Advertisement

ಕಷ್ಟಗಳು ಬಂದಾಗ ಏನು ಮಾಡುತ್ತೀರಿ?

02:53 PM Dec 17, 2018 | |

ಪ್ರತಿಯೊಂದು ಸಮಸ್ಯೆಗೆ ತನ್ನದೇ ಆದ ಪರಿಹಾರಗಳಿವೆ. ನಾವು ಸಮಸ್ಯೆಯ ಸುಳಿಗೆ ಸಿಲುಕಿದಾಗ ಅಥವಾ ಸಮಸ್ಯೆ ನಮ್ಮತ್ತ ಬಂದಾಗ ನಾವು ಅವುಗಳನ್ನು ಯಾವ ರೀತಿ ಪರಿಗಣಿಸುತ್ತೇವೆ ಎಂಬುದರ ಆಧಾರದಲ್ಲಿ ಸಮಸ್ಯೆಯ ತೀವ್ರತೆ ಇರುತ್ತದೆ. ಕಷ್ಟಗಳು ಎಲ್ಲ ಕಡೆಯೂ ಇರುತ್ತವೆ. ಒಳ್ಳೆಯದನ್ನು ಸಾಧಿಸುವಾಗ ಇರುವ ಸವಾಲುಗಳು ನಮ್ಮನ್ನು ಉತ್ತಮದೆಡೆಗೆ ಸಾಗಿಸುತ್ತದೆ. ಕಷ್ಟಗಳಿಂದಲೇ ಜೀವನ ಹೊರತು; ಜೀವನವೇ ಕಷ್ಟಕರ ಅಲ್ಲ.

Advertisement

ಒಂದು ಹೆಣ್ಣು ಮಗಳು ತನ್ನ ಜೀವನ ಶೋಚನೀಯವಾಗಿದೆ, ಅದನ್ನು ಹೇಗೆ ಮುಂದುವರಿಸಬೇಕೆಂದು ತೋಚುತ್ತಿಲ್ಲ, ನನಗೆ ಜೀವನವೇ ಬೇಡ ಎಂದಾಗಿದೆ. ಒಂದು ಸಮಸ್ಯೆ ಮುಗಿಯುವಷ್ಟರಲ್ಲಿ ಇನ್ನೊಂದು ಸಮಸ್ಯೆ ಉದ್ಭವವಾಗುತ್ತಿದೆ ಎಂದು ತಂದೆಯ ಬಳಿ ಕಷ್ಟವನ್ನು ತೋಡಿಕೊಂಡಳು.

ಆಕೆಯ ತಂದೆ ಬಾಣಸಿನಾಗಿದ್ದ. ಮಗಳಿಗೆ ಜೀವನದ ಮೇಲೆ ಕಂಡುಬಂದ ಅಸಹಾಯಕತೆಯನ್ನು ವಿವರಿಸಿ, ಅವಳಿಗೆ ಮನದಟ್ಟು ಮಾಡಿಕೊಡಲು ನಿರ್ಧರಿಸಿ, ಮಗಳನ್ನು ಅಡುಗೆ ಮನೆಗೆ ಕರೆತಂದ. ಬಳಿಕ ಮಗಳ ಸಮ್ಮುಖದಲ್ಲಿ ಮೂರು ಮಡಕೆಗಳಲ್ಲಿ ನೀರು ತುಂಬಿಸಿ ಬೆಂಕಿಯ ಮೇಲೆ ಇಟ್ಟ. ಮಡಕೆಯಲ್ಲಿ ನೀರು ಕುದಿಯಲು ಪ್ರಾರಂಭವಾದಾಗ ಒಂದು ಮಡಕೆಗೆ ಆಲೂಗಡ್ಡೆ, ಇನ್ನೊಂದಕ್ಕೆ ಮೊಟ್ಟೆ ಹಾಗೂ ಮೂರನೇ ಮಡಕೆಗೆ ಕಾಫಿ ಬೀಜಗಳನ್ನು ಹಾಕಲಾಯಿತು. ತಂದೆ ತನ್ನ ಮಗಳಿಗೆ ಏನೂ ಹೇಳದೇ ಇಪ್ಪತ್ತು ನಿಮಿಷಗಳ ಕಾಲ ಅವುಗಳನ್ನು ಬೇಯಲು ಬಿಟ್ಟ. ಮಗಳಿಗೆ ತಂದೆಯ ಮೌನ ಒಂದು ಕಡೆ ಚಿಂತೆ ಬರಿಸಿದರೆ, ಇನ್ನು ಕಾದು ಕಾದು ಸುಸ್ತಾಗಿ ಮನದಲ್ಲೇ ಕುಪಿತಗೊಂಡಿದ್ದಳು. ಮತ್ತೊಂದೆಡೆ ತಂದೆ ಮಾಡುತ್ತಿರುವ ಕೆಲಸದ ಕುರಿತು ಮಗಳಲ್ಲಿ ಕುತೂಹಲ ಮುಗಿಲು ಮುಟ್ಟಿತು.

20 ನಿಮಿಷಗಳ ಬಳಿಕ ಆ ಮೂರು ಮಡಕೆಗೆ ಹಾಕಲಾಗಿದ್ದ ಬೆಂಕಿಯನ್ನು ಆರಿಸಲಾಯಿತು. ಮೊದಲ ಮಡಕೆಯಿಂದ ಆಲೂಗಡ್ಡೆಯನ್ನು ತೆಗೆದು ಒಂದು ಬಟ್ಟಲಲ್ಲಿ ಇರಿಸಲಾಯಿತು. ಬಳಿಕ ಮೊಟ್ಟೆಯನ್ನು ತೆಗೆದು ಇನ್ನೊಂದು ಬಟ್ಟಲಿಗೆ ಹಾಕಲಾಯಿತು. ಮೂರನೇ ಮಡಕೆಯಲ್ಲಿ ಹಾಕಲಾದ ಕಾಫಿ ಬೀಜ ಗಳನ್ನು ಒಂದು ಕಪ್‌ಗೆ ಹಾಕಲಾಯಿತು. ಈ ವಿದ್ಯಮಾನವನ್ನು ಮಗಳು ತದೇಕಚಿತ್ತದಿಂದ ನೋಡುತ್ತಿದ್ದಳು. ಈ ವೇಳೆ ತಂದೆ ನಿನಗೆ ಇಲ್ಲಿ ಏನು ಕಾಣಿಸುತ್ತಿದೆ ? ಎಂದು ಮಗಳಲ್ಲಿ ಪ್ರಶ್ನಿಸುತ್ತಾನೆ.

ಈ ವೇಳೆ ಮಗಳು ಸಹಜವಾಗಿ ಆಲೂಗಡ್ಡೆ, ಮೊಟ್ಟೆ ಮತ್ತು ಕಾಫಿಯನ್ನು ನೋಡುತ್ತಿದ್ದೇನೆ ಎಂದು ಆತುರದಿಂದಲೇ ಉತ್ತರವನ್ನು ನೀಡುತ್ತಾಳೆ. ‘ಹತ್ತಿರದಿಂದ ನೋಡು’ ಎಂದಾಗ ಮಗಳು ಆಲೂಗಡ್ಡೆ ಸನಿಹ ಹೋಗಿ ನೋಡುತ್ತಾಳೆ. ಈಗ ಅವನ್ನು ಮುಟ್ಟಿನೋಡು ಎನ್ನುತ್ತಾನೆ. ಮಗಳು ಸ್ಪರ್ಶಿಸಿ ‘ಮೃದುವಾಗಿದೆ ಅಪ್ಪ’ ಎನ್ನುತ್ತಾಳೆ. ಅನಂತರ ಮೊಟ್ಟೆಯನ್ನು ನೋಡಿ, ಅದರ ಶೆಲ್‌ (ಹೊರ ಪದರ) ತೆಗೆಯಲು ತಂದೆ ಹೇಳುತ್ತಾನೆ. ಈ ಸಂದರ್ಭ ಒಳ ತಿರುಳು ಆಕೆಗೆ ಸಿಗುತ್ತದೆ. ಇನ್ನು ಕೊನೆಯ ಕಪ್‌ ಬಳಿ ಆಕೆ ತೆರಳಿದಾಗ ಕಾಫಿಯ ಆ ಶ್ರೀಮಂತ ಪರಿಮಳ ಆಕೆಯನ್ನು ಆವರಿಸುತ್ತದೆ.

Advertisement

‘ಅಪ್ಪಾ ಇದೇನು’ ಎಂದು ತಂದೆಯನ್ನು ಅವಳು ಕುತೂಹಲದಿಂದ ಪ್ರಶ್ನಿಸುತ್ತಾಳೆ. ತಂದೆ ಪ್ರೀತಿಯಿಂದ ಮಗಳ ಹತ್ತಿರ ಬಂದು ಎರಡೂ ಕೈಯಿಂದ ಅವಳ ಕೈ ಹಿಡಿದು ಉತ್ತರಿಸುತ್ತಾನೆ ‘ಆಲೂಗಡ್ಡೆ, ಮೊಟ್ಟೆ ಹಾಗೂ ಕಾಫಿ ಬೀಜಗಳಿಗೆ ಸಮಾನ ರೀತಿಯಲ್ಲಿ ಬಿಸಿಯಾಗಿ ಕುದಿಯಿತು. ಆದರೆ ಇಲ್ಲಿ ಈ ಮೂರು ವಸ್ತುಗಳು ಮೂರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯೆ ನೀಡಿವೆ. ನೀರಿಗೆ ಹಾಕುವ ಮೊದಲು ಆಲೂಗಡ್ಡೆ ಬಲಿಷ್ಠವಾಗಿತು.  ಆದರೆ ಬಿಸಿ ನೀರು ಕುದಿಯಲು ಪ್ರಾರಂಭವಾದಾಗ ಮೃದುತ್ವದ ಕಡೆಗೆ ಸಾಗಿತು. ಇನ್ನು ಮೊಟ್ಟೆಯ ಮೇಲ್ಪದರ ಮೊಟ್ಟೆಯ ಒಳಬಾಗವನ್ನು ಬಿಸಿ ನೀರಿಗೆ ಹಾಕುವ ತನಕ ರಕ್ಷಿಸುತ್ತಾ ಬಂತು, ಆದರೆ ಬಳಿಕ ನೀರಿನ ಬಿಸಿ ಏರುತ್ತಾ ಹೋದಾಗ ಮೊಟ್ಟೆಯ ಒಳಭಾಗ ಮೃದುವಾಯಿತು.

ಕಾಫಿ ಬೀಜಕ್ಕೂ ಸಮಾನ ಬಿಸಿಯುಣಿಸಲಾಯಿತು. ಒಂದೇ ನೀರನ್ನು ಈ ಮೂರು ಮಡಕೆಗಳಿಗೆ ಬಳಸಲಾಯಿತು. ಆದರೆ ಕಾಫಿ ಬೀಜ ತನ್ನ ನೀರನ್ನು ತಾನೇ ಬದಲಿಸಿಕೊಂಡಿತು. ಈ ಮೂಲಕ ಉತ್ತಮ ಸುವಾಸನೆ ಬೀರಳು ಸಾಧ್ಯವಾಯಿತು ಎಂದು ತಂದೆ ಭಾವುಕತೆಯ ಉತ್ತರ ನೀಡಿ ಮಗಳ ಕುತೂಹಲವನ್ನು ತಣಿಸುತ್ತಾನೆ.

ಇಲ್ಲಿ ನಾವು ಯಾರಾಗಬೇಕು ಎಂದು ಯೋಚಿಸಬೇಕಾಗಿದೆ. ತೊಂದರೆಗಳು ನಮ್ಮ ಬಾಗಿಲ ಬಳಿ ಬಂದಾಗ ನಾವು ಅವುಗಳಿಗೆ ಹೇಗೆ ಪ್ರತಿಕ್ರಿಯೆ ನೀಡುತ್ತೇವೆ ಎಂಬುದರ ಮೇಲೆ ಮುಂದಿನ ಜೀವನ ನಿರ್ಧಾರವಾಗುತ್ತದೆ. ಸಮಸ್ಯೆಗಳು ಬಂದಾಗ ನಮ್ಮೊಳಗೆ ಏನಾಗುತ್ತದೆ ಎಂಬುದನ್ನು ಅರಿಯಬೇಕಾಗಿದೆ. ನಾವಿಲ್ಲಿ ಆಲೂಗಡೆ ಆಗಬೇಕಾ, ಮೊಟ್ಟೆಯ ಪಾತ್ರ ವಹಿಸಬೇಕೇ? ಅಥವಾ ಕಾಫಿ ಬೀಜದ ಜಾಗವನ್ನು ಆಯ್ಕೆ ಮಾಡಬೇಕಾ ಎಂಬುದು ನಮಗೆ ಬಿಟ್ಟದ್ದು.

ಕಾರ್ತಿಕ್‌ ಅಮೈ

Advertisement

Udayavani is now on Telegram. Click here to join our channel and stay updated with the latest news.

Next