Advertisement

ಐಪಿಎಲ್‌ ವೇಳಾಪಟ್ಟಿ ವಿಳಂಬಕ್ಕೆ ಏನು ಕಾರಣ?

06:12 PM Aug 26, 2020 | mahesh |

ಮುಂಬಯಿ: ಯುಎಇಯಲ್ಲಿ ಐಪಿಎಲ್‌ ಪಂದ್ಯಾವಳಿಗೆ ವೇದಿಕೆ ಸಜ್ಜುಗೊಂಡಿದೆ. ಸೆ. 19ರಿಂದ ಈ ಬಾರಿಯ ಹಣಾಹಣಿ ಮೊದಲ್ಗೊಳ್ಳಲಿದ್ದು, ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಇನ್ನೂ ವೇಳಾಪಟ್ಟಿ ಬಿಡುಗಡೆ ಆಗದಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಈ ವಾರಾಂತ್ಯದಲ್ಲಿ ವೇಳಾಪಟ್ಟಿ ಪ್ರಕಟಗೊಳ್ಳಬಹುದು ಎಂಬುದು ಐಪಿಎಲ್‌ ಅಧ್ಯಕ್ಷ ಬೃಜೇಶ್‌ ಪಟೇಲ್‌ ಹೇಳಿಕೆ. ಮೂಲಗಳ ಪ್ರಕಾರ ವೇಳಾಪಟ್ಟಿ ವಿಳಂಬಕ್ಕೆ ಎರಡು ಕಾರಣ. ಒಂದು, ಅರಬ್‌ ನಾಡಿನ ಕೋವಿಡ್‌ ನಿಯಾಮಾವಳಿ; ಮತ್ತೂಂದು, ಇಲ್ಲಿನ ಉರಿಬಿಸಿಲಿನ ವಾತಾವರಣ.

Advertisement

ಬೇರೆ ಬೇರೆ ನಿಯಮ
ಕೋವಿಡ್‌-19 ಸಂಬಂಧಿಸಿದಂತೆ ದುಬಾೖ ಮತ್ತು ಅಬುಧಾಬಿಯಲ್ಲಿ ಬೇರೆ ಬೇರೆ ನಿಯಮಗಳಿವೆ. ಅಬುಧಾಬಿಗೆ ತೆರಳುವ ಮುನ್ನ ಕ್ರಿಕೆಟಿಗರ ಮ್ಯಾಂಡಿಟರಿ ರ್ಯಾಪಿಡ್‌ ಟೆಸ್ಟ್‌ ನಡೆಸಬೇಕಾದುದು ಅನಿವಾರ್ಯ. ಇದು ಪ್ರತೀ ಸಲವೂ ಅನ್ವಯಿಸುತ್ತದೆ. ಆದ್ದರಿಂದ ಅಬುಧಾಬಿಯಲ್ಲಿ ಕಡಿಮೆ ಸಂಖ್ಯೆಯ ಪಂದ್ಯಗಳನ್ನು ಆಡಿಸುವುದು ಬಿಸಿಸಿಐ ಯೋಜನೆ. ಗಲ್ಫ್ ನಾಡಿನ ಹವಾಮಾನ ಕೂಡ ವೇಳಾಪಟ್ಟಿಯ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಇಲ್ಲಿನ ಸುಡು ಬಿಸಿಲಿನ ವಾತಾವರಣದಲ್ಲಿ ದಿನಕ್ಕೆ 2 ಪಂದ್ಯಗಳನ್ನು ಆಯೋಜಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಸಂಜೆ ಬಳಿಕ ತಣ್ಣಗಿನ ವಾತಾವರಣ ಇದ್ದರೂ ಅಪರಾಹ್ನ ಇದೇ ಸ್ಥಿತಿ ಇರದು. ಆಗ ಉರಿಬಿಸಿಲು ಕ್ರಿಕೆಟಿಗರನ್ನು ಕಾಡಲಿದೆ.

ಎರಡು ಪಂದ್ಯಗಳ ಸವಾಲು
ಅಲ್ಲದೇ ಪಂದ್ಯಗಳನ್ನು ಭಾರತೀಯ ಕಾಲಮಾನಕ್ಕೆ ಹೊಂದಿಸಿಕೊಳ್ಳಬೇಕಾದ ಇನ್ನೊಂದು ಸವಾಲು ಕೂಡ ಇದೆ. ಯುಎಇ ಸಮಯಕ್ಕಿಂತ ಭಾರತ 1.30 ಗಂಟೆ ಮುಂದಿದೆ. ಇಲ್ಲಿ 7.30ರ ಪಂದ್ಯ ಅಲ್ಲಿ 6 ಗಂಟೆಗೆ ಆರಂಭವಾಗಬೇಕಾಗುತ್ತದೆ. ಆ ಸಮಯದಲ್ಲೂ ಬಿಸಿಲಿನ ತೀವ್ರತೆ ಇರುತ್ತದೆ. ಅಪರಾಹ್ನದ ಪಂದ್ಯ ಅಲ್ಲಿ 2 ಗಂಟೆಗೆ ಶುರುವಾಗುತ್ತದೆ. ಹೀಗಾಗಿ ದಿನಕ್ಕೆ ಎರಡು ಪಂದ್ಯಗಳನ್ನು ಆಯೋಜಿಸುವುದು ಹೇಗೆ ಎಂಬ ಬಗ್ಗೆಯೂ ಯೋಚಿಸಬೇಕಾಗುತ್ತದೆ. ಪ್ರಯಾಣ ನಿರ್ಬಂಧ ಹಾಗೂ ಜೈವಿಕ ಸುರಕ್ಷಾ ನಿಯಮಗಳ ಕಾರಣ ಈ ಐಪಿಎಲ್‌ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭವನ್ನು ನಡೆಸದಿರಲು ಬಿಸಿಸಿಐ ಈಗಾಗಲೇ ತೀರ್ಮಾನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next