎಲ್ಲದರಲ್ಲೂ ಇರುವುದು ಅದೇ ನೀರು. ಆಕಾರವಿಲ್ಲದ ಬಣ್ಣವಿಲ್ಲದ ನೀರಿಗೂ ಆಯಾ ನೆಲದ ನಂಟು ಎಂದೇ ಪ್ರತಿ ಹರಿವಿಗೂ ಬೇರೆ ಬೇರೆ ರುಚಿ ಘಾಟು. ನೀರನ್ನು “ಗಂಗಮ್ಮ’ ಎಂದು ಪೂಜಿಸುವ ಜನ ಅದು ಹರಿವ ನೆಲವ ಆಧರಿಸಿ ಹೆಸರಿಟ್ಟರೆ? ಬಣ್ಣ ರುಚಿಯ ಬೆಡಗಿಗೆ ಹೆಸರ ಬಣ್ಣಿಸಿದರೆ? ಒಂದು ಭಾಷಿಕ ನೆಲದಲ್ಲಿ ಜನಿಸಿ ಭಿನ್ನ ಭಾಷಿಕ ಜನಪದವನ್ನೂ ಸಲಹುವ ಆ ಸಲಿಲ ಮಾತೆಗೆ ಎಲ್ಲೆಡೆಯೂ ಒಂದೇ ಹೆಸರು ಕೊಟ್ಟವರಾರು? ತುಂಗೆ ಭದ್ರೆ ಕೃಷ್ಣೆ ಕಾವೇರಿ ಮಹದಾಯಿ ಭೀಮೆ ಯಮುನೆ, ಅಷ್ಟೇ ಅಲ್ಲದೇ ದೇಶ-ದೇಶಗಳನ್ನೂ ಬೆಸೆಯುವ ಗಂಗೆ ಸಿಂಧೂ ಸಟ್ಲೆàಜ್‌ಗಳಿಗೆ ಹರಿವಿನ  ಆ ತುದಿಯಿಂದ ಈ ತುದಿಯ ವರೆಗೆ ಒಂದೇ ಹೆಸರಿಟ್ಟ ಆ ನಾಮಕರಣಿಯ ಸಮನ್ವಯ ಮನಸ್ಸಿಗೆ ನಮಿಸುವುದಲ್ಲವೇ ನನ್ನೀ ಬೆರಗು!

ಊರು, ಜನಪದ, ಹರಿವ ನೀರಷ್ಟೇ ಅಲ್ಲ, ಜನರ ಹೆಸರುಗಳೂ ನನ್ನ ತಿಳಿವಿಗೆ ನಿಲುಕದೇ ಗೊಂದಲಗೊಂಡಿದ್ದು ಮತ್ತೂಂದು ವಿಸ್ಮಯಕರ ಘಟನೆ. ಸರ್ಕಾರದ ಆರೋಗ್ಯ ಯೋಜನೆಗಾಗಿ ಜನಗಣತಿ ಮಾಡಿಸುತ್ತಿದ್ದ ಅಪ್ಪನೊಂದಿಗೆ ನಾನೂ ಆ ಹೊತ್ತು ಒಂದು ದಮನಿತರ ಕೇರಿ ಹೊಕ್ಕಿದ್ದೆ. ಒಂದು ಮನೆಯಲ್ಲಿ ವಾಸಿಸುತ್ತಿದ್ದವರ ಹೆಸರುಗಳು ಹೀಗಿದ್ದವು- ರಾಘವೇಂದ್ರ ಸ್ವಾಮಿ, ಪಕ್ಕೀರಪ್ಪ, ಮೇರಿಯಮ್ಮ ! ನಾನು ಒಂದು ಕ್ಷಣ ಕಂಗಾಲಾಗಿದ್ದೆ. ಇದು ಹೇಗೆ ಸಾಧ್ಯ? ಸಾಂಸ್ಕೃತಿಕ ಭಿನ್ನ ಪಥಗಳೆಲ್ಲ ಇಲ್ಲಿ ಒಂದೇ ಧಾರೆಯಾಗಿ ಅವಿರ್ಭವಿಸಿವೆಯಲ್ಲ !

ಮತ್ತೆ ಗೊಂದಲಕ್ಕೆ ಪರಿಹಾರ ಅಪ್ಪನೇ ಕೊಡಬೇಕಾಯ್ತು. ನೋಡಯ್ನಾ, ಇಲ್ಲಿ ಒಂದೇ ಮನೆಯಲ್ಲಿ ಸನಾತನತೆ, ಮಧ್ಯಪ್ರಾಚ್ಯ ಹಾಗೂ ಐರೋಪ್ಯ ಸೇರಿಕೊಂಡಿದೆ ಎಂದಲ್ಲವೇ ನಿನ್ನ ಗೊಂದಲ. ಆದರೆ, ಈ ಮನೆಯವರು ಈ ನೆಲದವರೇ. ಅವರಿಗೆ ಊರ ಮನೆಗಳೊಳಗೆ ಪ್ರವೇಶಾವಕಾಶ ಇಲ್ಲದ್ದರಿಂದ ಅಕ್ಕಪಕ್ಕದ ಮನೆ ಹೊಕ್ಕಿದ್ದಾರಷ್ಟೇ. ತಮ್ಮ ದೇವರು ಕಪ್ಪು ಎಂದು ಒಪ್ಪಿ ಆತನಿಗೆ ನೀಲಮೇಘಶ್ಯಾಮ ಎಂದು ಹೆಸರಿಸಿದ ಜನ ಇವರ ಕಪ್ಪು ಮಗುವಿಗೆ ಕರಿಯಪ್ಪ ಎಂದು ಕರೆದಿದ್ದರಲ್ಲ , ಆ  ಯಜಮಾನಿಕೆಗೆ ಈ ಸಮುದಾಯ ತೋರಿದ ಸಾಂಸ್ಕೃತಿಕ ಪ್ರತಿರೋಧ ಇದು! ಆಗ ನನಗರ್ಥವಾಗಿದ್ದು- ಹೆಸರೆಂದರೆ ಹೆಸರಷ್ಟೇ ಅಲ್ಲ ಎಂದು.

ಹೆಸರುಗಳೇ ಬಿಸಿಯೇರಿಸಿ ಬೆಕ್ಕಸ ಬೆರಗಾಗಿಸುತ್ತಿದ್ದ ಆ ದಿನಗಳಲ್ಲೇ  ಹೆಸರರಿಯದ ಏನೋ ಹುಕಿ ಹೊಕ್ಕಿದ್ದು ನನ್ನೊಳಗೆ. ಛಂದ ಪದ್ಯ ಬರೆಯುತ್ತಿದ್ದ ಆಕೆ ಪರಿಚಯವಾಗಿದ್ದು, ಆವರೆಗೆ ಅರ್ಥವಾಗಿಲ್ಲದ ಹಳೆಯ ಪ್ರತಿಮೆ ಹೊಸ ರೂಪಕಗಳು ಅರ್ಥವಾಗದೆಯೂ ಆಪ್ತವಾಗಿದ್ದು ಆಗ. ನಿಬಿಡ ಕಾಡಿನಂತಹ ದಟ್ಟ  ಕತೆ, ನಿಗೂಢ ಕವಿತೆ, ಲಾಲಿತ್ಯದ ಪ್ರಬಂಧಗಳೆಲ್ಲ ಹೃನ್ಮನ ಸೆಳೆದ ಆ ಹೊತ್ತು- ನಾನು ಅವಳಿಗಾಗಿ ಪದ್ಯ ಬರೆಯುತ್ತಿದ್ದೆ. 

ಅವಳ್ಳೋ ತನ್ನ ಇನಿಯನಿಗಾಗಿ ಬರೆದ ಕವಿತೆಯ ಸಾಲು ತೋರಿದ್ದಳು!
ನೀನೆಂಬ ಸಂಜೆ ಮಳೆಗಿನ್ಯಾವ ಹೆಸರಿಡಲಿ?
ಓದುತ್ತಿದ್ದಂತೇ ಧಮನಿಗಳಲ್ಲಿ ಒತ್ತಡ ಹೆಚ್ಚಿ ನನ್ನಲ್ಲಿ ಹೊಮ್ಮಿದ ಆ ಹಲವು ಭಾವಗಳಿಗೆ- ನಾನಾದರೂ ಏನೆಂದು ಹೆಸರಿಡಲಿ?

ಆನಂದ ಋಗ್ವೇದಿ

Advertisement

Udayavani is now on Telegram. Click here to join our channel and stay updated with the latest news.

Next