Advertisement

ಧರ್ಮಸ್ಥಳ ಭೇಟಿ ವೇಳೆ ಹೆಲಿಕಾಪ್ಟರ್‌ನಲ್ಲಿ  ಮೋದಿ ಹೇಳಿದ್ದೇನು?

08:56 AM Oct 31, 2017 | Team Udayavani |

ಮಂಗಳೂರು: “ಪ್ರಧಾನಮಂತ್ರಿಯ ಜನಪ್ರಿಯ ಯೋಜನೆಗಳು ಕರ್ನಾಟಕದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಪಕ್ಷದ ಪ್ರಮುಖರು ಹೆಚ್ಚಿನ ಜವಾಬ್ದಾರಿಗಳನ್ನು ನಿರ್ವಹಿಸಬೇಕು’. ಧರ್ಮಸ್ಥಳಕ್ಕೆ ರವಿವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸರಕಾರದ ಯೋಜನೆಗಳು ನಾಡಿನ ಜನತೆಗೆ ಎಷ್ಟರ ಮಟ್ಟಿಗೆ ಸಮರ್ಪಕವಾಗಿ ತಲುಪುತ್ತಿವೆ ಎಂಬ ಬಗ್ಗೆ ವ್ಯಕ್ತಪಡಿಸಿದ ಕಳಕಳಿಯ ಮಾತಿದು. ಪ್ರಧಾನಿ ಮೋದಿ ಅವರು ಜಿಲ್ಲೆಗೆ ಭೇಟಿ ನೀಡಿದಾಗ ಅವರ ಜತೆಗೆ ಕೇಂದ್ರ ಸಚಿವರಾದ ಸದಾನಂದ ಗೌಡರು ಮಂಗಳೂರಿನಿಂದ ಧರ್ಮಸ್ಥಳಕ್ಕೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದ್ದರು. ಈ ವೇಳೆ ಮೋದಿ ಅವರು ಸದಾನಂದ ಗೌಡರ ಜತೆಗೆ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಬಿಜೆಪಿ ಪಕ್ಷದೊಳಗಿನ ರಾಜಕೀಯ ಬೆಳವಣಿಗೆಗಳ ಕುರಿತಂತೆಯೂ ಚರ್ಚಿಸಿದ್ದಾರೆ. 

Advertisement

ಮೋದಿಯವರ ಹೆಲಿಕಾಪ್ಟರ್‌ ಮಂಗಳೂರಿ ನಿಂದ ಧರ್ಮಸ್ಥಳ ತಲುಪುವುದಕ್ಕೆ ಸುಮಾರು 20 ನಿಮಿಷ ಹಾಗೂ ಅಲ್ಲಿಂದ ಮತ್ತೆ ಮಂಗಳೂರಿಗೆ ವಾಪಸ್‌ ಬರುವುದಕ್ಕೂ ಅಷ್ಟೇ ಹೊತ್ತು ತೆಗೆದು ಕೊಂಡಿದೆ. ಈ 40 ನಿಮಿಷದ ಅವಧಿಯಲ್ಲಿ ಮೋದಿ ಜತೆಗಿನ ಮಾತುಕತೆಯ ಕುರಿತಂತೆ “ಉದಯವಾಣಿ’ಯ ಜತೆಗೆ ಸದಾನಂದ ಗೌಡ ಅವರು ಮಾಹಿತಿ ಹಂಚಿ ಕೊಂಡಿದ್ದಾರೆ. ಅವರು ಹೇಳುವಂತೆ, “ಕೇಂದ್ರ ಸರಕಾರ ಕೈಗೊಂಡ ಹತ್ತು-ಹಲವು ಯೋಜನೆಗಳ ಅನುಷ್ಠಾನದ ಸ್ಥಿತಿ-ಗತಿ ಹಾಗೂ ಕರ್ನಾಟಕ ದಲ್ಲಿ ಇವುಗಳ ಜಾರಿಗೆ ಉಂಟಾಗುವ ಎಡರು- ತೊಡರು ಗಳ ಬಗ್ಗೆ ಮುಖ್ಯವಾಗಿ ಮೋದಿ ಮಾತ ನಾಡಿ ದ್ದಾರೆ. ಯೋಜನೆ ಅನುಷ್ಠಾನ ಹಾಗೂ ಸಾಮಾನ್ಯ ನಾಗರಿಕರಿಗೂ ಕೇಂದ್ರ ಸರಕಾರದ ಯೋಜನೆಗಳು ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಬಿಜೆಪಿಯ ಕರ್ನಾಟಕದ  ಪ್ರಮುಖರು ಸಕ್ರಿಯವಾಗಿ ತಮ್ಮನ್ನು ತೊಡಗಿಸಿ ಕೊಂಡರೆ ಭವ್ಯ ಭಾರತ ಸಂಕಲ್ಪ ಈಡೇರಲು ಸಾಧ್ಯ’ ಎಂಬುದಾಗಿ ಹೇಳಿದ್ದರು.

“ಮಂಗಳೂರು ಕುರಿತಂತೆ ಹಾಗೂ ಇಲ್ಲಿನ ವಿಶೇಷತೆಗಳ ಬಗ್ಗೆ ನಾನು ಪ್ರಧಾನಿ ಜತೆಗೆ ಮಾಹಿತಿ ಹಂಚಿಕೊಂಡಿದ್ದೇನೆ. ಜತೆಗೆ ರಾಜಕೀಯ ಹಾಗೂ ಇತರ ಕೆಲವು ವಿಚಾರಗಳನ್ನು ಪ್ರಧಾನಿಯವರು ಬಯಸಿದ್ದರು. ಅವುಗಳ ಬಗ್ಗೆ ನಾನು ಹಾಗೂ ನನ್ನ ಜತೆಗಿದ್ದ ಕೇಂದ್ರ ಸಚಿವರಾದ ಅನಂತ್‌ ಕುಮಾರ್‌ ಜತೆಯಾಗಿ ಮಾಹಿತಿ ನೀಡಿದ್ದೇವೆ’ ಎಂದು ಸದಾನಂದ ಗೌಡರು ತಿಳಿಸಿದರು. “ಮೋದಿ ಅವರು ನಮ್ಮೊಂದಿಗೆ ಬೆಂಗಳೂರಿಗೆ ವಿಮಾನದ ಮೂಲಕ ಪ್ರಯಾಣಿಸಿದ ವೇಳೆಯೂ ಬಹಳಷ್ಟು ವಿಚಾರಗಳ ಬಗ್ಗೆ ಮಾತ ನಾಡಿ ದ್ದಾರೆ. ಆದರೆ ಅವು ಗೌಪ್ಯ ವಿಚಾರ ಗಳಾಗಿರುವ ಕಾರಣ ಅವುಗಳನ್ನು ಮಾಧ್ಯಮದ ಜತೆಗೆ ಹಂಚಿ ಕೊಳ್ಳುವುದು ಕಷ್ಟ. ಅಲ್ಲದೆ ಪ್ರಧಾನಿ ಪ್ರಯಾಣದ ಪ್ರತಿ ವಿಷಯವನ್ನು ಬಹಿರಂಗಪಡಿಸುವುದು ಕೂಡ ಸರಿಯಾಗುವುದಿಲ್ಲ’ ಎಂದರು.

ಸಾಮಾಜಿಕ ಜಾಲತಾಣದತ್ತ ಕಣ್ಣು
ಮೋದಿ ಅವರು ಪ್ರಯಾಣದ ವೇಳೆ ವಿಮಾನ ದಲ್ಲಿ ಕುಳಿತು ಮೊಬೈಲ್‌ನಲ್ಲಿ ಟ್ವಿಟರ್‌ನಂಥ ಸಾಮಾಜಿಕ ಜಾಲ ತಾಣಗಳ ಕಡೆಗೂ ಕಣ್ಣಾಡಿಸುತ್ತಿದ್ದರು. ವಿಶೇಷ ಅಂದರೆ ಮೋದಿ ಅವರ ಟ್ವೀಟರ್‌ ಅಕೌಂಟ್‌ನಲ್ಲಿಯೂ ತಮ್ಮ ಶ್ರೀ ಕ್ಷೇತ್ರ ಧರ್ಮಸ್ಥಳದ ಭೇಟಿ ಹಾಗೂ ಉಜಿರೆಯಲ್ಲಿ ನಡೆದಿದ್ದ ಕಾರ್ಯಕ್ರಮದ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸುವ ಪೋಸ್ಟ್‌ ಮಾಡಿದ್ದರು.

ತುಳು ಭಾಷೆಗೆ ಪ್ರಾತಿನಿಧ್ಯದ ಭರವಸೆ
ಪ್ರಧಾನಿ ಭೇಟಿಯ ಕುರಿತಂತೆ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು “ಉದಯವಾಣಿ’ ಜತೆಗೆ ಮಾತನಾಡಿ, “ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಅವರಿಗೆ ಉಳುಮೆ ಸಂದರ್ಭ ಎತ್ತುಗಳ ಹೆಗಲ ಮೇಲೆ ಇಡುವ ನೊಗದ ಮಾದರಿ ಹಾಗೂ ಕಂಬಳದ ಚಿತ್ರವನ್ನು ನಾನು ಪ್ರದಾನ ಮಾಡಿದ್ದೆ. ಈ ವೇಳೆ ನಾನು ಹಾಗೂ ಡಿ.ವಿ.ಸದಾನಂದ ಗೌಡ ಅವರು ಕಂಬಳದ ವಿಚಾರ ವಿವರಿಸಿದ್ದೇವು. ಜತೆಗೆ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಎಂದು ತಿಳಿಸಿದೆವು. ಸಭಾ ವೇದಿಕೆಯಲ್ಲಿ ನಮ್ಮ ಜತೆಗೆ ಪ್ರತಿಕ್ರಿಯಿಸಿದ್ದ ಪ್ರಧಾನಿಯವರು, ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಸೇರ್ಪಡೆ ಬಗ್ಗೆ ಹೊಸದಿಲ್ಲಿಯಲ್ಲಿ ವಿವರ ನೀಡಿ ಎಂದು ಸೂಚಿಸಿದ್ದಾರೆ’ ಎಂದರು.

Advertisement

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next