ಲಾಕ್‌ಡೌನ್ ಸಡಿಲಿಕೆ ಆದ ಬಳಿಕ ಹೊಟೇಲ್‌ಗಳು ಬಾಗಿಲು ತೆರೆದಿವೆ. ಈಗ ಗ್ರಾಹಕರಿಗೆ ಬಗೆ ಬಗೆಯ ತಿಂಡಿ, ತಿನಿಸು, ಊಟ ಲಭ್ಯವಾಗುತ್ತಿದೆ. ಆದರೆ ವ್ಯವಹಾರ ಮಾತ್ರ ಹಿಂದಿನಂತಿರುವುದಿಲ್ಲ. ಇಲ್ಲೂ ಸಾಕಷ್ಟು ಮುಂಜಾಗ್ರತೆ ವಹಿಸಲಾಗುತ್ತಿದೆ. ಆದುದರಿಂದ ಗ್ರಾಹಕರೂ ಇದಕ್ಕೆ ಪೂರಕವಾಗಿ ಸಹಕರಿಸಬೇಕು. ಹಿಂದಿನಂತೆ ಹತ್ತಿರ ಹತ್ತಿರ ಕುಳಿತುಕೊಳ್ಳುವುದಕ್ಕೆ ಅವಕಾಶವಿಲ್ಲ. ಏಕಕಾಲಕ್ಕೆ ಹೊಟೇಲ್‌ನ ಸಾಮರ್ಥ್ಯದ ಅರ್ಧದಷ್ಟು ಗ್ರಾಹಕರು ಮಾತ್ರ ಕುಳಿತುಕೊಂಡು ಆಹಾರ ಸೇವಿಸಬಹುದು. ಜನ ಹೆಚ್ಚು ಇದ್ದರೆ ಪಾರ್ಸೆಲ್ ತೆಗೆದುಕೊಂಡು ಹೋಗಬಹುದಾಗಿದೆ. ಪುನರಾರಂಭಗೊಂಡಿರುವ ಹೊಟೇಲ್‌ಗಳು ಮುಂಜಾಗ್ರತಾ ಕ್ರಮಗಳೊಂದಿಗೆ ಹೇಗೆ ಕಾರ್ಯನಿರ್ವಹಿಸುತ್ತಿವೆ ಮತ್ತು ಗ್ರಾಹಕರು ಯಾವೆಲ್ಲ ರೀತಿ ಇದಕ್ಕೆ ಸಹಕರಿಸಬೇಕಾಗುತ್ತದೆ ಎಂಬ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.
ದೀರ್ಘ ಸಮಯದ ಬಳಿಕ ಹೊಟೇಲ್‌ಗಳು ವ್ಯವಹಾರ ಆರಂಭಿಸಿವೆ. ಗ್ರಾಹಕರ ಹಿತದೃಷ್ಟಿಯಿಂದ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗುತ್ತಿದೆ. ಗ್ರಾಹಕರ ಸುರಕ್ಷತೆಗೆ ಅತೀ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹೊಟೇಲ್‌ಗಳಲ್ಲಿನ ಸೇವೆ ಯಾವ ರೀತಿ ಇದೆ. ಗ್ರಾಹಕರು ಯಾವ ರೀತಿ ಸಹಕರಿಸಬೇಕು. ಇಲ್ಲಿದೆ ಮಾಹಿತಿ
ಎಲ್ಲೆಡೆಯಂತೆ ಹೊಟೇಲ್‌ಗಳಲ್ಲೂ ಸಾಮಾಜಿಕ ಅಂತರ ಸಹಿತ ಸರಕಾರದ ಮಾರ್ಗಸೂಚಿ ಕ್ರಮಗಳನ್ನು ಪಾಲಿಸಲಾಗುತ್ತದೆ. ಅದಕ್ಕೆ ತಕ್ಕಂತೆ ಕುಳಿತುಕೊಳ್ಳುವುದಕ್ಕೆ ಆಸನ ವ್ಯವಸ್ಥೆ ಮಾಡಲಾಗಿರುತ್ತದೆ. ಟೇಬಲ್ ಸಾಮರ್ಥ್ಯದ ಅರ್ಧದಷ್ಟು ಜನರಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶವಿರುತ್ತದೆ.
ಹೊಟೇಲ್‌ಗೆ ಬರುವಾಗ ಮಾಸ್ಕ್ ಧರಿಸುವುದು ಕಡ್ಡಾಯ. ಎಲ್ಲ ಹೊಟೇಲ್‌ಗಳ ಬಾಗಿಲಲ್ಲಿ ಸ್ಯಾನಿಟೈಸರ್ ಇಡಲಾಗಿದ್ದು, ಕೈ ಸ್ವತ್ಛಗೊಳಿಸಿ ಒಳಗೆ ಪ್ರವೇಶಿಸಬೇಕು. ಕೆಲವು ಹೊಟೇಲ್‌ಗಳಲ್ಲಿ ಹೆಸರು, ವಿಳಾಸ, ಫೋನ್ ನಂಬರ್‌ಗಳನ್ನು ದಾಖಲಿಸಲಾಗುತ್ತದೆ. ಗ್ರಾಹಕರು ಇದಕ್ಕೆ ಸಹಕರಿಸಬೇಕಾಗಿದೆ.
ಪ್ರತಿ ಗ್ರಾಹಕರ ಊಟವಾದ ತತ್‌ಕ್ಷಣ ಬಳಸಿದ ಎಲ್ಲ ಪ್ಲೇಟ್, ನೀರಿನ ಗ್ಲಾಸ್ ಹಾಗೂ ಕುಳಿತ ಸ್ಥಳವನ್ನು ಸ್ಯಾನಿಟೈಸರ್ ಬಳಸಿ ಸ್ವಚ್ಛಗೊಳಿಸಲಾಗುತ್ತಿದೆ. ಇದಕ್ಕೆ ಕೆಲವು ಸಮಯ ಬೇಕಾಗುವುದರಿಂದ ಗ್ರಾಹಕರು ಸ್ವಲ್ಪ ಸಮಯ ಕಾಯಬೇಕಾಗುತ್ತದೆ.
ಸರಕಾರದ ಮಾರ್ಗಸೂಚಿಯಂತೆ ಹೊಟೇಲ್‌ಗಳಲ್ಲಿ ಎಸಿ ಚಾಲು ಮಾಡುತ್ತಿಲ್ಲ. ಮೆನು ಪಟ್ಟಿ ಕೂಡ ಕೆಲವು ಹೊಟೇಲ್‌ಗಳಲ್ಲಿ ಬದಲಾಗಿದೆ. ಕೈಗೆ ಮೆನು ಪುಸ್ತಕ ನೀಡಲಾಗುವುದಿಲ್ಲ. ಬಳಸಿ ಎಸೆಯುವ ಮೆನು ಕೂಡ ಬಂದಿದೆ. ಇನ್ನು ಕೆಲವೆಡೆ ಎಲ್ಲರಿಗೂ ಕಾಣುವಂತೆ 2-3 ಕಡೆಗಳಲ್ಲಿ ಮೆನು ತೂಗು ಹಾಕಲಾಗಿದೆ.
ಕೆಮ್ಮು, ಶೀತ, ಉಸಿರಾಟದ ಸಮಸ್ಯೆ ಸಹಿತ ವಿವಿಧ ಆರೋಗ್ಯ ಸಮಸ್ಯೆಗಳಿರುವವರಿಗೆ ಹೊಟೇಲ್‌ಗೆ ಪ್ರವೇಶಕ್ಕೆ ಅವಕಾಶವಿಲ್ಲ. ಕೆಲವು ಹೊಟೇಲ್‌ಗಳಲ್ಲಿ ಗ್ರಾಹಕರ ದೇಹದ ಉಷ್ಣಾಂಶವನ್ನು ಪರೀಕ್ಷಿಸಿ ಹೊಟೇಲ್ ಒಳಗೆ ಕಳುಹಿಸಲಾಗುತ್ತದೆ.
ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಸಿಬಂದಿ ಕಡ್ಡಾಯವಾಗಿ ಮಾಸ್ಕ್, ಗ್ಲೌಸ್ ಬಳಸುತ್ತಾರೆ. ಸಿಬಂದಿಯ ದೇಹದ ಉಷ್ಣಾಂಶವನ್ನು ಪ್ರತಿದಿನ ಪರೀಕ್ಷಿಸಲಾಗುತ್ತದೆ. ಅವರುಕೈಗಳನ್ನು ಆಗಾಗ್ಗೆ ಸ್ಯಾನಿಟೈಸರ್‌ನಿಂದ ಸ್ವತ್ಛಗೊಳಿಸಿ ಸೇವೆ ನೀಡುತ್ತಿದ್ದಾರೆ.
ನಿಮಗೆ ಏನಾದರೂ ಸಂಶಯ, ಪ್ರಶ್ನೆಗಳಿದ್ದರೆ ಈ ನಂಬರಿಗೆ ವಾಟ್ಸ್‌ಆ್ಯಪ್ ಮಾಡಿ.
9148594259