Advertisement
ಹೃದಯಾಘಾತ ಮತ್ತು ಹೃದಯ ಸ್ತಂಭನ: ವ್ಯತ್ಯಾಸವೇನು?
Related Articles
Advertisement
ಹಠಾತ್ ಹೃದಯ ಸ್ತಂಭನವು ಹೃದಯಾಘಾತ ಸಂಭವಿಸದೆಯೂ ಉಂಟಾಗಬಹುದು. ಹೃದಯದ ಇಲೆಕ್ಟ್ರಿಕಲ್ ವ್ಯವಸ್ಥೆಯು ಅಸ್ಥಿರಗೊಳ್ಳುವ ಇತರ ಕೆಲವು ಸ್ಥಿತಿಗಳೂ ಇವೆ. ಕೆಲವು ಬಗೆಯ ಕಾರ್ಡಿಯೊಮಯೋಪಥಿಗಳು (ರಕ್ತ ಸರಬರಾಜು ಸರಿಯಾಗಿದ್ದರೂ ಹೃದಯದ ಸ್ನಾಯುಗಳು ದುರ್ಬಲವಾಗಿರುವುದು) ಮತ್ತು ಚಾನೆಲೊಪಥಿಗಳು (ರಕ್ತ ಸರಬರಾಜು ಸರಿಯಾಗಿದ್ದು, ಹೃದಯದ ಸ್ನಾಯುಗಳು ಆರೋಗ್ಯವಂತವಾಗಿದ್ದರೂ ಹೃದಯದ ಇಲೆಕ್ಟ್ರಿಕಲ್ ವ್ಯವಸ್ಥೆ ಅಸ್ಥಿರವಾಗಿರುವುದು) ಇದರಲ್ಲಿ ಸೇರಿವೆ. ಇವುಗಳಲ್ಲಿ ಕೆಲವು ಸ್ಥಿತಿಗಳು ಆನುವಂಶಿಕವಾಗಿವೆ. ಪ್ರತೀ ಹೃದಯಾಘಾತವೂ ಹಠಾತ್ ಹೃದಯ ಸ್ತಂಭನಕ್ಕೆ ಕಾರಣವಾಗುವುದಿಲ್ಲ ಮತ್ತು ಪ್ರತೀ ಹಠಾತ್ ಹೃದಯ ಸ್ತಂಭನವು ಹೃದಯಾಘಾತದ ಬಳಿಕ ತಲೆದೋರಬೇಕು ಎಂದೇನಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. (ಮುಂದಿನ ವಾರಕ್ಕೆ)
-ಡಾ| ಮನೀಶ್ ರೈ ಕಾರ್ಡಿಯಾಕ್ ಎಲೆಕ್ಟ್ರೋಫಿಸಿಯಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಹೃದ್ರೋಗಗಳ ವಿಭಾಗ, ಕೆಎಂಸಿ, ಮಂಗಳೂರು)
ಹಠಾತ್ ಹೃದಯ ಸ್ತಂಭನವನ್ನು ಗುರುತಿಸುವುದು ಹೇಗೆ ಮತ್ತು ತತ್‌ಕ್ಷಣ ಏನು ಮಾಡಬೇಕು? ಹೃದಯವು ಕೆಲಸ ಮಾಡುವುದನ್ನು ನಿಲ್ಲಿಸಿದಾಗ ದೇಹದ ಯಾವುದೇ ಅಂಗಕ್ಕೆ ರಕ್ತ ಅಥವಾ ಆಮ್ಲಜನಕ ಸರಬರಾಜು ಕೂಡ ನಿಂತುಹೋಗುತ್ತದೆ. ಹೃದಯ ಸ್ತಂಭನಕ್ಕೆ ಒಳಗಾಗ ವ್ಯಕ್ತಿ ಸಾಮಾನ್ಯವಾಗಿ ನೆಲಕ್ಕೆ ಕುಸಿಯುತ್ತಾನೆ ಮತ್ತು ಜೀವಂತಿಕೆಯ ಲಕ್ಷಣಗಳು ಕಂಡುಬರುವುದಿಲ್ಲ, ಅಂದರೆ ಉಸಿರಾಟ, ನಾಡಿಮಿಡಿತ ಇರುವುದಿಲ್ಲ ಹಾಗೂ ಯಾವುದೇ ಆದೇಶ ಅಥವಾ ಪ್ರಚೋದನೆಗೆ ಪ್ರತಿಸ್ಪಂದನೆ ಇರುವುದಿಲ್ಲ. ಹಠಾತ್ ಹೃದಯ ಸ್ತಂಭನವಾದ ಸಂದರ್ಭದಲ್ಲಿ ಎಷ್ಟು ಸಾಧ್ಯವೋ ಅಷ್ಟು ಬೇಗನೆ ಸ್ತಂಭಿತ ಹೃದಯವನ್ನು ಪುನರಾರಂಭಗೊಳಿಸಬೇಕಾಗಿರುವುದರಿಂದ ಸಂಭಾವ್ಯ ಹಠಾತ್ ಹೃದಯ ಸ್ತಂಭನವನ್ನು ತತ್‌ಕ್ಷಣ ಗುರುತಿಸುವುದು ಬಹಳ ಮುಖ್ಯವಾಗಿದೆ. ಒಂದು ನಿಮಿಷದ ಒಳಗೆ ಹೃದಯವನ್ನು ಪುನರಾರಂಭಿಸಲು ಸಾಧ್ಯವಾದರೆ ವ್ಯಕ್ತಿಯು ಬದುಕುಳಿಯುವ ಸಾಧ್ಯತೆ ಶೇ. 90ರಷ್ಟು ಇರುತ್ತದೆ. ದುರದೃಷ್ಟವಶಾತ್, ಹಠಾತ್ ಹೃದಯ ಸ್ತಂಭನವಾದ ಬಳಿಕ ಒಂದೊಂದು ನಿಮಿಷ ಸರಿದಾಗಲೂ ಬದುಕುಳಿಯುವ ಸಾಧ್ಯತೆ ಶೇ. 10ರಷ್ಟು ಕಡಿಮೆಯಾಗುತ್ತ ಹೋಗುವುದರಿಂದ ಹೃದಯವನ್ನು ಪುನರಾರಂಭಿಸಲು 10 ನಿಮಿಷಗಳಿಗಿಂತ ಹೆಚ್ಚು ಸಮಯ ಹಿಡಿದರೆ ಆ ಬಳಿಕ ಬದುಕುಳಿಯುವ ಸಾಧ್ಯತೆ ಹೆಚ್ಚು ಕಡಿಮೆ ಶೂನ್ಯಕ್ಕೆ ಇಳಿಯುತ್ತದೆ. ಹಠಾತ್ ಹೃದಯ ಸ್ತಂಭನಕ್ಕೆ ಈಡಾದ ಬಹುತೇಕ ವ್ಯಕ್ತಿಗಳು ಆಸ್ಪತ್ರೆ ತಲುಪುದಕ್ಕೆ ಮುನ್ನವೇ ಏಕೆ ಸಾವನ್ನಪ್ಪುತ್ತಾರೆ ಮತ್ತು ಅತ್ಯುತ್ತಮ ಆರೋಗ್ಯ ಸೇವಾ ವ್ಯವಸ್ಥೆಗಳಿರುವ ಜಗತ್ತಿನ ಮುಂದುವರಿದ ದೇಶಗಳಲ್ಲಿ ಕೂಡ ಅಂಥವರು ಬದುಕುಳಿಯುವ ಪ್ರಮಾಣ ಶೇ. 5-10ಕ್ಕಿಂ ಕಡಿಮೆ ಏಕೆ ಇರುತ್ತದೆ ಎಂಬುದನ್ನು ಇದು ವಿವರಿಸುತ್ತದೆ.
ಹಾಗಾಗದರೆ ಈಗ ಮರಳಿ ಪ್ರಶ್ನೆಯನ್ನು ಕೈಗೆತ್ತಿಕೊಳ್ಳೋಣ:
ಸ್ತಂಭನಗೊಂಡ ಹೃದಯವನ್ನು ಪುನರಾರಂಭಿಸಲು ಏನು ಮಾಡಬೇಕು? ಸಿಪಿಆರ್ ಅಥವಾ ಕಾರ್ಡಿಯೋ-ಪಲ್ಮನರಿ ರಿಸಸಿಟೇಶನ್ ಇದಕ್ಕೆ ಉತ್ತರ. ಸಿಪಿಆರ್ ಎಂಬುದು ಹೃದಯ-ಶ್ವಾಸಾಂಗ ಕಾರ್ಯಾಚರಣೆಗೆ ತಾತ್ಕಾಲಿಕ ನೆರವು ಒದಗಿಸುವ ಒಂದು ಪ್ರಯತ್ನ; ಎದೆಯನ್ನು ಬಿರುಸಾಗಿ ಅದುಮುವ, ಬಾಯಿಯಿಂದ ಬಾಯಿಯ ಮೂಲಕ ಅಥವಾ ಬಾಯಿಯಿಂದ ಮೂಗಿನ ಮೂಲಕ ಉಸಿರಾಟ ಪ್ರಕ್ರಿಯೆಯನ್ನು ಪುನರ್‌ಸ್ಥಾಪಿಸುವ ಪ್ರಯತ್ನ. ಸಿಪಿಆರ್ ಒಂದರಿಂದಲೇ ಹೃದಯದ ಚಟುವಟಿಕೆಯನ್ನು ಪುನರಾರಂಭಿಸದು; ಆದರೆ ವೈದ್ಯಕೀಯ ನೆರವು ಸಿಗುವವರೆಗೆ ಅಥವಾ ಹೃದಯ ಬಡಿತವನ್ನು ಆಟೊಮೇಟೆಡ್ ಡಿಫೈಬ್ರಿಲೇಟರ್ ಶಾಕ್ ಮೂಲಕ ಪುನರ್‌ಸ್ಥಾಪಿಸುವ ತನಕ ಸಿಪಿಆರ್ ಜೀವ ಉಳಿಸುವುದಕ್ಕೆ ಬೇಕಾದ ಸಮಯವನ್ನು ಒದಗಿಸುತ್ತದೆ.
ಯಾರಿಗೆಲ್ಲ ಸಿಪಿಆರ್ ತಿಳಿದಿರಬೇಕು?
ವೈದ್ಯರ ಅಭಿಪ್ರಾಯದ ಪ್ರಕಾರ ಪ್ರತಿಯೊಬ್ಬ ನಾಗರಿಕನೂ ತಿಳಿದಿರಬೇಕಾದ ಅತ್ಯಗತ್ಯವಾದ ಜೀವ ಉಳಿಸುವ ಕೌಶಲ ಸಿಪಿಆರ್. ಈಜು ಅಥವಾ ವಾಹನ ಚಾಲನೆಯನ್ನು ಯಾರು ಬೇಕಾದರೂ ಕಲಿಯಬಹುದಾದಂತೆ ಸಿಪಿಆರ್ ಕೂಡ ಯಾರು ಬೇಕಾದರೂ ಕಲಿಯಬಹುದು. ಹಾಗೆ ಹೇಳುವುದಾದರೆ ಸಿಪಿಆರ್ ಈಜುವುದಕ್ಕಿಂತ ಸುಲಭ! ಶಾಲೆ-ಕಾಲೇಜು, ಉದ್ಯೋಗ ಸ್ಥಳಗಳಲ್ಲಿ ಕಡ್ಡಾಯವಾಗಿ ಕಲಿಸಲೇ ಬೇಕಾದ ಕೌಶಲವಿದು. 9 ವರ್ಷ ವಯೋಮಾನದ ಮಕ್ಕಳು ಸಿಪಿಆರ್ ಕಲಿತು ನೆನಪಿಟ್ಟುಕೊಳ್ಳಬಹುದು ಎಂದು ಅಧ್ಯಯನಗಳು ತಿಳಿಸಿವೆ. ಬಹುತೇಕ ಆಸ್ಪತ್ರೆಗಳು ಜೀವ ಉಳಿಸುವ ಮೂಲಭೂತ ಕೌಶಲದ ಉಚಿತ ತರಬೇತಿಯನ್ನು ಜನಸಾಮಾನ್ಯರಿಗೆ ಒದಗಿಸುತ್ತಿವೆ. ಹಠಾತ್ ಹೃದಯ ಸ್ತಂಭನಕ್ಕೆ ಈಡಾದ ವ್ಯಕ್ತಿಗೆ ಆತನ ಸುತ್ತಮುತ್ತ ಇದ್ದವರಲ್ಲಿ ತತ್‌ಕ್ಷಣ ಕಾರ್ಯಪ್ರವೃತ್ತರಾಗಿ ಸಿಪಿಆರ್ ಒದಗಿಸಬಲ್ಲ ವ್ಯಕ್ತಿಯೇ ಬದುಕು ಒದಗಿಸಬಲ್ಲ ಏಕೈಕ ಆಶಾಕಿರಣ. ಸುತ್ತಮುತ್ತಲಿನವರು ಸಿಪಿಆರ್ ಆರಂಭಿಸಲು ವಿಳಂಬ ಮಾಡಿದರೆ ವ್ಯಕ್ತಿಯ ಮರಣ ನಿಶ್ಚಿತವಾಗಿರುತ್ತದೆ.
ಹಠಾತ್ ಹೃದಯ ಸ್ತಂಭನದಲ್ಲಿ “ಜೀವ ಉಳಿಸುವ ಸರಣಿಯನ್ನು ಸದೃಢಗೊಳಿಸುವುದು:
ದ ರೋಶೆಸ್ಟರ್, ಮಿನೆಸೋಟಾ ಮಾದರಿ ಹಠಾತ್ ಹೃದಯ ಸ್ತಂಭನವಾದ ಸಂದರ್ಭದಲ್ಲಿ, ಸುತ್ತಮುತ್ತ ಇದ್ದವರಲ್ಲಿ ಯಾರಾದರೂ ಒದಗಿಸುವ ಸಿಪಿಆರ್, ಆಟೊಮೇಟೆಡ್ ಡಿಫೈಬ್ರಿಲೇಟರ್ ನೆರವು ಕ್ಷಿಪ್ರವಾಗಿ ಲಭಿಸುವುದು ಮತ್ತು ತುರ್ತು ವೈದ್ಯಕೀಯ ಆರೈಕೆ ಶೀಘ್ರವಾಗಿ ಲಭ್ಯವಾಗುವುದು “ಜೀವ ಉಳಿಸುವ ಸರಪಣಿ’ಯ ಮೂರು ಪ್ರಧಾನ ಆಧಾರಸ್ತಂಭಗಳು. ಆಸಕ್ತಿದಾಯಕ ಅಂಶವೆಂದರೆ, ಈ “ಜೀವ ಉಳಿಸುವ ಸರಣಿ’ಯಲ್ಲಿ ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆಯು ಹಠಾತ್ ಹೃದಯ ಸ್ತಂಭನದ ಸಂದರ್ಭಗಳಲ್ಲಿ ಬದುಕುವ ಸಾಧ್ಯತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಅಮೆರಿಕದ ಮಿನೆಸೋಟಾ ರಾಜ್ಯದ ರೋಶೆಸ್ಟರ್‌ನಲ್ಲಿ ಅಲ್ಲಿನ ರಾಷ್ಟ್ರೀಯ ಸರಾಸರಿ (ರಾ. ಸರಾಸರಿ ಶೇ.9ಕ್ಕಿಂತ ಕಡಿಮೆ ಇದ್ದರೆ ರೋಶೆಸ್ಟರ್‌ನಲ್ಲಿ ಶೇ. 40ರಷ್ಟಿದೆ) ಗೆ ಹೋಲಿಸಿದರೆ ಆಸ್ಪತ್ರೆಯಿಂದ ಹೊರಗೆ ಹಠಾತ್ ಹೃದಯ ಸ್ತಂಭನಕ್ಕೀಡಾದವರು ಬದುಕುಳಿಯುವ ಪ್ರಮಾಣ ತುಂಬ ಹೆಚ್ಚಿದೆ. ಇಲ್ಲಿ ಪೊಲೀಸರು ಮತ್ತು ಇತರ ಜನಸಾಮಾನ್ಯರಿಗೆ ಸಿಪಿಆರ್ ತರಬೇತಿ ಸತತವಾಗಿ ನಡೆಯುತ್ತಿದ್ದು, ಅವರು ಯಾವುದೇ ಹಠಾತ್ ಹೃದಯ ಸ್ತಂಭನವಾದ ಸಂದರ್ಭದಲ್ಲಿ ಮೊದಲ ಪ್ರತಿಸ್ಪಂದಕರಾಗಿ ಕಾರ್ಯಪ್ರವೃತ್ತರಾಗುತ್ತಿರುವುದು ಇದಕ್ಕೆ ಕಾರಣ. ಹಠಾತ್ ಹೃದಯ ಸ್ತಂಭನ ಸಂದರ್ಭದಲ್ಲಿ ಸುತ್ತಮುತ್ತ ಇರುವವರು ಸಿಪಿಆರ್ ಒದಗಿಸುವುದು ಮತ್ತು ಕ್ಷಿಪ್ರವಾಗಿ ಡಿಫೈಬ್ರಿಲೇಶನ್ ಬದುಕುಳಿಯುವ ಪ್ರಮಾಣವನ್ನು ಗಮನಾರ್ಹವಾಗಿ ಹೆಚ್ಚಿಸಬಲ್ಲುದು ಮತ್ತು ಅದೇ ನಮಗಿರುವ ಏಕೈಕ ಆಶಾಕಿರಣ! ನಮ್ಮ ದೇಶದಲ್ಲಿಯೂ ರೋಶೆಸ್ಟರ್ ಮಾದರಿಯಂತೆ ನಾಗರಿಕರಿಗೆ ಸಿಪಿಆರ್ ತರಬೇತಿ ಕಾರ್ಯಕ್ರಮ ಈ ಹೊತ್ತಿನ ಅತ್ಯಗತ್ಯವಾಗಿದೆ.
ಇಂಪ್ಲಾಂಟೇಬಲ್ ಡಿಫೈಬ್ರಿಲೇಟರ್‌ಗಳು ಮತ್ತು ಹಠಾತ್ ಹೃದಯ ಸ್ತಂಭನದಿಂದ ಬದುಕುಳಿದವರು
ಹಠಾತ್ ಹೃದಯ ಸ್ತಂಭನಕ್ಕೊಳಗಾಗಿ ಬದುಕುಳಿದ ಕೆಲವೇ ಅದೃಷ್ಟಶಾಲಿಗಳಿಗೆ ಡಿಫೈಬ್ರಿಲೇಟರ್ ಅಳವಡಿಸಲಾಗುತ್ತದೆ. ಐಸಿಡಿ ಅಥವಾ ಡಿಫೈಬ್ರಿಲೇಟರ್ ಎಂಬುದು ಪೇಸ್‌ಮೇಕರ್‌ನಂತಹ ಒಂದು ಸಾಧನವಾಗಿದ್ದು, ಹೆಚ್ಚು ಕಡಿಮೆ ಒಂದು ತಾಸು ಸಮಯ ತಗಲುವ ಸಣ್ಣ ಶಸ್ತ್ರಕ್ರಿಯೆಯ ಮೂಲಕ ಎಡ ಪಕ್ಕೆಲುಬಿನ ತಳಭಾಗದಲ್ಲಿ ಅಳವಡಿಸಲಾಗುತ್ತದೆ. ಅಳವಡಿಕೆಯಾದ ಬಳಿಕ ಡಿಫೈಬ್ರಿಲೇಟರ್ ಹೃದಯದ ಪ್ರತೀ ಬಡಿತದ ಮೇಲೂ ನಿಗಾ ಇರಿಸುತ್ತದೆ ಮತ್ತು ಹೃದಯ ಬಡಿತದಲ್ಲಿ ಪ್ರಾಣಾಪಾಯಕಾರಿಯಾದ ವ್ಯತ್ಯಯ ಕಂಡುಬಂದಲ್ಲಿ ಕೂಡಲೇ ವಿದ್ಯುದಾಘಾತ ಸೃಷ್ಟಿಸುವ ಮೂಲಕ ಜೀವವನ್ನು ಉಳಿಸುತ್ತದೆ. ಹಠಾತ್ ಹೃದಯ ಸ್ತಂಭನದ ಅಪಾಯ ಇರುವವರು ಅಥವಾ ಒಂದು ಬಾರಿ ಹೃದಯ ಸ್ತಂಭನಕ್ಕೆ ಒಳಗಾಗಿ ಬದುಕುಳಿದಿದ್ದು, ಅದು ಪುನರಾವರ್ತನೆಯಾಗುವ ಸಂಭವವಿರುವ ವ್ಯಕ್ತಿಗಳಲ್ಲಿ ಐಸಿಡಿ ಅಥವಾ ಡಿಫೈಬ್ರಿಲೇಟರ್ ಒಂದೇ ಹಠಾತ್ ಹೃದಯ ಸ್ತಂಭನವನ್ನು ತಡೆಯುವ ಚಿಕಿತ್ಸೆಯಾಗಿದೆ.
“ಅಪಾಯ ಹೆಚ್ಚು’ ಇರುವ ವ್ಯಕ್ತಿಗಳನ್ನು ಗುರುತಿಸುವುದು
ಹೃದಯಾಘಾತವು ಹಠಾತ್ ಹೃದಯ ಸ್ತಂಭನಕ್ಕೆ ಅತೀ ಸಾಮಾನ್ಯ ಕಾರಣವಾಗಿದ್ದರೂ ದುರದೃಷ್ಟವಶಾತ್ ಈಗ ಹಠಾತ್ ಹೃದಯ ಸ್ತಂಭನಕ್ಕೆ ಒಳಗಾಗುವ ಶೇ. 2ರಷ್ಟು ಮಂದಿಯನ್ನು ಗುರುತಿಸುವುದು ನಮಗೆ ಸಾಧ್ಯವಾಗುತ್ತಿಲ್ಲ. ಇತರ ಕೆಲವು ಹೃದ್ರೋಗಗಳನ್ನು ಹೊಂದಿರುವವರನ್ನು ತಪಾಸಣೆಗೆ ಒಳಪಡಿಸಿ ಎಸ್‌ಸಿಎ ಉಂಟಾಗುವ ಸಾಧ್ಯತೆಗಳಿವೆಯೇ ಎಂದು ವಿಶ್ಲೇಷಿಸಿ ಅದನ್ನು ತಡೆಗಟ್ಟುವುದು ಸಾಧ್ಯವಿದೆ.
ಅಂಥವರೆಂದರೆ:
1. ಅತ್ಯಂತ ಕಡಿಮೆ ಇಜೆಕ್ಷನ್ ಫ್ರಾಕ್ಷನ್ (ಇಎಫ್) ಹೊಂದಿರುವ ರೋಗಿಗಳು. ಇಎಫ್ ಎಂದರೆ ಹೃದಯದ ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯ. ಇದನ್ನು ಎಕೊಕಾರ್ಡಿಯೋಗ್ರಾಮ್ ಮೂಲಕ ವಿಶ್ಲೇಷಿಸಲಾಗುತ್ತದೆ. ತೀರಾ ದುರ್ಬಲ ಇಎಫ್ (ಇಎಫ್ ಶೇ. 35ಕ್ಕಿಂತ ಕಡಿಮೆ) ಹೊಂದಿರುವ ಹೃದಯಗಳನ್ನು ಸಾಂಪ್ರದಾಯಿಕವಾಗಿ ಸ್ವಲ್ಪ ಹೆಚ್ಚು ಎಸ್‌ಸಿಎ ಅಪಾಯ ಹೊಂದಿರುವವು ಎಂದು ಗುರುತಿಸಲಾಗುತ್ತದೆ. ಇಂಥವರನ್ನು ಇನ್ನಷ್ಟು ವಿಶ್ಲೇಷಣೆಗೆ ಒಳಪಡಿಸಿ ಎಸ್‌ಸಿಎ ಪ್ರತಿಬಂಧಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.
- ಕಾರ್ಡಿಯೊಮೈಪಥಿ ಅಥವಾ ಚಾನೆಲೊಪಥಿ ಹೊಂದಿರುವ ಮತ್ತು ಹಠಾತ್ ಹೃದಯ ಸ್ತಂಭನದ ಕೌಟುಂಬಿಕ ಇತಿಹಾಸ ಹೊಂದಿರುವವರು. ಕುಟುಂಬದ ಒಬ್ಬರು ಅಥವಾ ಅದಕ್ಕಿಂತ ಹೆಚ್ಚು ಮಂದಿ ಹಠಾತ್ ಹೃದಯ ಸ್ತಂಭನಕ್ಕೆ ಒಳಗಾಗಿದ್ದರೆ ಇದಕ್ಕೆ ಕಾರಣವಾಗಿರಬಲ್ಲ ವಂಶವಾಹಿ ಸ್ಥಿತಿಯನ್ನು ಗುರುತಿಸುವುದಕ್ಕಾಗಿ ಎಲ್ಲರೂ ತಪಾಸಣೆಗೆ ಒಳಪಡುವುದು ಕ್ಷೇಮ. ಹಠಾತ್ ಹೃದಯ ಸ್ತಂಭನಕ್ಕೆ ಒಳಗಾದ ವ್ಯಕ್ತಿ ಬದುಕುಳಿಯುವ ಸಾಧ್ಯತೆಗಳು ತೀರ ಅಲ್ಪವಾಗಿರುವುದರಿಂದ ಇದು ಸಂಭವಿಸುವ ಸಾಧ್ಯತೆ ಇರುವ ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸುವುದು ಅತ್ಯಂತ ಮುಖ್ಯ. ಇಂತಹ ವ್ಯಕ್ತಿಗಳ ಅಪಾಯ ಸ್ಥಿತಿಯನ್ನು ವಿಶ್ಲೇಷಿಸಿ ಆವಶ್ಯಕತೆಯಿದ್ದರೆ ಪ್ರೊಪಿಲ್ಯಾಕ್ಟಿಕ್ ಡಿಫೈಬ್ರಿಲೇಟರ್ ಅಳವಡಿಸಬೇಕಾಗುತ್ತದೆ.