Advertisement
ಪ್ರತಿವರ್ಷ ಮಳೆಗಾಲಕ್ಕೆ ಬಿಬಿಎಂಪಿಯಿಂದ ಮುನ್ನೆಚ್ಚರಿಕೆ ಕ್ರಮಗಳ ಶಾಸ್ತ್ರವನ್ನು ಪೂರೈಸಲಾಗುತ್ತದೆ. ಆದರೆ, ಮಳೆ ಬಂದಾಗಲೇ ಸಮಸ್ಯೆಯ ಅಸಲಿಯತ್ತು ತೆರೆದುಕೊಳ್ಳುತ್ತದೆ. ಪ್ರಸಕ್ತ ಸಾಲಿನಲ್ಲಿ ಮುಂಗಾರು ಪೂರ್ವ ಮಳೆಗೆ ಮೂವರು ಅಮಾಯಕರು ಬಲಿಯಾಗಿದ್ದು, ಬಿಬಿಎಂಪಿ ಎಷ್ಟರ ಮಟ್ಟಿಗೆ ಮಳೆಗಾಲಕ್ಕೆ ಸಿದ್ಧತೆಯಾಗಿದೆ ಎಂಬುದು ಬಯಲಾಗಿದೆ. ಹೀಗಾಗಿ ನಗರದ ಜನತೆ ಪಾಲಿಕೆ ಖುಷಿಗಿಂತಲೂ ಹೆಚ್ಚು ಭಯ ಮೂಡಿಸುತ್ತಿದೆ.
Related Articles
Advertisement
ಮೂರು ವರ್ಷಗಳಲ್ಲಿ 400ಕ್ಕೂ ಹೆಚ್ಚಿನ ಪ್ರದೇಶಗಳು ಮಳೆಯಿಂದ ಅನಾಹುತಕ್ಕೆ ಒಳಗಾಗಿದ್ದು, ಅನಾಹುತ ಸಂಭವಿಸಿದ ಪ್ರದೇಶದಲ್ಲಿ ಸಮಸ್ಯೆಗಳಿಗೆ ಪರಿಹಾರ ನೀಡುವ ಭರವಸೆ ಹಾಗೆಯೇ ಉಳಿದಿದೆ. ಪ್ರತಿವರ್ಷ ಪ್ರವಾಹ ಪೀಡಿತ ಪ್ರದೇಶಗಳ ಪಟ್ಟಿ ಬಿಡುಗಡೆ ಮಾಡುವ ಪಾಲಿಕೆಯು ಆ ಪ್ರದೇಶಗಳಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ ಎಂಬುದು ಟೀಕೆಗೆ ಕಾರಣವಾಗಿದೆ.
ಸಮಗ್ರ ಕ್ರಿಯಾಯೋಜನೆ ರೂಪಿಸಿಲ್ಲ: ಮಳೆಗಾಲಕ್ಕೆ ಮುನ್ನವೇ ಮಳೆ ಅನಾಹುತ ಪ್ರದೇಶಗಳನ್ನು ಗುರುತಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಕೆ ಕೈಗೊಳ್ಳಬೇಕು. ಆದರೆ, ಮಳೆಯಿಂದ ಅನಾಹುತ ಸಂಭವಿಸಿದ ಬಳಿಕ ಆ ಭಾಗಗಳಲ್ಲಿ ಪಾಲಿಕೆ ಕಾಮಗಾರಿ ಆರಂಭಿಸುತ್ತಿದೆ. 2016ರಲ್ಲಿ ದಕ್ಷಿಣ ಭಾಗದಲ್ಲಿ ಪ್ರವಾಹ ಉಂಟಾಗಿ ಜನರು ತೊಂದರೆ ಅನುಭವಿಸಿದಾಗ ಅಲ್ಲಿ ಪರಿಹಾರ ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿತ್ತು.
ಬಳಿಕ 2017ರಲ್ಲಿ ಉತ್ತರ ಭಾಗದಲ್ಲಿ ಪ್ರವಾಹ ಉಂಟಾಗಿ 10 ಮಂದಿ ಪ್ರಾಣ ಕಳೆದುಕೊಂಡಾಗ ಆ ಭಾಗದಲ್ಲಿ ಕಾಮಗಾರಿ ಆರಂಭಿಸಿತ್ತು. ಪ್ರತಿವರ್ಷ ಮಳೆಯಿಂದ ಆದ ಅನಾಹುತ ಆಧಾರಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಪಾಲಿಕೆ ಮುಂದಾಗುತ್ತಿದ್ದು, ಮಳೆಯಿಂದ ಸಮಸ್ಯೆಗೆ ಈಡಾಗುವ ಪ್ರದೇಶಗಳ ಮಾಹಿತಿ ಮೊದಲೇ ಸಂಗ್ರಹಿಸಿ ಪರಿಹಾರ ಕ್ರಮಗಳಿಗೆ ಮುಂದಾದರೆ ಸಮಸ್ಯೆ ಮರುಕಳಿಸುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯ.
ಹೂಳು ತೆಗೆಯುವ ಶಾಸ್ತ್ರ: ಮಳೆಗಾಲಕ್ಕೆ ಮೊದಲು ರಾಜಕಾಲುವೆಗಳಲ್ಲಿನ ಹೂಳು ತೆಗೆಯುವ ಶಾಸ್ತ್ರ ಪಾಲಿಕೆಯಿಂದ ನಡೆಯುತ್ತಿದ್ದರೂ, ರಾಜಕಾಲುವೆಗಳು ಮಾತ್ರ ಪ್ರತಿವರ್ಷ ಉಕ್ಕಿಹರಿಯುತ್ತಲೇ ಇವೆ. ಕಳೆದ ಎರಡು ವರ್ಷಗಳಲ್ಲಿ 200 ಕಿ.ಮೀ.ಗೂ ಉದ್ದ ಕಾಲುವೆಗಳಲ್ಲಿ ಹೂಳು ತೆರವುಗೊಳಿಸಿದ್ದು, ಇನ್ನೂ 600 ಕಿ.ಮೀ. ಉದ್ದದ ಕಾಲುವೆಗಳಲ್ಲಿ ಹೂಳು ತೆಗೆಯಬೇಕಿದೆ. ಜತೆಗೆ ರಸ್ತೆ ಬದಿಯ ಕಿರು ಚರಂಡಿಗಳ ಸ್ವತ್ಛತೆಗೆ ಪಾಲಿಕೆಯಿಂದ 70ಕ್ಕೂ ಹೆಚ್ಚು ತಂಡಗಳನ್ನು ನಿಯೋಜಿಸಿ, ಪ್ರತಿ ತಂಡಕ್ಕೆ ಮಾಸಿಕ 1 ಲಕ್ಷ ರೂ. ಪಾವತಿಸಿದರೂ ಮಳೆನೀರು ಮಾತ್ರ ರಸ್ತೆಗಳಲ್ಲಿಯೇ ಹರಿಯುತ್ತಿರುವುದು ವಿಪರ್ಯಾಸದ ಸಂಗತಿ.
ನೀರಿನಿಂದ ಭರ್ತಿಯಾಗುವ ಅಂಡರ್‌ಪಾಸ್‌ಗಳು: ಮೆಜೆಸ್ಟಿಕ್ ಬಳಿಯ ಓಕಳಿಪುರ ಜಂಕ್ಷನ್‌ನ ಹೊಸ ಅಂಡರ್‌ಪಾಸ್ ಸೇರಿ ಹಲವು ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ನಿಲ್ಲುತ್ತದೆ. ಮಳೆನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡದಿರುವುದು ಇದಕ್ಕೆ ಕಾರಣವಾಗಿದ್ದು, ಮೇಖ್ರೀವೃತ್ತ, ಶೇಷಾದ್ರಿಪುರ ರೈಲ್ವೆ ಕೆಳಸೇತುವೆ, ಕಾವೇರಿ ಚಿತ್ರಮಂದಿರ, ಕೆ.ಆರ್.ವೃತ್ತ, ಸ್ಯಾಂಕಿ ರಸ್ತೆ ಅಂಡರ್‌ಪಾಸ್‌ಗಳಲ್ಲಿ ನೀರು ನಿಲ್ಲುವುದು ಸಾಮಾನ್ಯವಾಗಿದೆ.
ಸಮಸ್ಯೆಗೆ ಕಾರಣವೇನು?: ವಿವಿಧ ಉದ್ದೇಶಗಳಿಗಾಗಿ ನಗರದ ಸಾವಿರಾರು ಭಾಗಗಳಲ್ಲಿ ರಾಜಕಾಲುವೆ ಪಥ ಬದಲಾವಣೆ ಮಾಡಲಾಗಿದೆ. ಪರಿಣಾಮ ಮಳೆ ನೀರು ದಿಕ್ಕಾಪಾಲಾಗಿ ಹರಿಯುತ್ತಿದ್ದು, ವೇಗ ಹೆಚ್ಚಿದಾಗ ಅನಾಹುತ ಸೃಷ್ಟಿಯಾಗುತ್ತಿದೆ. 2016ರಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಕೈಗೊಂಡ ಆರಂಭದಲ್ಲಿ ಶೂರತ್ವ ಮೆರೆದಿದ್ದ ಪಾಲಿಕೆಯು, ಪ್ರಭಾವಿಗಳ ಕಟ್ಟಡಗಳು ಒತ್ತುವರಿ ಸ್ಥಳದಲ್ಲಿರುವುದು ಬೆಳಕಿಗೆ ಬಂದ ಕೂಡಲೇ ತೆರವು ಕಾರ್ಯಾಚರಣೆ ಕೈಬಿಟ್ಟಿದೆ. ಇನ್ನೂ 2 ಸಾವಿರಕ್ಕೂ ಹೆಚ್ಚಿನ ಕಡೆಗಳಲ್ಲಿ ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕಿರುವುದರಿಂದ ಸಮಸ್ಯೆ ಜೀವಂತವಾಗಿದೆ.
ಮಳೆಗಾಲಕ್ಕೆ ಪಾಲಿಕೆ ಮಾಡಿಕೊಂಡಿರುವ ಸಿದ್ಧತೆಗಳಾದರು ಏನು?: ಮಳೆಯಿಂದಾಗುವ ಅನಾಹುತಗಳ ತಡೆಗೆ ನಗರದ ನೂರು ಕಡೆಗಳಲ್ಲಿ ಕೆಎಸ್‌ಎನ್‌ಎಂಡಿಸಿ ಸಂಸ್ಥೆಯಿಂದ ಮಳೆಯ ಪ್ರಮಾಣ ಅಳೆಯುವ ಯಂತ್ರಗಳನ್ನು ಅಳವಡಿಸಿದ್ದು, 25 ಕಡೆ ರಾಜಕಾಲುವೆಗಳಲ್ಲಿ ಸೆನ್ಸಾರ್ ಅಳವಡಿಸಲಾಗಿದೆ. ಇದರಿಂದ ಯಾವ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದೆ, ನೀರಿನ ಹರಿವಿನ ಮಾಹಿತಿ ತಿಳಿಯಲಿದೆ.
ಇದರೊಂದಿಗೆ 9 ಶಾಶ್ವತ ನಿಯಂತ್ರಣ ಕೊಠಡಿಗಳೊಂದಿಗೆ, ಮಳೆಗಾಲದಲ್ಲಿ ಆಗುವ ತೊಂದರೆಗಳಿಗೆ ಶೀಘ್ರ ಪರಿಹಾರ ನೀಡಲು 63 ಉಪವಲಯಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲು ಕ್ರಮಕೈಗೊಳ್ಳಲಾಗಿದೆ. ಪರಿಹಾರ ಕಾರ್ಯಕ್ಕೆ ಅಗತ್ಯವಾದ ಸಲಕರಣೆಗಳು, ಯಂತ್ರಗಳು ಹಾಗೂ ಸಿಬ್ಬಂದಿ ನಿಯೋಜಿಸಿಕೊಳ್ಳಲು ಅಲ್ಪಾವಧಿ ಟೆಂಡರ್ ಆಹ್ವಾನಿಸಲಾಗಿದೆ. ಜತೆಗೆ ರಾಜಕಾಲುವೆಗಳಲ್ಲಿ ಹೂಳು ತಗೆಯಲು ಹಾಗೂ ಇತರೆ ನಿರ್ವಹಣಾ ಕಾರ್ಯಕ್ಕಾಗಿ ಪ್ರತಿಯೊಂದು ವಲಯದಕ್ಕೆ ಹಿಟಾಚಿ, ಎರಡು ಟ್ರಕ್‌ಗಳು ಹಾಗೂ 156 ಜನ ಕಾರ್ಮಿಕರನ್ನು ನಿಯೋಜಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಅರಣ್ಯ ವಿಭಾಗಕ್ಕೆ ಹೆಚ್ಚುವರಿಯಾಗಿ 7 ತಂಡಗಳು: ಪಾಲಿಕೆಯ ಎಂಟು ವಲಯಗಳಲ್ಲಿ ಧರೆಗುರುಳಿದ ಮರಗಳನ್ನು 21 ತಂಡಗಳು ತೆರವುಗೊಳಿಸುತ್ತಿವೆ. ಆದರೆ, ಮಳೆಗಾಲದಲ್ಲಿ ಹೆಚ್ಚಿನ ಮರಗಳು ಉರುಳುವ ಸಾಧ್ಯತೆಯಿದೆ. ಹೀಗಾಗಿ ಹೆಚ್ಚುವರಿಯಾಗಿ ಏಳು ತಂಡಗಳನ್ನು ನಿಯೋಜಿಸಿಕೊಳ್ಳಲು ಪಾಲಿಕೆ ಅನುಮತಿ ನೀಡಿದೆ. ಅದರಂತೆ ಈವರೆಗೆ 615 ಮರಗಳು ಹಾಗೂ 3037 ರೆಂಬೆ-ಕೊಂಬೆಗಳನ್ನು ತೆರವುಗೊಳಿಸಿದೆ.
ಬೀದಿ ದೀಪಗಳ ಅಳವಡಿಕೆಗೆ ಸೂಚನೆ: ಮಳೆಗಾಲದಲ್ಲಿ ಯಾವುದೇ ರೀತಿ ಅನಾಹುತಗಳು ಸಂಭವಿಸಿದಂತೆ ತಡೆಯುವ ಉದ್ದೇಶದಿಂದ ನಗರದ ಎಲ್ಲ ಪ್ರಮುಖ ರಸ್ತೆಗಳಲ್ಲಿನ ಹಾಳಾಗಿರುವ ಬೀದಿ ದೀಪಗಳನ್ನು ಸರಿಪಡಿಸುವಂತೆ ಮೇಯರ್ ಆದೇಶಿಸಿದ್ದಾರೆ. ನಗರದ ಯಾವುದೇ ರಸ್ತೆಯಲ್ಲಿ ದುರಸ್ತಿಯಾಗಿರುವ ದೀಪಗಳನ್ನು ಕೂಡಲೇ ಸರಿಪಡಿಸಬೇಕು ಇಲ್ಲದ್ದಿರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ತೇಲುವ ತ್ಯಾಜ್ಯ ತಡೆಯುವಲ್ಲಿ ಟ್ರ್ಯಾಶ್ ಬ್ಯಾರಿಯರ್ ವಿಫಲ!: ರಾಜಕಾಲುವೆಗಳಲ್ಲಿ ತೇಲುವ ತ್ಯಾಜ್ಯವನ್ನು ತೆರವುಗೊಳಿಸಲು ಪಾಲಿಕೆಯಿಂದ ಪ್ರಾಯೋಗಿಕವಾಗಿ ಅಳವಡಿಸಿದ ಟ್ರ್ಯಾಶ್ ಬ್ಯಾರಿಯರ್ (ತೇಲುವ ಕಸ ತಡೆಯುವ ಅಲ್ಯೂಮಿನಿಯಂ ಬಲೆ) ಉಪಯೋಗವಿಲ್ಲದಂತಾಗಿದೆ. ರಾಜಕಾಲುವೆಗಳಲ್ಲಿ ಭಾರೀ ಪ್ರಮಾಣದಲ್ಲಿ ಪ್ಲಾಸ್ಟಿಕ್, ಥರ್ಮಕೋಲ್ ತ್ಯಾಜ್ಯ ವಿಲೇವಾರಿಯಾಗುತ್ತಿದ್ದು, ಇಂತಹ ತ್ಯಾಜ್ಯವನ್ನು ಟ್ರ್ಯಾಶ್ ಬ್ಯಾರಿಯರ್ ಮೂಲಕ ತಡೆಯುತ್ತದೆ.
ಅದೇ ರೀತಿ ನೀರಿನಲ್ಲಿ ಮುಳುಗುವಂತಹ ತ್ಯಾಜ್ಯವನ್ನು ಪಾಲಿಕೆಯಿಂದ ನಿರ್ಮಿಸುವ ಕಾಂಕ್ರಿಟ್ ತೊಟ್ಟಿಗಳು ಶೇಖರಣೆ ಮಾಡಲಾಗಿದ್ದು, ಪಾಲಿಕೆಯಿಂದ ಸುಲಭವಾಗಿ ತೆರವುಗೊಳಿಸಬಹುದು ಎಂದು ಪಾಲಿಕೆಯ ಅಧಿಕಾರಿಗಳು ಅಂದಾಜಿಸಿದ್ದರು. ಅದರಂತೆ ಪ್ರಾಯೋಗಿಕವಾಗಿ ಅಗರ ಕೆರೆ, ಸಿಲ್ಕ್ಬೋರ್ಡ್ ಜಂಕ್ಷನ್, ದೊಮ್ಮಲೂರು ಬಳಿ ಅಳವಡಿಸಿದ್ದು, ಕೆಲವು ಕಡೆಗಳಲ್ಲಿ ನೀರಿನ ವೇಗಕ್ಕೆ ಟ್ರ್ಯಾಶ್ ಬ್ಯಾರಿಯರ್‌ಗಳು ಕಿತ್ತುಬಂದಿರುವುದರಿಂದ ಸಮಸ್ಯೆ ಮುಂದುವರಿದಿದೆ.
ಏನಿದು ಟ್ರ್ಯಾಶ್ ಬ್ಯಾರಿಯರ್?: ಟ್ರ್ಯಾಶ್ ಬ್ಯಾರಿಯರ್ ವ್ಯವಸ್ಥೆಯನ್ನು ಹೈದರಾಬಾದ್‌ನಲ್ಲಿ ಬಳಸಲಾಗುತ್ತಿದ್ದು, ಅಲ್ಲಿ ಯಶಸ್ವಿಯಾಗಿದೆ. ಆ ಹಿನ್ನೆಲೆಯಲ್ಲಿ ಪಾಲಿಕೆಯಲ್ಲಿಯೂ ಬ್ಯಾರಿಯರ್ ಅಳವಡಿಸಿಕೊಳ್ಳಲು ಚಿಂತನೆ ನಡೆಸಲಾಗುತ್ತಿದೆ. ಅದರಂತೆ ಪ್ರಾಯೋಗಿಕವಾಗಿ ಮೂರು ಕಡೆ ಅಳವಡಿಸಲಾಗಿದೆ. ರಾಜಕಾಲುವೆಯ ನಿಗದಿತ ಸ್ಥಳದಲ್ಲಿ ಟ್ರ್ಯಾಶ್ ಬ್ಯಾರಿಯರ್‌ಗಳನ್ನು ಅಳವಡಿಸಲಾಗುತ್ತದೆ. ಆ ಬ್ಯಾರಿಯರ್ ನೀರಿನಲ್ಲಿ ತೇಲಿಬರುವ ತ್ಯಾಜ್ಯ ಮುಂದೆ ಹೋಗದಂತೆ ತಡೆಯುತ್ತದೆ. ಹೀಗೆ ಒಂದು ಕಡೆ ಸಂಗ್ರಹವಾದ ತ್ಯಾಜ್ಯವನ್ನು ಪಾಲಿಕೆಯ ಸಿಬ್ಬಂದಿ ಎರಡು ದಿನಕ್ಕೊಮ್ಮೆ ತೆರವುಗೊಳಿಸುತ್ತಾರೆ.
ಹೂಳು ಸಂಗ್ರಹ ತೊಟ್ಟಿ ನಿರ್ಮಾಣ: ಮುಳುಗುವ ತ್ಯಾಜ್ಯ ಹಾಗೂ ಹೂಳು ತೆಗೆಯಲು ನಿಗದಿತ ಸ್ಥಳಗಳಲ್ಲಿ ಹೂಳು ಸಂಗ್ರಹ ತೊಟ್ಟಿಗಳನ್ನು ಆನೇಪಾಳ್ಯ, ದೊಮ್ಮಲೂರು ಬಳಿ ನಿರ್ಮಿಸಲಾಗಿದೆ. ತೊಟ್ಟಿಗಳು ಎರಡು ಮೀಟರ್ ಉದ್ದ, ಒಂದು ಮೀಟರ್ ಅಗಲ ಹಾಗೂ ಒಂದು ಮೀಟರ್ ಆಳ ಇರಲಿದ್ದು, ಕಾಲುವೆಗೆ ಅಡ್ಡಲಾಗಿ ಸಾಲು ತೊಟ್ಟಿಗಳನ್ನು ನಿರ್ಮಿಸಲಾಗುತ್ತದೆ. ಆ ತೊಟ್ಟಿಗಳಲ್ಲಿ ಶೇಖರಣೆಯಾಗುವ ಹೂಳು ಹಾಗೂ ತ್ಯಾಜ್ಯವನ್ನು ಪಾಲಿಕೆಯ ಸಿಬ್ಬಂದಿ ಸುಲಭವಾಗಿ ತೆರವುಗೊಳಿಸಲಿದ್ದಾರೆ.
ಹೊಣೆಯಿಂದ ತಪ್ಪಿಸಿಕೊಂಡ ಪಾಲಿಕೆ: ರಾಜಕಾಲುವೆಗಳಲ್ಲಿ ಶೇಖರಣೆಯಾಗುವ ಕಸವನ್ನು ತೆರವು ಮಾಡಲು ಬಿಬಿಎಂಪಿ ವಾರ್ಷಿಕ ನೀರುಗಾಲುವೆ ನಿರ್ವಹಣೆಗೆ ಗುತ್ತಿಗೆ ಕರೆದಿತ್ತು. ಅದರಂತೆ ಯೋಗಾ ಆ್ಯಂಡ್ ಕಂಪನಿಗೆ 36 ಕೋಟಿ ರೂ.ಗಳಿಗೆ ವಾರ್ಷಿಕ ಗುತ್ತಿಗೆ ನೀಡಿದೆ.
ಕಾಮಗಾರಿ ಸ್ಥಳಗಳಲ್ಲಿಲ್ಲ ಸುರಕ್ಷತೆ: ಬಿಬಿಎಂಪಿ ವತಿಯಿಂದ ನಗರದ ವಿವಿಧೆಡೆಗಳಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿ ಸ್ಥಳಗಳಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೆತ್ತಿಕೊಳ್ಳದಿರುವುದು ಬೆಳಕಿಗೆ ಬಂದಿದ್ದು, ಇದರಿಂದ ಅಪಘಾತಗಳು ಸಂಭವಿಸುವ ಆತಂಕ ಎದುರಾಗಿದೆ. ನಗರದ ಪ್ರತಿಯೊಂದು ಭಾಗಗಳಲ್ಲಿ ಒಂದಿಲ್ಲೊಂದು ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಪ್ರದೇಶದಲ್ಲಿ ತೆಗೆದುಕೊಳ್ಳಬೇಕಾದ ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೆ ಸಾರ್ವಜನಿಕರ ಸುರಕ್ಷತೆಯನ್ನು ಗುತ್ತಿಗೆದಾರರು ಕಡೆಗಣಿಸಿದ್ದಾರೆ.
ನಗರದಲ್ಲಿ ಪ್ರತಿದಿನ ಸಾವಿರಾರು ಜನ ಸಂಚರಿಸುವ ಅರಮನೆ ರಸ್ತೆ, ಅವಿನ್ಯೂ ರಸ್ತೆ , ಗಾಂಧಿನಗರ, ಮಾರುಕಟ್ಟೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಟೆಂಡರ್ ಶ್ಯೂರ್, ಒಳಚರಂಡಿ ಪೈಪ್ ಅಳವಡಿಕೆ, ರಾಜಕಾಲುವೆಗಳ ಹೂಳೆತ್ತುವಿಕೆ ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಈ ಕಾಮಗಾರಿ ನಡೆಸಲು ಬೇಕಾದ ಕನಿಷ್ಠ ಸುರಕ್ಷತಾ ಕ್ರಮಗಳನ್ನು ಬಿಬಿಎಂಪಿ ತೆಗೆದುಕೊಂಡಿಲ್ಲ. ಒಳಚರಂಡಿ ಪೈಪ್‌ಗಳು ಅರ್ಧ ರಸ್ತೆಗಳನ್ನು ನುಂಗಿಕೊಂಡಿದ್ದು, ಅಡ್ಡಾದಿಡ್ಡಿ ಬಿದ್ದಿವೆ.
ಎಚ್ಚರಿಕೆಯ ನಾಮಫಲಕವೇ ಇಲ್ಲ!: ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ ಕಾಮಗಾರಿ ನಡೆಯುತ್ತಿದೆ ನಿಧಾನವಾಗಿ ಚಲಿಸಿ ಎನ್ನುವ ಸಣ್ಣ ಎಚ್ಚರಿಕೆ ಫಲಕವೂ ಕಾಣಸಿಗುವುದಿಲ್ಲ. ಕಾಮಗಾರಿ ನಡೆಸುತ್ತಿರುವವರು (ಗುತ್ತಿಗೆದಾರರು) ವಿವರ, ಕಾಲಾವಧಿ, ವೆಚ್ಚದ ಕುರಿತು ಮಾಹಿತಿ ಫಲಕ ಅಳವಡಿಸಬೇಕೆಂಬ ನಿಯಮವಿದೆ. ಆದರೆ, ಬಿಬಿಎಂಪಿ ನಡೆಸುತ್ತಿರುವ ಕಾಮಗಾರಿ ಪ್ರದೇಶದಲ್ಲಿ ಇದ್ಯಾವುದೂ ಕಾಣಸಿಗುವುದಿಲ್ಲ. ಕಾಮಗಾರಿ ಮಾರ್ಗದಲ್ಲಿ ಸಣ್ಣ ಬ್ಯಾರಿಕೇಡ್ ಸಹ ಇಲ್ಲ. ಕಡ್ಡಾಯ ನಿಯಮಗಳಲ್ಲಿ ಒಂದಂಶವೂ ನಗರದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಕಾಮಗಾರಿ ಸ್ಥಳಗಳಲ್ಲಿ ಕಾಣುವುದಿಲ್ಲ.
ಬಾಯ್ತೆರೆದಿರುವ ರಸ್ತೆಗುಂಡಿಗಳು!: ಕಾಮಗಾರಿ ನಡೆಯುತ್ತಿರುವ ಬಹುತೇಕ ಪ್ರದೇಶಗಳಲ್ಲಿ ಗುಂಡಿಗಳು ಬಾಯ್ತೆರೆದಿದ್ದು, ಮಳೆ ಸಮಯದಲ್ಲಿ ಪಾದಚಾರಿಗಳು ಕಾಲಿಟ್ಟರೆ ಅದರ ಸುಳಿಗೆ ಸಿಲುಕಿ, ಅಪಘಾತಕ್ಕೆ ಒಳಗಾಗುವುದು ಕಟಿಟ್ಟ ಬುತ್ತಿ. ಬಿಬಿಎಂಪಿ ರಸ್ತೆಗಳಿಗೆ ಹಾಕಿರುವ ಡಾಂಬರು ಸಹ ಕಿತ್ತುಕೊಂಡು ಬಂದಿದೆ. ಮಳೆಗಾಲದಲ್ಲಿ ಮತ್ತೆ ಡಾಂಬರೀಕರಣ ನಡೆಯುವುದಿಲ್ಲ. ಈ ಗುಂಡಿಗಳನ್ನು ತಪ್ಪಿಸಲು ಹೋಗಿ ಸವಾರರು ಅಪಘಾತಕ್ಕೆ ಒಳಗಾಗುವುದು ತಪ್ಪುತ್ತಿಲ್ಲ.
ಅಪಘಾತಗಳಿಂದ ಪಾಠ ಕಲಿಯದ ಬಿಬಿಎಂಪಿ: ಕಾಮಗಾರಿಗೆಂದು ತೋಡಿದ್ದ ಹಳ್ಳಕ್ಕೆ ಬಿದ್ದು ಸಾವನಪ್ಪಿದ ಬೈಕ್ ಸವಾರ, ಬಾರಿ ಮಳೆಗೆ ಒಳಚರಂಡಿ ನೀರಿನಲ್ಲಿ ಮಗು ಕೊಚ್ಚಿಕೊಂಡು ಹೋದ ಪ್ರಕರಣಗಳು ನಡೆದರೂ ಬಿಬಿಎಂಪಿ ಎಚ್ಚೆತ್ತುಕೊಂಡಿಲ್ಲ. ಬಿಬಿಎಂಪಿಗೆ ಈ ಘಟನೆಗಳು ಪಾಠವಾಗಬೇಕಿತ್ತು. ಅವಘಡಗಳಿಂದಲೂ ಪಾಠ ಕಲಿಯದೆ ಇರುವುದು ದುರಂತವೇ ಸರಿ.
ಪ್ರತಿಬಾರಿಯೂ ಬಿಎಂಪಿಯ ಪ್ರಹಸನ: ನಗರದಲ್ಲಿ ಯಾವುದೇ ದುರಂತ ಸಂಭವಿಸಲಿ ಬಿಬಿಎಂಪಿ ಸಿದ್ಧ ಪರಿಹಾರ ಸೂತ್ರಕ್ಕೆ ಜೋತು ಬಿದ್ದಿದೆ. ಮೃತಪಟ್ಟವರಿಗೆ 5 ಲಕ್ಷರೂ. ಗಾಯಗೊಂಡವರಿಗೆ 2 ಲಕ್ಷ ರೂ. ಬಿಬಿಎಂಪಿಗೆ ಸೇರಿದ ಕಾಮಗಾರಿಯಲ್ಲಿ ಮೃತಪಟ್ಟರೆ ಬಿಬಿಎಂಪಿ ಮಾಡುವ ಮೊದಲ ಕೆಲಸವಿದು. ಇದಾದ ಮೇಲೆ ಮಾಧ್ಯಮದ ಮುಂದೆ ಒಂದಷ್ಟು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಂತೆ ಪ್ರತಿಕ್ರಿಯೆ ನೀಡುವುದು ಅಲ್ಲಿಗೆ ಆ ಪ್ರಕರಣ ಮುಗಿದಂತೆ !
ಅಂಕಿ-ಅಂಶಗಳು– 842 ಕಿ.ಮೀ. ನಗರದಲ್ಲಿರುವ ರಾಜಕಾಲುವೆಗಳ ಉದ್ದ
– 399 ಕಿ.ಮೀ. ತಡೆಗೋಡೆ ಪೂರ್ಣಗೊಂಡಿರುವುದು
– 150 ಕಿ.ಮೀ. ತಡೆಗೋಡೆ ಕಾರ್ಯ ಪ್ರಗತಿಯಲ್ಲಿರುವುದು
– 1,100 ಕೋಟಿ ರೂ. ಪ್ರಗತಿಯಲ್ಲಿರುವ ಕಾಮಗಾರಿಗಳ ವೆಚ್ಚ
– 182 ಸಂಭವನೀಯ ಮಳೆ ಅನಾಹುತ ಪ್ರದೇಶಗಳು
– 72 ನಗರದಲ್ಲಿನ ನಿಯಂತ್ರಣ ಕೊಠಡಿಗಳ ಸಂಖ್ಯೆ
– 100 ಮಳೆ ಪ್ರಮಾಣ ಅಳೆಯುವ ಯಂತ್ರಗಳು
– 25 ನೀರಿನ ಮಟ್ಟ ಅಳೆಯುವ ಸೆನ್ಸಾರ್‌ಗಳು
– 28 ಮರ ತೆರವುಗೊಳಿಸುವ ತಂಡಗಳು ಮಳೆಗಾಲಕ್ಕೆ ಮೊದಲೇ ನಗರದಲ್ಲಿ ಬೀಳುವ ಸ್ಥಿತಿಯಲ್ಲಿರುವ ಹಾಗೂ ಒಣಗಿರುವ ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಪಾಲಿಕೆ ಮುಂದಾಗಬೇಕು. ಅದರಲ್ಲಿಯೂ ಪಾಲಿಕೆಯಿಂದ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಂದ ಮರ ಬೇರುಗಳಿಗೆ ಅಪಾರ ಗಾಯಗಳಾಗಿರುತ್ತವೆ. ಇದರಿಂದಾಗಿ ಮರಗಳ ಸಮತೋಲನ ಕಳೆದುಕೊಳ್ಳುತ್ತವೆ. ಜೋರಾಗಿ ಗಾಳಿ ಬೀಸಿದಾಗ ಮರಗಳು ಉರುಳುತ್ತಿವೆ. ನಗರದಲ್ಲಿ ನೆಡಬೇಕಾದ ಮರಗಳ ಕುರಿತಂತೆ ಸಮಗ್ರ ವರದಿ ನೀಡಿದರೂ ಪಾಲಿಕೆ ಮಾತ್ರ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ.
-ಯಲ್ಲಪ್ಪರೆಡ್ಡಿ, ಪರಸರ ತಜ್ಞ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಪಾಲಿಕೆಯಿಂದ ಪ್ರಸಕ್ತ ಸಾಲಿನಲ್ಲಿ ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜಕಾಲುವೆಗಳ ಸುತ್ತ ಮುತ್ತಲಿನ ಪ್ರದೇಶದಲ್ಲಿನ ತಡೆಗೋಡೆಗಳನ್ನು ಎತ್ತರಿಸಬೇಕು. ತಗ್ಗು ಪ್ರದೇಶ ಮತ್ತು ಕೆರೆಗಳಲ್ಲಿ ಹೂಳು ತೆಗೆಯಬೇಕು. ಒಳಚರಂಡಿ ನೀರು ಹರಿಯದಂತೆ ತ್ಯಾಜ್ಯನೀರು ಶುದ್ಧೀಕರಣ ಘಟಕಗಳನ್ನು ಅಳವಡಿಸಬೇಕಿದೆ.
-ರವಿಚಂದರ್, ನಗರ ತಜ್ಞ * ವೆಂ. ಸುನೀಲ್‌ಕುಮಾರ್/ ಹಿತೇಶ್ ವೈ