ನವದೆಹಲಿ: ದೆಹಲಿಯಲ್ಲಿ ನೀರಿನ ಕೊರತೆ ಹೆಚ್ಚಿ ಜನರು ಪರದಾಡುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರವನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ನೀರನ್ನು ಪೋಲು ಮಾಡುತ್ತಿರುವುದರ ಬಗ್ಗೆ ಹಾಗೂ ಟ್ಯಾಂಕರ್ ಮಾಫಿಯಾ ಕುರಿತಂತೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದೆ.
ಹಿಮಾಚಲ ಪ್ರದೇಶದಿಂದ ಹೆಚ್ಚುವರಿ ನೀರನ್ನು ಒದಗಿಸಲಾಗಿದೆ ಅದನ್ನು ಹರ್ಯಾಣ ಸರ್ಕಾರ ದೆಹಲಿಗೆ ಬಿಡುಗಡೆಗೊಳಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ದಿಲ್ಲಿ ಸರ್ಕಾರ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿತ್ತು. ನ್ಯಾ.ಪ್ರಶಾಂತ್ ಕುಮಾರ್ ಮಿಶ್ರಾ ಹಾಗೂ ನ್ಯಾ.ಪ್ರಸನ್ನ ಬಿ ವರಾಲೆ ಅವರ ರಜಾಕಾಲದ ನ್ಯಾಯಪೀಠವು ಈ ಅರ್ಜಿ ಆಲಿಸಿದೆ.
ಇದೇ ವೇಳೆ ದಿಲ್ಲಿ ಸರ್ಕಾರವನ್ನು ತರಾಟೆ ತೆಗೆದುಕೊಂಡು, ದಿಲ್ಲಿಯಲ್ಲಿ ಟ್ಯಾಂಕರ್‌ಗಳಿಗೆ ತುಂಬಿಸಿ ಮಾರಾಟ ಮಾಡಲು ನೀರು ಇದೆ ಎನ್ನುವುದಾದರೆ ಅದೇ ನೀರು ಏಕೆ ಪೈಪ್‌ಲೈನ್‌ಗಳಲ್ಲಿ ಬರುವುದಿಲ್ಲ? ಈ ಮಾಫಿಯಾ ಕುರಿತಂತೆ ಯಾವ ಕ್ರಮ ಕೈಗೊಂಡಿದ್ದೀರಿ? ನಿಮಗೆ ಇದನ್ನು ಪರಿಹರಿಸಲು ಸಾಧ್ಯವಾಗದಿದ್ದರೆ ಹೇಳಿ, ನಾವು ದಿಲ್ಲಿ ಪೊಲೀಸರಿಗೆ ಈ ಬಗ್ಗೆ ಕ್ರಮಕ್ಕೆ ಸೂಚಿಸುತ್ತೇವೆ ಎಂದೂ ಹೇಳಿದೆ.
ಏತನ್ಮಧ್ಯೆ, ನೀರು ಪೋಲಾಗುತ್ತಿರುವುದನ್ನು ತಡೆಗಟ್ಟಲು ಪೈಪ್‌ಲೈನ್‌ಗಳ ಪರಿಶೀಲನೆಗಾಗಿ ತಂಡ ರಚಿಸಿ, ಎಲ್ಲಾ ಪೈಪ್‌ಲೈನ್‌ಗಳನ್ನು ಪರಿಶೀಲಿಸಿ ನೀರು ಸೋರಿಕೆಯಾಗುತ್ತಿದ್ದಲ್ಲಿ ಅದನ್ನು 12 ಗಂಟೆ ಒಳಗೆ ಸರಿಪಡಿಸಲು ಆದೇಶಿಸಲಾಗಿದೆ ಎಂದು ದಿಲ್ಲಿ ಜಲ ಸಚಿವೆ ಆತಿಶಿ ಹೇಳಿದ್ದಾರೆ.
ಮತ್ತೂಂದೆಡೆ ದಿಲ್ಲಿ ಬಿಜೆಪಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ್ ಅವರು ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿ ಟ್ಯಾಂಕರ್ ಮಾಫಿಯಾ ಬಗ್ಗೆ ಎಫ್ಐಆರ್ ದಾಖಲಿಸಿ, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Falls: ಕಪಿಲತೀರ್ಥ ಜಲಪಾತ…: ಇದು ಕಲ್ಯಾಣ ಕರ್ನಾಟಕದಲ್ಲಿ ಇರೋ ಏಕೈಕ ಜಲಪಾತ