Advertisement

ಕಾವೇರಿ ನದಿ ನೀರಿನ ಹಂಚಿಕೆ ವಿಚಾರ ಸದ್ಯಕ್ಕೆ ಇತ್ಯರ್ಥವಿಲ್ಲ?

12:54 PM Apr 01, 2018 | |

ನವದೆಹಲಿ: ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಜಾಣನಡೆ ಅನುಸರಿಸಿರುವ ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್‌ನಲ್ಲಿ ಮತ್ತೆ “ಸ್ಕೀಮ್‌’  ವಿಚಾರವನ್ನೇ ಪ್ರಸ್ತಾಪಿಸಿ, ಮೂರು ತಿಂಗಳ ಕಾಲಾವಕಾಶ ಕೇಳಿದೆ. ಒಂದು ವೇಳೆ ಸುಪ್ರೀಂ ಕೋರ್ಟ್‌ ಈ ಅರ್ಜಿಗೆ ಮಾನ್ಯ ಮಾಡಿದರೆ, ಮಳೆಗಾಲದ ಆರಂಭದ ವರೆಗೂ ಕಾವೇರಿ ಹಂಚಿಕೆ ವಿವಾದ ತಲೆದೋರದು. 

Advertisement

ಇದಕ್ಕೆ ಪ್ರತಿಯಾಗಿ ತಮಿಳುನಾಡು ಸರ್ಕಾರ, ಕೇಂದ್ರ ಸರ್ಕಾರದ  ವಿರುದ್ಧವೇ ನ್ಯಾಯಾಂಗ ನಿಂದನೆ ಅರ್ಜಿಸಲ್ಲಿಸಿದೆ. ಸ್ಕೀಮ್‌ ಬಗ್ಗೆ ಸ್ಪಷ್ಟನೆ ಕೊಡು ವಂತೆ ಶನಿವಾರವೇ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಸೋಮವಾರ ಮುಖ್ಯ ನ್ಯಾ. ದೀಪಕ್‌ ಮಿಶ್ರಾ ಅವರ ಪೀಠದ ಮುಂದೆಯೇ ವಿಚಾರಣೆಗೆ ಬರುವ ಸಾಧ್ಯತೆ ಇದೆ. ತೀರ್ಪಿನಲ್ಲಿ ಸ್ಕೀಮ್‌ ರೂಪಿಸುವಂತೆ ನೀಡಿದ ಆರು ವಾರಗಳ ಗಡುವು ಗುರುವಾರಕ್ಕೆ ಮುಕ್ತಾಯವಾ ಗಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಈ ಅರ್ಜಿ ಸಲ್ಲಿಸಿದೆ. 

ಕೇಂದ್ರ ಸರ್ಕಾರ ಕೇಳಿರುವ ಸ್ಪಷ್ಟನೆಯೇನು?: ತಮಿಳು  ನಾಡು ಹಾಗೂ ಕರ್ನಾಟಕ ರಾಜ್ಯಗಳು ಸುಪ್ರೀಂಕೋರ್ಟ್‌ ತೀರ್ಪನ್ನು ವಿಭಿನ್ನವಾಗಿ ವ್ಯಾಖ್ಯಾನ  ಮಾಡುತ್ತಿದ್ದು, ತದ್ವಿರುದ್ಧ ನಿಲುವು ತಳೆದಿವೆ. ರಾಜ್ಯಗಳಿಗೆ ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಆದೇಶವನ್ನು ಪಾಲಿಸುವುದನ್ನು ಮೇಲ್ವಿ  ಚಾರಣೆ  ನಡೆಸಲು ಸ್ಕೀಮ್‌ ರಚಿಸುವಂತೆ ಸುಪ್ರೀಂಕೋರ್ಟ್‌ ಸೂಚಿಸಿದ್ದು,

ಈ ಹಿಂದೆ ಕಾವೇರಿ ಜಲ ವಿವಾದ ನ್ಯಾಯಮಂಡಳಿ ಪ್ರಸ್ತಾಪಿಸಿದ್ದಂಥ ಕಾವೇರಿ ನಿರ್ವಹಣೆ ಮಂಡಳಿಯನ್ನು ರಚಿಸು ವಂತೆ ತಮಿಳುನಾಡು ಆಗ್ರಹಿಸುತ್ತಿದೆ. ಆದರೆ ಕರ್ನಾಟಕ ಸರ್ಕಾರವು ಮಂಡಳಿ ರಚನೆಗೆ ವಿರೋಧ ವ್ಯಕ್ತಪಡಿಸಿದ್ದು,  ಸುಪ್ರೀಂಕೋರ್ಟ್‌ ಕೇವಲ ಸ್ಕೀಮ್‌ ಎಂಬುದಾಗಿ ತೀರ್ಪಿನಲ್ಲಿ ಉಲ್ಲೇಖೀಸಿದೆ ಎಂದಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ನಡೆಸಿದ ಸಭೆಯಲ್ಲಿ ರಾಜ್ಯಗಳು ಈ ಬಗ್ಗೆ  ಒಮ್ಮತಕ್ಕೆ ಬಂದಿಲ್ಲ.

ಹೀಗಾಗಿ, ನ್ಯಾಯಮಂಡಳಿ ಈ ಹಿಂದೆ ಸೂಚಿಸಿದ್ದ ಮಂಡಳಿಗಿಂತ ವಿಭಿನ್ನವಾದ ಸ್ಕೀಮ್‌ ಅನ್ನು ನಾವು ರಚಿಸಬಹುದೇ ಎಂದು  ಸುಪ್ರೀಂ ಕೋರ್ಟನ್ನು ಕೇಂದ್ರ ಸರ್ಕಾರ ಪ್ರಶ್ನಿಸಿದೆ. ಒಂದು ವೇಳೆ ಸುಪ್ರೀಂಕೋರ್ಟ್‌ ಉಲ್ಲೇಖೀಸಿದ ಸ್ಕೀಮ್‌ ಕೂಡ ಮಂಡಳಿಯೇ ಆಗಿದ್ದರೆ, ಇನ್ನಷ್ಟು  ಸ್ಪಷ್ಟನೆ ನೀಡುವಂತೆ ಕೋರಿದೆ. ಮಂಡಳಿಯು ಆಡಳಿತಾತ್ಮಕ ಮತ್ತು ತಾಂತ್ರಿಕ ಮಂಡಳಿಯಾಗಿರಬಹುದೇ?

Advertisement

ಯಾಕೆಂದರೆ ಈ ಹಿಂದೆ ನ್ಯಾಯಮಂಡಳಿ  ಸೂಚಿಸಿದ್ದು ಕೇವಲ ತಾಂತ್ರಿಕ ಮಂಡಳಿ ಯಾಗಿತ್ತು. ನ್ಯಾಯಮಂಡಳಿಯ ಪ್ರಕಾರ ಮುಖ್ಯ ಇಂಜಿನಿಯರುಗಳು ಮತ್ತು ಇತರ ತಾಂತ್ರಿಕ ಪರಿಣಿತರು ಮಾತ್ರ ಮಂಡಳಿಯ ಸದಸ್ಯರಾಗಿರುತ್ತಿದ್ದರು. ಅಲ್ಲದೆ ಕೇವಲ ನೀರು ನಿರ್ವಹಣೆಯ ಮೇಲ್ವಿಚಾರಣೆ ಮತ್ತು ನೀರು ಹಂಚಿಕೆ ವಿಧಾನವನ್ನು ಉಭಯ ರಾಜ್ಯಗಳು ಅನುಸರಿಸುತ್ತಿವೆಯೇ ಎಂಬುದನ್ನು ನೋಡುವ ಬದಲಿಗೆ ಇತರ ಕಾರ್ಯ ನಿರ್ವಹಣೆಗಳನ್ನೂ ಮಂಡಳಿಗೆ ನಿಯೋಜಿಸಬಹುದೇ ಎಂದೂ ಕೇಂದ್ರ ಸರ್ಕಾರ ಪ್ರಶ್ನಿಸಿದೆ. 

ಚುನಾವಣೆ ಪ್ರಸ್ತಾಪ: ಹೆಚ್ಚುವರಿ ಸಮಯ ಕೋರಿರುವುದು ಹಾಗೂ ವಿಳಂಬಕ್ಕೆ ಸಮರ್ಥನೆ ಕೊಟ್ಟಿರುವ ಕೇಂದ್ರ ಸರ್ಕಾರ, ಚುನಾವಣಾ ಆಯೋಗವು  ಈಗಾಗಲೇ ಕರ್ನಾಟಕದಲ್ಲಿ ಚುನಾವಣೆ ಘೋಷಣೆ ಮಾಡಲಾಗಿದ್ದು, ಕಾವೇರಿ ನ್ಯಾಯಮಂಡಳಿ ರಚಿಸುವುದರಿಂದ ಗಂಭೀರ ಕಾನೂನು ಸುವ್ಯವಸ್ಥೆ ಸಮಸ್ಯೆ  ಉಂಟಾಗುವ ಸಾಧ್ಯತೆಯಿದೆಎಂದಿದೆ. ಚುನಾವಣೆಯ ಮಧ್ಯೆಮಂಡಳಿ ರಚಿಸಿದರೆ ಜನಾಕ್ರೋಶಕ್ಕೆ ಕಾರಣವಾಗಬಹುದು ಎಂದಿದೆ.  

ನ್ಯಾಯಾಂಗ ನಿಂದನೆ ಅರ್ಜಿ: ನಿಗದಿತ ಅವಧಿಯಲ್ಲಿ ಕೇಂದ್ರ ಸರ್ಕಾರ ಕಾವೇರಿ ಜಲ ನಿರ್ವಹಣೆ ಮಂಡಳಿ ರಚಿಸಿಲ್ಲ ಎಂದು ಆರೋಪಿಸಿ ತಮಿಳುನಾಡು ಸರ್ಕಾರ ಶನಿವಾರ ಸುಪ್ರೀಂಗೆ  ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ. ಕೇಂದ್ರ  ಸರ್ಕಾರ ಮಂಡಳಿ ರಚಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. 3 ವಾರಗಳ ನಂತರ ಕೇವಲ ಒಂದು ಸಭೆ ಕರೆಯಲಾಗಿತ್ತು.

ಆ ಸಭೆಯ ನಂತರ ಯಾವುದೇ ಪ್ರಗತಿ ಕಂಡುಬಂದಿಲ್ಲ. ಸುಪ್ರೀಂಕೋರ್ಟ್‌ ತೀರ್ಪಿಗೆ ಬದ್ಧವಾಗ ದಿರುವುದು ಮೇಲ್ನೋಟಕ್ಕೇ  ಕಾಣಿಸುತ್ತಿದೆ. ಹೀಗಾಗಿ ತಕ್ಷಣವೇ ಕಾವೇರಿ ಜಲ ನಿರ್ವಹಣೆ ಮಂಡಳಿ ಮತ್ತು ಕಾವೇರಿ ಜಲ ನಿಯಂತ್ರಣ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next