Advertisement

ಬಂಧನ ಭೀತಿ ಬೆನ್ನಲ್ಲೇ ಡಿಕೆ ಶಿವಕುಮಾರ್ ದಿಢೀರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು?

10:03 AM Aug 31, 2019 | Team Udayavani |

ಬೆಂಗಳೂರು:ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ, ನಾಯಕನಾಗಿ, ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಗುಜರಾತ್ ಶಾಸಕರನ್ನು, ಮಹಾರಾಷ್ಟ್ರ ಶಾಸಕರನ್ನು ಕಾಪಾಡುವ ಜವಾಬ್ದಾರಿ ನನ್ನ ಮೇಲಿತ್ತು. ಪಕ್ಷ ನೀಡಿದ್ದ ಜವಾಬ್ದಾರಿಯನ್ನು ನಾನು ನಿರ್ವಹಿಸಿದ್ದೇನು ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಹೇಳಿದರು.

Advertisement

ಶುಕ್ರವಾರ ಸದಾಶಿವನಗರದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಿಷ್ಟು:

ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ನನ್ನ, ನನ್ನ ಕುಟುಂಬ, ನೆಂಟರು, ಸ್ನೇಹಿತರ ಮೇಲೆ ದಾಳಿ ನಡೆಸಿದ್ದಾರೆ. ಅದೇ ರೀತಿ ಕಾರ್ಯಕರ್ತರ ಮೇಲೆ ದಾಳಿ ನಡೆಸಿರುವುದನ್ನು ಗಮನಿಸಿದ್ದೀರಿ. ಇದೆಲ್ಲವೂ ಬೇನಾಮಿ ಆಸ್ತಿ ಎಂಬ ಸ್ಥಿತಿ ನಿರ್ಮಾಣ ಮಾಡಲು ಹೊರಟಿದ್ದಾರೆ. ನಾನು ಈ ಬಗ್ಗೆ ಕಾನೂನು ಹೋರಾಟ ಆರಂಭಿಸಿದ್ದೇನೆ. ಪ್ರಕರಣ ಕೋರ್ಟ್ ಕಟಕಟೆಯಲ್ಲಿದೆ.

ದಾಳಿ ವೇಳೆ ಸಿಕ್ಕಿದ್ದು ನಮ್ಮದೇ ಹಣ:

ನನ್ನ ಮೇಲೆ ಟಾರ್ಗೆಟ್ ಮಾಡಿ ದಾಳಿ ನಡೆಸಿದ್ದಾರೆ. ಹಲವು ಬಾರಿ ನನಗೆ ನೋಟಿಸ್ ಬಂದಿದೆ. ಪ್ರಕರಣದ ಬಗ್ಗೆ ಅವರದ್ದೇ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದಾರೆ. ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದವನು. ನಾನು ಬಡ ಕುಟುಂಬದಿಂದ ಬಂದವನು ಅಂತ ಹೇಳಲ್ಲ. ನನ್ನ ಮನೆಯಲ್ಲಿ, ಸ್ನೇಹಿತರ ಮನೆಯಲ್ಲಿ ಸಿಕ್ಕಿದ್ದು ನಮ್ಮದೇ ಹಣ. ಆದಾಯ ತೆರಿಗೆ ಇಲಾಖೆಗೆ ದಾಖಲೆ ಸಲ್ಲಿಸಿದ್ದೇವೆ.

Advertisement

ನಾನು ಕಾನೂನಿಗೆ ಗೌರವ ಕೊಡುವ ಶಾಸಕನಾಗಿದ್ದೇನೆ. ನ್ಯಾಯಾಂಗ, ಕಾನೂನಿನ ಮೇಲೆ ನನಗೆ ನಂಬಿಕೆ ಇದೆ. 84-85 ವರ್ಷದ ವರ್ಷದ ತಾಯಿಗೆ ಒಬ್ಬ ಸಂಸದ ಮಗನಿದ್ದಾನೆ, ಒಬ್ಬ ಮಗ ಶಾಸಕನಾಗಿದ್ದಾನೆ. ನಮ್ಮ ತಾಯಿಯ ಎಲ್ಲಾ ಆಸ್ತಿ ಬೇನಾಮಿ ಎಂದು ತೀರ್ಮಾನ ಮಾಡಿದ್ದಾರೆ. ಇದರ ವಿರುದ್ಧ ನಾನು ನ್ಯಾಯಾಲಯಕ್ಕೂ ಹೋಗಿದ್ದೇನೆ. ಹೈಕೋರ್ಟ್ ನಿನ್ನೆ ನನ್ನ ಅರ್ಜಿಯನ್ನು ವಜಾ ಮಾಡಿದೆ. ಇದರ ಬಗ್ಗೆ ಮೇಲ್ಮನವಿ ಸಲ್ಲಿಸುವುದಾಗಿಯೂ ಹೇಳಿದ್ದೇನೆ.

ನಮ್ಮ ತಂದೆಯ ನಿಧನದ ನಂತರ ನನ್ನ ತಾಯಿ ಮಕ್ಕಳ ಮೇಲೆ ಅವಲಂಬಿತರಾಗಿದ್ದಾರೆ. ತಾಯಿ ತನ್ನ ಮಕ್ಕಳನ್ನು ನಂಬಬೇಕಾ? ಬೇರೆಯವರನ್ನು ನಂಬಬೇಕಾ? ನ್ಯಾಯವಾಗಿ ಸಂಪಾದಿಸಿದ ಆಸ್ತಿಯನ್ನು ಬೇನಾಮಿ ಎನ್ನುತ್ತಾರೆ ಎಂದು ಆರೋಪಿಸಿದರು.

ನಾನೇನು ಕೊಲೆ ಮಾಡಿಲ್ಲ, ಲೂಟಿ ಮಾಡಿಲ್ಲ. ಪ್ರಾಮಾಣಿಕವಾಗ ದುಡಿದಿದ್ದೇನೆ. ನಮ್ಮ ಸ್ನೇಹಿತರ ಮನೆ, ಕುಟುಂಬಿಕರ ಮನೆಯಲ್ಲಿ ಸಿಕ್ಕಿದ ಹಣ ನಮ್ಮದೇ ಅಂತ ಹೇಳಿದ್ದೇವೆ, ಬೇರೆಯವರದ್ದು ಅಂತ ಹೇಳಿಲ್ಲ. ಅದಕ್ಕೆ ಆದಾಯ ತೆರಿಗೆ ಕೂಡಾ ಕಟ್ಟಿದ್ದೇವೆ. ಆದರೂ ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ನಾನೀಗ ಕಾನೂನು ಚೌಕಟ್ಟು ಹಾಗೂ ರಾಜಕೀಯವಾಗಿ ಎಲ್ಲವನ್ನೂ ಎದುರಿಸಬೇಕಾಗಿದೆ ಎಂದರು.

ಗೌಪ್ಯ ವಿಚಾರಗಳ ಬಗ್ಗೆ ನಾನು ಸದ್ಯಕ್ಕೆ ಮಾತನಾಡುವುದಿಲ್ಲ. ಏನೇ ಇದ್ದರೂ ಕಾನೂನು ರೀತಿ ನಡೆದುಕೊಳ್ಳುತ್ತೇನೆ. ಎಲ್ಲ ರೀತಿಯಿಂದಲೂ ನನಗೆ ಚಿತ್ರಹಿಂಸೆ ಅನುಭವಿಸಿದ್ದೇನೆ. ನಾನು ಇ.ಡಿ.ವಿಚಾರಣೆಗೆ ಹಾಜರಾಗುತ್ತೇನೆ. ನಾನು ಹೆದರಿಕೊಂಡು ಓಡಿಹೋಗುವ ಕೆಂಪೇಗೌಡರ ಮಗ ಅಲ್ಲ. ಕಾನೂನು ರೀತಿಯಲ್ಲಿ ರಕ್ಷಣೆ ಮಾಡಿಕೊಳ್ಳಲು ತಯಾರಿ ನಡೆಸಿದ್ದೇನೆ. ನನ್ನ, ನನ್ನ ಕುಟುಂಬ, ನನ್ನ ಪಕ್ಷದ ತೇಜೋವಧೆ ಮಾಡುವ ಕೆಲಸ ಉತ್ತಮವಾಗಿ ನಡೆಯುತ್ತಿದೆ. ಆದರೆ ಇಂದು ಒಂದು ಗಂಟೆಗೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಲ್ಲ, ಆದರೆ ಇಂದೇ ಇಡಿ ವಿಚಾರಣೆಗೆ ಹಾಜರಾಗುತ್ತೇನೆ.

Advertisement

Udayavani is now on Telegram. Click here to join our channel and stay updated with the latest news.

Next