Advertisement

ಕೋವಿಡ್ -19 ಬಳಿಕ ಯಾವ ಬ್ಯುಸಿನೆಸ್‌ ಮಾಡಬಹುದು?

10:25 AM Apr 18, 2020 | mahesh |

ಗೋವಿಂದ ರಾಜು ವಿ., ಬೆಂಗಳೂರು
ನಾನೊಬ್ಬ ಸಿವಿಲ್‌ ಕಂಟ್ರಾಕ್ಟರ್‌. ಚೀಟಿ ವ್ಯವಹಾರವನ್ನೂ ಮಾಡುತ್ತಿದ್ದೇನೆ. ಕೋವಿಡ್ -19 ನಂತರದ ದಿನಗಳಲ್ಲಿ ಬಂಡವಾಳ ಹೂಡಿ, ಉತ್ಪಾದನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬಹುದಾದರೆ, ಯಾವ ವಸ್ತುವಿನ ಕಾರ್ಖಾನೆ ಆರಂಭಿಸಬಹುದು? ಯಾವ ಯೋಜನೆಗಳು ಕೈಹಿಡಿಯಬಹುದು?

Advertisement

ನೀವು ಸದ್ಯಕ್ಕೆ ಮಾಡುತ್ತಿರುವ ಕೆಲಸದಲ್ಲಿ ಖುಷಿಯಾಗಿದ್ದೀರಿ, ಅದು ಒಳ್ಳೆಯದು. ಚಿಟ್‌ ಫ‌ಂಡ್‌ ವ್ಯವಹಾರ ಹುಷಾರು. ಅದೊಂದು ಎರಡು ಅಲಗಿನ ಕತ್ತಿ ಇದ್ದಹಾಗೆ. ಉಳಿದಂತೆ ನೀವು ಹೇಳಿದ ಬಂಡವಾಳದಲ್ಲಿ ಉದ್ದಿಮೆ ತೆಗೆಯಲು ಕೊರೊನೋತ್ತರ ಬಹಳಷ್ಟು ಅವಕಾಶಗಳಿವೆ. ಮೊದಲನೆಯದಾಗಿ ಕಡಿಮೆಯೆಂದರೂ ಇನ್ನೊಂದು ವರ್ಷ ಅಥವಾ ಎರಡು ವರ್ಷ ಮಾಸ್ಕ್ ಮತ್ತು ಹ್ಯಾಂಡ್‌ವಾಶ್‌ ಜೊತೆಗೆ ಸ್ಯಾನಿಟೈಸರ್‌ಗೆ ಬೇಡಿಕೆ ಇರುತ್ತದೆ. ಈಗಾಗಲೇ ದೊಡ್ಡ ಬ್ರ್ಯಾಂಡ್‌ಗಳು ಇದ್ದರೂ, ಸಣ್ಣಪುಟ್ಟ ಉದ್ಯಮಿ ಗಳಿಗೂ ಇದರಲ್ಲಿ ಜಾಗವಿದೆ. ಎರಡನೆಯದಾಗಿ, ಹೋಟೆಲ್‌ನಲ್ಲಿ ಈಗ ಪ್ಲೇಟ್‌ ಬಳಕೆ ಕಡಿಮೆಯಾಗಿದೆ. ಹೀಗಾಗಿ, ಅಡಕೆ ಪಟ್ಟಿಯಿಂದ ತಯಾರು ಮಾಡುವ ತಟ್ಟೆ, ಬೌಲ್‌, ಮರದ ಚಮಚ ಇಂಥವುಗಳಿಗೆ ಬಹಳ ಬೇಡಿಕೆ ಬರುತ್ತಿದೆ. ಇದನ್ನೂ ಪ್ರಯತ್ನಿಸಬಹುದು. ನಿಮಗೆ ಲೇಬರ್‌ ಕಾಂಟ್ರಾಕ್ಟ್ ನಲ್ಲಿ ಆಸಕ್ತಿ ಇದೆ ಅಂದಿರಿ, ಇದು ಅದಕ್ಕೆ ಒಳ್ಳೆಯ ಸಮಯ. ಕ್ಲೀನಿಂಗ್‌ ಸರ್ವಿ ಸಸ್‌ ಮತ್ತು ಡೆಲಿವರಿ ಬಾಯ್ಸ…ಗಳಿಗೆ ಬಹಳಷ್ಟು ಬೇಡಿಕೆ ಉಂಟಾಗಲಿದೆ. ಜೊತೆಗೆ ಉತ್ತಮ ಗುಣಮಟ್ಟದ ತರಕಾರಿ ಮನೆಯ ಬಾಗಿಲಿಗೆ ತಲುಪಿಸುವ ಉದ್ಯಮಕ್ಕೂ ಭವಿಷ್ಯವಿದೆ. ಹೀಗಾಗಿ, ಈ ಕಾರ್ಯಕ್ಷೇತ್ರಗಳಲ್ಲಿ ನೀವು ಗಮನ ಹರಿಸುವುದು ಉತ್ತಮ.
● ರಂಗಸ್ವಾಮಿ ಮೂಕನಹಳ್ಳಿ, ಆರ್ಥಿಕ ತಜ್ಞ

ಭಾಗ್ಯ ಶೆಟ್ಟಿ, ಬೆಂಗಳೂರು
ಲಾಕ್‌ಡೌನ್‌ ಆದೇಶದಿಂದಾಗಿ ನನ್ನ ಪತಿ, ಊರಿಗೆ ಹೋದವರು ಮರಳಲು ಸಾಧ್ಯವಾಗಲಿಲ್ಲ. ಎರಡೂವರೆ ವರ್ಷದ ಮಗಳೊಟ್ಟಿಗೆ ಇದ್ದೇನೆ. ಅಪ್ಪ ಬೇಕೆಂದು ಹಠ ಮಾಡುತ್ತಿದ್ದಾಳೆ. ತುಂಬಾ ಡಲ್‌ ಆಗಿದ್ದಾಳೆ. ನಿದ್ದೆಯಲ್ಲೂ ಅಪ್ಪನನ್ನು ಕನವರಿಸುತ್ತಾಳೆ. ಮಗಳನ್ನು ಸಂತೈಸುವುದು ಹೇಗೆ?

ಎಷ್ಟೇ ಕಷ್ಟವಾದರೂ ಲಾಕ್‌ಡೌನ್‌ ಅನಿವಾರ್ಯ. ಸಾಮಾನ್ಯವಾಗಿ ಎರಡೂವರೆ ವರ್ಷದ ಮಕ್ಕಳಿಗೆ “out of sight is out of mind’ ಎನ್ನುವುದು ನಿಜ. ಆದರೂ ಕೆಲ ಮಕ್ಕಳು, ನಿದ್ರೆ ಮಾಡುವುದಕ್ಕೆ, ಊಟ ಮಾಡುವುದಕ್ಕೆ ಒಂದು ವ್ಯಕ್ತಿಯ ಸಖ್ಯ ಅಭ್ಯಾಸವಾಗಿದ್ದರೆ, ಆ ವ್ಯಕ್ತಿ ಇಲ್ಲದಿದ್ದಾಗ, ಸ್ವಲ್ಪ ದಿನಗಳ ತನಕ ಹಠ ಮಾಡಬಹುದು. ಈ ಸಂದರ್ಭದಲ್ಲಿ, ಮೊದಲನೆಯದಾಗಿ ನೀವು ಎದೆ ಗುಂದಬಾರದು. ಮಗುವಿನ ಮುಂದೆ ಅಳಬಾರದು. ಮಗುವಿನ ದೈನಂದಿನ ಚಟುವಟಿಕೆಗಳು ಸರಿಯಾದ ಸಮಯಕ್ಕೆ ಆಗುವಂತೆ ನೋಡಿಕೊಳ್ಳಿ. ಮಗುವಿಗೆ ಊಟ ಮಾಡಿ ಸುವಾಗ, ಅಪ್ಪನೂ ಅಲ್ಲಿ ಊಟ ಮಾಡುತ್ತಿರುತ್ತಾರೆ, ಆರಾಮವಾಗಿದ್ದಾರೆ ಎಂದು ತಿಳಿಸಿ. ಸ್ವಲ್ಪ ದೊಡ್ಡ ಮಕ್ಕಳಾದರೆ, ಕ್ಯಾಲೆಂಡರ್‌ನಲ್ಲಿ ಇವತಿಂದ ಮೇ 3ರ ತನಕ ಮಾರ್ಕ್‌ ಮಾಡಿ, ಆ ದಿನ ಅಪ್ಪ ಬರುತ್ತಾರೆಂದು, ದಿನವೂ ಬೆಳಗ್ಗೆ ಒಂದೊಂದು ದಿನ ಕಾಟು ಹಾಕಲು ಮಗುವಿಗೆ ಹೇಳಿ. ಮಲಗುವ ಮುಂಚೆ, ವಾಟ್ಸಾಪ್‌ ವಿಡಿಯೊ ಕಾಲ್‌ ಮಾಡಿ, ಅಪ್ಪನೊಂದಿಗೆ ಮಾತನಾಡಿಸಿ. ಅಪ್ಪನ ದಿಂಬು, ಹೊದಿಯುವ ಚಾದರ ಮಗುವಿಗೆ ಕೊಟ್ಟು ಮಲಗಿಸಿದರೆ, ನಿರಾಳವಾಗಬಹುದು.
● ಡಾ. ಕೆ.ಎಸ್‌. ಶುಭ್ರತಾ, ಮನೋವೈದ್ಯೆ

ಇಮಾನ್‌, ಕಲಬುರಗಿ
ಕಲಬುರಗಿ ನಗರದ ಸಿಐಬಿ ಕಾಲೊನಿಯ ಹಿಂಭಾಗದ ಏರಿಯಾಗೆ ಕಳೆದ 6 ದಿನಗಳಿಂದ ಕುಡಿವ ನೀರು ಪೂರೈಕೆ ಆಗಿಲ್ಲ. ಇಲ್ಲಿನ ಜನರಿಗೆ ತುಂಬಾ ಕಷ್ಟವಾಗಿದೆ.

Advertisement

ಕಲಬುರಗಿ ನಗರದ ಕೇಂದ್ರೀಯ ಬಸ್‌ ನಿಲ್ದಾಣದ ಹಿಂಭಾಗದ ಸಿಐಬಿ ಕಾಲೋನಿಯಲ್ಲಿ ಇತ್ತೀಚೆಗೆ ಸಿಸಿ ರಸ್ತೆ ನಿರ್ಮಿಸಲಾಗಿದೆ. ರಸ್ತೆಯೊಳಗಿನ ನೀರು ಪೂರೈಕೆ
ವಾಲ್‌ ಸಹ ಮುಚ್ಚಿ ಹೋಗಿದೆ. ಇರುವ ಒಂದು ವಾಲ್‌ ಮೂಲಕ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ರಸ್ತೆ ಅಗೆದು ವಾಲ್‌ ತೆರೆಯಬೇಕಾಗಿದೆ. ಇದಕ್ಕಾಗಿ ಬ್ರೇಕರ್‌ ತರುವ ಸಂದರ್ಭದಲ್ಲಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಾಹನ ತಡೆ ಹಿಡಿಯಲಾಗಿತ್ತು. ಈಗ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ಶೀಘ್ರವೇ ವಾಲ್‌ ತೆರೆದು, ನೀರು ಪೂರೈಕೆ ಮಾಡಲಾಗುವುದು.
● ಯೂನಿಷ ಭಾಷಾ, ಮುಖ್ಯ ಕಾರ್ಯಪಾಲಕ ಅಭಿಯಂತರ, ನಗರ ನೀರು ಸರಬರಾಜು ಮಂಡಳಿ, ಕಲಬುರಗಿ

Advertisement

Udayavani is now on Telegram. Click here to join our channel and stay updated with the latest news.

Next