Advertisement
ರಾಜ್ಯದಲ್ಲಿ ವಿವಿಧ ಹಂತಗಳಲ್ಲಿರುವ ನೀರಾವರಿ ಯೋಜನೆಗಳಿಗೆ ಅನುಮತಿ ಮತ್ತು ಅನುದಾನ, ಹೊಸ ಮಾರ್ಗಗಳ ನಿರ್ಮಾಣ ಮತ್ತು ಇರುವ ಮಾರ್ಗಗಳ ಮೇಲ್ದರ್ಜೆಗೆ ಕ್ರಮ, ಬೆಂಗಳೂರಿನ ಸಂಚಾರ ದಟ್ಟಣೆ ನಿರ್ವಹಣೆಗೆ ಅಗತ್ಯವಿರುವ ಉಪ ನಗರ ರೈಲು ಹಾಗೂ ವರ್ತುಲ ರೈಲು ಯೋಜನೆ ಹೀಗೆ ಹತ್ತಾರು ನಿರೀಕ್ಷೆಗಳು ಗರಿಗೆದರಿದ್ದು, ಇದ ರಿಂದ ಎಲ್ಲರ ಚಿತ್ತ ಕೇಂದ್ರದ ಬಜೆಟ್‌ನತ್ತ ನೆಟ್ಟಿದೆ.
ಹಲವು ಹೊಸ ಮಾರ್ಗಗಳು, ಜೋಡಿ ಮಾರ್ಗಗಳ ಅಭಿವೃದ್ಧಿ, ವಿದ್ಯುದೀಕರಣ, ಹೊಸ ರೈಲು, ವಿಭಾಗಗಳಿಗಾಗಿ ರಾಜ್ಯದ ರೈಲ್ವೇ ಜಾಲ ಎದುರುನೋಡುತ್ತಿದೆ. ಅವುಗಳ ವಿವರ ಇಲ್ಲಿದೆ.
ಗಿಣಿಗೆರ- ಗಂಗಾವತಿ- ರಾಯಚೂರು, ತುಮಕೂರು- ಚಿತ್ರದುರ್ಗ- ದಾವಣಗೆರೆ, ತುಮಕೂರು- ಮಧುಗಿರಿ- ರಾಯದುರ್ಗ, ದಾವಣಗೆರೆ- ಬೆಳಗಾವಿ (ಈಗ ಸೊಲ್ಲಾಪುರವರೆಗೆ ವಿಸ್ತರಣೆಗೆ ಪ್ರಸ್ತಾವನೆ ಇದೆ), ಗದಗ- ವಾಡಿಯಲ್ಲಿ ಹೊಸ ರೈಲು ಮಾರ್ಗಗಳ ನಿರ್ಮಾಣ ಆಗಬೇಕಿದ್ದು, ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದೆ.
ಚಾಮರಾಜನಗರ- ಕೊಳ್ಳೇಗಾಲ- ಹೆಜ್ಜಾಲ ನಡುವೆ ಹೊಸ ಮಾರ್ಗದ ಯೋಜನೆ ಇದ್ದು, ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ.
ಬೆಂಗಳೂರು- ಮೀರಜ್ ಬಹುತೇಕ ಮುಗಿದಿದ್ದು, ಅಲ್ಲಲ್ಲಿ ಕಾಮಗಾರಿ ಬಾಕಿ ಇದೆ. ಇನ್ನು 44 ಕಿ.ಮೀ. ಉದ್ದದ ಗದಗ- ಹೊಟಗಿ ಮತ್ತು 44 ಕಿ.ಮೀ. ಉದ್ದದ ಬೆಂಗಳೂರು ವಾಂಡಾಲ ನಡುವೆ ಜೋಡಿ ಮಾರ್ಗಗಳ ನಿರ್ಮಾಣ ಆಗಬೇಕಿದೆ.
ಬೆಂಗಳೂರು- ಮೀರಜ್ ನಡುವೆ ವಿದ್ಯುದೀಕರಣಗೊಳ್ಳಬೇಕಿದೆ. ಬೆಂಗಳೂರು- ಹಾಸನ ನಡುವೆ ವಿದ್ಯುದ್ದೀಕರಣಗೊಂಡಿದ್ದರೂ, ಹಾಸನ ಯಾರ್ಡ್ ಇನ್ನೂ ಬಾಕಿ ಇದೆ.
ಬೆಂಗಳೂರು- ಕಲಬುರಗಿ- ಬೀದರ್ ನಡುವೆ ಮತ್ತೂಂದು ರೈಲಿನ ಆವಶ್ಯಕತೆ ಇದೆ.
ಬೆಂಗಳೂರು ವಿಭಾಗದಂತೆ ಕಲಬುರಗಿಯನ್ನೂ ವಿಭಾಗವಾಗಿ ಘೋಷಿಸಿ, ಕಾರ್ಯನಿರ್ವಹಣೆ ಚಾಲನೆ ನೀಡಬೇಕು.
ಮಂಗಳೂರು ದಕ್ಷಿಣ ರೈಲ್ವೆಯಲ್ಲೇ ಇದೆ. ಅಲ್ಲಿನ ಬಂದರಿನಿಂದ ಬರುವ ಆದಾಯವೆಲ್ಲ ದಕ್ಷಿಣ ರೈಲ್ವೇಗೆ ಹೋಗುತ್ತದೆ. ಆದರೆ ಮಂಗಳೂರಿಗೆ ಅದು ಆದ್ಯತೆ ನೀಡುತ್ತಿಲ್ಲ. ಹಾಗಾಗಿ ಅದನ್ನು ನೈಋತ್ಯ ರೈಲ್ವೇ ವ್ಯಾಪ್ತಿಗೆ ಸೇರಿಸಬೇಕು.
ಬೆಂಗಳೂರಿಗೆ ವರ್ತುಲ ರೈಲು ನಿರ್ಮಾಣ ಯೋಜನೆಗೆ ಪೂರ್ವಕಾರ್ಯಸಾಧ್ಯತಾ ಅಧ್ಯಯನ ನಡೆದಿದೆ. ಈ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಗೊಂಡು, ಸಣ್ಣ ಅನುದಾನ ನೀಡಬೇಕು.
Related Articles
ಮೇಕೆದಾಟು ಯೋಜನೆ ಅಡಿ 67 ಟಿಎಂಸಿ ನೀರನ್ನು ಹಿಡಿದಿಟ್ಟು ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆಗೆ ಉದ್ದೇಶಿಸಲಾಗಿದೆ. ಈ ಯೋಜನೆಯ ಪೂರ್ವ ಕಾರ್ಯಸಾಧ್ಯತಾ ವರದಿಗೆ ಕೇಂದ್ರ ಜಲ ಆಯೋಗದಿಂದ ಅನುಮತಿ ಪಡೆಯಲಾಗಿದೆ. ವಿಸ್ತೃತ ಯೋಜನಾ ವರದಿ (ಈಕR) ಅನ್ನು 2019ರಲ್ಲಿ ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿದೆ.
Advertisement
ಕೃಷ್ಣಾ ಮೇಲ್ದಂಡೆ ಯೋಜನೆಯು ಉತ್ತರ ಕರ್ನಾಟಕದ ಜೀವನಾಡಿಯಾಗಿದೆ. ಕೃಷ್ಣಾ ನೀರು ವಿವಾದ ನ್ಯಾಯಮಂಡಳಿ-2 2010ರಲ್ಲಿ ತೀರ್ಪನ್ನು ಪ್ರಕಟಿಸಿದ್ದು ಕರ್ನಾಟಕ ರಾಜ್ಯಕ್ಕೆ 173 ಟಿಎಂಸಿ ನೀರು ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ. ಈ ಪ್ರಮಾಣದ ನೀರಿನ ಪೈಕಿ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಮೂಲಕ 130 ಟಿಎಂಸಿ ನೀರಿನ ಬಳಕೆಗೆ ನೆರವಾಗಲಿದೆ. 16,900 ಕೋಟಿ ಮೊತ್ತದ ಈ ಯೋಜನೆಗೆ ದಶಕ ಕಳೆದರೂ ಗೆಜೆಟ್ ನೋಟಿಫಿಕೇಶನ್ ಆಗಿಲ್ಲ.
ಭದ್ರಾ ಮೇಲ್ದಂಡೆ ಯೋಜನೆಯಿಂದ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಜಿÇÉೆಯ 2,25,525 ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಒದಗಲಿದೆ. 29.90 ಟಿಎಂಸಿಯಷ್ಟು ಅಂತರ್ಜಲ ಭರ್ತಿಗೆ ನೆರವಾಗಲಿದೆ. 2023-24ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಈ ಯೋಜನೆಗೆ ಕೇಂದ್ರ ಸರಕಾರ ರೂ. 5,300 ಕೋಟಿ ಆರ್ಥಿಕ ನೆರವು ಘೋಷಿಸಿದ್ದು, ಇದುವರೆಗೆ ಯಾವುದೇ ಹಣ ಬಿಡುಗಡೆ ಆಗಿಲ್ಲ.
ಕಳಸಾ ಬಂಡೂರಿ ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗ ಸ್ವೀಕರಿಸಿದೆ. ಈ ಯೋಜನೆಗೆ ಪರಿಸರ ಇಲಾಖೆಯ ಅನುಮತಿ ಎದುರು ನೋಡಲಾಗುತ್ತಿದೆ.ರಾಜ್ಯದ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಭಾಗದ ಜನರಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಎತ್ತಿನಹೊಳೆ ಯೋಜನೆ ಪರಿಚಯಿಸಲಾಗಿದೆ. ಇದಕ್ಕೆ ಒಟ್ಟು 23,251 ಕೋಟಿ ವೆಚ್ಚ ಅಂದಾಜು ಮಾಡಲಾಗಿದ್ದು, ಈವರೆಗೆ ರೂ. 14,698 ಕೋಟಿ ವೆಚ್ಚವಾಗಿದೆ. ಕೇಂದ್ರ ಸರಕಾರದಿಂದ ಉಳಿಕೆ ಹಣ ರೂ. 9177.32 ಕೋಟಿ ನಿರೀಕ್ಷಿಸಲಾಗುತ್ತಿದೆ. ಪರಿಣಾಮ, ಆಶಯಗಳು
ಷೇರು ಮಾರುಕಟ್ಟೆ ಮೇಲೆ ಪರಿಣಾಮ
ಗುರುವಾರ ಕೇಂದ್ರ ಸರಕಾರ ಮಂಡಿಸಲಿರುವ ಮಧ್ಯಾಂತರ ಬಜೆಟ್ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಪ್ರತಿ ಬಾರಿಯೂ ಕೇಂದ್ರ ಬಜೆಟ್ ಮಂಡನೆಯಾದಾಗ ಅದರ ಪ್ರಭಾವವು ಷೇರು ಮಾರುಕಟ್ಟೆಯಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ. ಆದರೆ ಈ ಬಾರಿ ಅದರ ಪರಿಣಾಮ ಹಿಂದಿಗಿಂತ ಹೆಚ್ಚಿರಲಿದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ.
ಕಳೆದೊಂದು ವರ್ಷದಿಂದ ದೇಶದ ಷೇರು ಮಾರುಕಟ್ಟೆ ಹೆಚ್ಚು ಗಟ್ಟಿಯಾಗಿದ್ದು, ಪ್ರಸ್ತುತ ಅದು ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿದೆ. ದೇಶದಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿರುವ ವಿದೇಶಿ ಕಂಪೆನಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅದಕ್ಕೆ ಪೂರಕವಾಗಿ ಬಜೆಟ್‌ನಲ್ಲೂ ಕೆಲವು ಘೋಷಣೆಗಳನ್ನು ನಿರೀಕ್ಷಿಸಬಹುದು. ಅದು ಸಹಜವಾಗಿಯೇ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ನಿರೀಕ್ಷೆ ಹೊಂದಲಾಗಿದೆ. ಹಣಕಾಸು, ಫಾರ್ಮಾ, ಆರೋಗ್ಯ, ರಕ್ಷಣೆ ಮುಂತಾದ ಕ್ಷೇತ್ರಗಳಲ್ಲಿ ಹೂಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ. ಪ್ರಸ್ತುತ ಲಾರ್ಜ್‌ಕಾಪ್‌ಗ್ಳು ಹೆಚ್ಚು ಆಕರ್ಷಕವಾಗಿವೆ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ.
ಬಜೆಟ್ ಘೋಷಣೆ ಬಳಿಕ ನಿರ್ದಿಷ್ಟ ಷೇರುಗಳು ಖರೀದಿ – ಮಾರಾಟ ಬಿರುಸು ಪಡೆಯಲಿದ್ದು, ಅದು ನಿಷ್ಟಿ ಮತ್ತು ಸೆನ್ಸೆಕ್ಸ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ರೈಲ್ವೇ, ರಸ್ತೆ, ವಸತಿ ಕ್ಷೇತ್ರಗಳಿಗೆ ಸುಧಾರಣೆ ಕ್ರಮಗಳು
ರೈಲ್ವೇ ಮಾರ್ಗ ಮತ್ತು ಹೆದ್ದಾರಿಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿಡುವ ನಿರೀಕ್ಷೆ ಇದೆ. ದೇಶದ ಭೂ ಪ್ರಮುಖ ಸಂಪರ್ಕ ಮಾಧ್ಯಮಗಳಾದ ರೈಲ್ವೇ ಮಾರ್ಗ ಮತ್ತು ಹೆದ್ದಾರಿಗಳು ಅಭಿವೃದ್ಧಿಯಾದರೆ ದೇಶದ ಪ್ರಗತಿಗೆ ಹೊಸ ಶಕ್ತಿ ಬರಲಿದೆ. ಇದು ಪರೋಕ್ಷವಾಗಿ ಹೂಡಿಕೆ ಆಕರ್ಷಣೆಗೂ ಪೂರಕವಾಗಲಿದೆ ಎಂದು ಆರ್ಥಿಕ ಕ್ಷೇತ್ರದ ತಜ್ಞರು ಹೇಳುತ್ತಿದ್ದಾರೆ. ಜತೆಗೆ ವಸತಿ ಕ್ಷೇತ್ರಗಳ ಕಡೆಗೂ ಸರಕಾರ ಗಮನ ಹರಿಸುವ ನಿರೀಕ್ಷೆಯಿದ್ದು, ಗೃಹ ಸಾಲದಾರರಿಗೆ ಯಾವ ಕೊಡುಗೆ ನೀಡಲಿದೆ ಎಂಬುದರ ಬಗ್ಗೆ ಹೆಚ್ಚು ಕುತೂಹಲವಿದೆ.ವಸತಿ ಕ್ಷೇತ್ರಕ್ಕೆ ಘೋಷಿಸುವ ಪೂರಕ ಕ್ರಮಗಳು ರಿಯಲ್ ಎಸ್ಟೇಟ್ ಉದ್ಯಮಕ್ಕೂ ಅನುಕೂಲವಾಗಿ ದೇಶದ ಆರ್ಥಿಕ ಶಕ್ತಿಗೆ ಬಲ ತುಂಬಲಿದೆ ಎಂಬ ಲೆಕ್ಕಾಚಾರದಲ್ಲಿ ಈ ಬಾರಿಯೂ ಹೊಸ ಘೋಷಣೆಗಳ ನಿರೀಕ್ಷೆ ಇದ್ದೇ ಇದೆ. ಹೊಟೇಲ್ ಉದ್ಯಮಿಗಳ ನಿರೀಕ್ಷೆ
ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಹೊಟೇಲ್ ಉದ್ಯಮದವರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು, ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹೊಟೇಲ್ ಉದ್ಯಮಕ್ಕೆ ಮೃದು ತೆರಿಗೆ ವ್ಯವಸ್ಥೆಯನ್ನು ಸರಕಾರ ಜಾರಿಗೆ ತಂದೀತು ಎಂಬ ವಿಶ್ವಾಸ ಹೊಂದಿದ್ದಾರೆ.
ಪ್ರವಾಸಿಗರಿಗೆ ಗುಣಮಟ್ಟದ ಸೇವೆ ನೀಡುವುದಕ್ಕೆ ಪೂರಕವಾಗಿ ಹೊಟೇಲ್ ರಂಗಕ್ಕೆ ಅನುಕೂಲವಾಗುವ ರೀತಿಯ ತೆರಿಗೆಗಳನ್ನು ಘೋಷಿಸುವ ಹಾಗೂ ಈ ರಂಗಕ್ಕೆ ಅಭಿವೃದ್ಧಿಗೆ ಹೆಚ್ಚು ಮೊತ್ತ ಮೀಸಲಿಡುವ ನಿರೀಕ್ಷೆ ಹೊಟೇಲ್ ಉದ್ಯಮಿಗಳಲ್ಲಿದೆ. ಹೊಟೇಲ್ ಉದ್ಯಮಕ್ಕೆ ಪೂರಕ ತೆರಿಗೆ ಪದ್ಧತಿಗಳನ್ನು ಘೋಷಿಸಿದರೆ ಉತ್ತಮ ಹಾಗೂ ಗುಣಮಟ್ಟದ ಆತಿಥ್ಯ ಸೇವೆ ನೀಡುವ ಮೂಲಕ ಪ್ರವಾಸಿಗರನ್ನು ಸೆಳೆಯಲು ಅನುಕೂಲವಾದೀತು. ಜತೆಗೆ ಸರಕಾರ ಹೊಟೇಲ್ ರಂಗದ ಮೂಲಸೌಕರ್ಯಗಳ ಅಭಿವೃದ್ಧಿ ಕಡೆಗೂ ಗಮನ ಹರಿಸುವ ನಿರೀಕ್ಷೆ ಇದೆ ಎಂದು ಪ್ರಮುಖ ಹೊಟೇಲ್ ಉದ್ಯಮಿಗಳು ಹೇಳುತ್ತಿದ್ದಾರೆ. ರೈತರು, ಕೃಷಿಗೆ ಉತ್ತೇಜಕ ಕ್ರಮಗಳ ನಿರೀಕ್ಷೆ
ಈ ಬಾರಿಯ ಕೇಂದ್ರದ ಮಧ್ಯಾಂತರ ಬಜೆಟ್‌ನಲ್ಲಿ ರೈತರು ಮತ್ತು ಕೃಷಿ ಕ್ಷೇತ್ರಕ್ಕೆ ಉತ್ತೇಜಕ ಕ್ರಮಗಳನ್ನು ಘೋಷಿಸುವ ನಿರೀಕ್ಷೆ ಇದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಕಾಡಿರುವ ಬರ ಮತ್ತು ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೃಷಿ ಕ್ಷೇತ್ರದ ಅಭಿವೃದ್ಧಿ ಹಾಗೂ ರೈತರ ಹಿತ ಕಾಪಾಡಲು ಆಕರ್ಷಕ ಯೋಜನೆಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.