ನಿನ್ನ ನನ್ನ ಹಾದಿ ಕವಲೊಡೆದಿದೆ. ದೂರಾಗಲು ಹೊರಟವಳನ್ನು ನೋಡುತ್ತಾ ನಿಂತವನನ್ನು, ನೀ ಒಮ್ಮೆ ತಿರುಗಿ ನೋಡಬಹುದೆಂಬ ಆಸೆ ಹುಸಿಯಾಯಿತು. ಯಾವುದೋ ತಿರುವಿನಲ್ಲಿ ನೀ ಮರೆಯಾಗಿ ಹೋದೆ…
ಹೃದಯದ ಗಾಯವೇ,
ಯಾಕೋ ಈ ಮೌನ ತುಂಬಿದ ಇರುಳುಗಳು ಮುಗಿಯುವುದಿಲ್ಲ. ಒಳ್ಳೆಯದೆಲ್ಲಕ್ಕೂ ಒಂದು ಕೊನೆ ಇರುವಂತೆ. ನಮ್ಮಿಬ್ಬರ ಸಂಭ್ರಮಗಳಿಗೂ ಕೊನೆಯೆಂಬುದಿದೆ ಅನ್ನೋದನ್ನ ನಾ ಯಾವತ್ತೂ ಯೋಚಿಸಿದವನಲ್ಲ. ನೀ ತಿರುಗಿ ಬರಲಾರೆ ಅಂತ ಗೊತ್ತಿದ್ದೂ, ನಿನ್ನದೇ ಹಾದಿ ಕಾಯುವಂತೆ ಪುಸಲಾಯಿಸುವ ಮನಸ್ಸಿಗೆ ತಿಳಿಹೇಳುವುದು ಹೇಗೆಂದು ಅರಿಯದೆ ನಿಸ್ಸಹಾಯಕನಾಗಿದ್ದೇನೆ. ಆದರೂ ನಿರೀಕ್ಷೆಯನ್ನು ಕೊಲ್ಲದೆ, ವಾಸ್ತವವನ್ನು ನಿರಾಕರಿಸದೆ ಬದುಕಿದ್ದೇನೆ. ಬಿಟ್ಟು ಹೊರಡಬೇಕೆಂದು ನಿಂತವಳನ್ನು, ತಡೆದು ನಿಲ್ಲಿಸಿ “ಹೇಳಿ ಹೋಗು ಕಾರಣ’ ಅಂತ ಕೇಳಿದರೆ… ನಿನ್ನೊಳಗಿನ ಉತ್ತರಕ್ಕೆ ನಿನ್ನನ್ನು ಮರೆಯುವಂತೆ, ನನ್ನ ಮನಸನ್ನು ಕಠಿಣಗೊಳಿಸುವಷ್ಟು ಶಕ್ತಿ ಇದೆಯಾ? ಅದು ನೀನು ಬೇಕೆಂದೇ ಮಾಡಿದ ಮೋಸವಾಗಿದ್ದರೂ, ನನ್ನದು ನಿರ್ಲಜ್ಜ ಪ್ರೀತಿ.
ನಿನ್ನನ್ನು ಪಡೆದೇ ತೀರಬೇಕೆಂಬ ಅದಮ್ಯ ಹಂಬಲ ಹುಟ್ಟುಹಾಕಿದ ನಿರ್ಲಜ್ಜ ಪ್ರೀತಿ. ಹಾಗಂತ ನಿನ್ನ ದಾರಿಗೆ ನಾನು ಅಡ್ಡ ನಿಲ್ಲಲಾರೆ. ಬಲವಂತ ಮಾಡಿ ದಮ್ಮಯ್ಯ ಗುಡ್ಡೆ ಹಾಕಿದರೆ ದಕ್ಕುವುದು ಕರುಣೆಯೇ ಹೊರತು ಪ್ರೀತಿಯಲ್ಲ. ಹಾದಿಯಲ್ಲಿ ಹೆಕ್ಕಿದ ನೆನಪುಗಳ ಪುಟ್ಟ ಜೋಳಿಗೆ ಬೆನ್ನಲ್ಲಿದೆ ! ಹಾಡದಿರೋ ಸಾವಿರ ಪದಗಳ ಮೂಕ ಸೇತುವೆ ಕಣ್ಮುಂದಿದೆ!! ಎಲ್ಲ ಹೂಗಳಿಗೂ ದೇವರ ಮುಡಿಯೇರುವ ಹಂಬಲವಿದ್ದೇ ಇರುತ್ತದೆ. ಆದರೆ, ಮಣ್ಣುಪಾಲಾಗಿದ್ದೇ ಹೆಚ್ಚು. ನಿನ್ನೊಳಗನ್ನು ಅರ್ಥ ಮಾಡಿಕೊಳ್ಳಲು ನಾ ಸೋತಿದ್ದಾದರೂ ಎಲ್ಲಿ? ನಿನ್ನನ್ನು ಗೆದ್ದೆ ಎಂದುಕೊಂಡಿದ್ದು ಎಂಥಾ ಸುಳ್ಳು?! ಸುಳ್ಳೇ ಆದರೂ ಅದನ್ನೇ ನಂಬಿದ್ದ ನನಗೆ ಅದೆಷ್ಟು ಅಪ್ಯಾಯಮಾನವಾಗಿತ್ತು! ನಿನ್ನ ನಿರಾಕರಣೆಯನ್ನು ಯಾಕೆ ಹೀಗೆ ಆಭರಣದಂತೆ ಜತನವಾಗಿಟ್ಟುಕೊಂಡಿದ್ದೇನೆ?
ನೀ ಜತೆಗಿದ್ದ ಗಳಿಗೆಗಳಷ್ಟೇ ತೀವ್ರವಾಗಿ, ನೀನಿಲ್ಲದಾಗ ನಿನ್ನ ನೆನಪುಗಳನ್ನೂ ಅಷ್ಟೇ ತೀವ್ರವಾಗಿ ಪ್ರೀತಿಸಿದ್ದೆ ಗೊತ್ತಾ? ನೀ ಇರದ ಅರೆ ಘಳಿಗೆಯೂ ಈ ಬದುಕಿನಲ್ಲಿ ಉಳಿದಿಲ್ಲ. ಮೈಯ ಮಚ್ಚೆಯಂತಿರುವ ನಿನ್ನ ನೆನಪುಗಳನ್ನು ನನ್ನಿಂದ ಕಿತ್ತುಕೊಳ್ಳಲು ನಿಂಗೆ ಸಾಧ್ಯವಾ ಹೇಳು? ಅದು ಮುಂಜಾನೆ ಚುಮು ಚುಮು ಇಬ್ಬನಿಯಿಂದ ಅಪರಾತ್ರಿಯ ಕಣ್ಣಹನಿಯವರೆಗೂ ಕಾವಲಿದೆ. ನಿನ್ನ ನನ್ನ ಹಾದಿ ಕವಲೊಡೆದಿದೆ. ದೂರಾಗಲು ಹೊರಟವಳನ್ನು ನೋಡುತ್ತಾ ನಿಂತವನನ್ನು, ನೀ ಒಮ್ಮೆ ತಿರುಗಿ ನೋಡಬಹುದೆಂಬ ಆಸೆ ಹುಸಿಯಾಯಿತು. ಯಾವುದೋ ತಿರುವಿನಲ್ಲಿ ನೀ ಮರೆಯಾಗಿ ಹೋದೆ. ನಿಂತಲ್ಲೇ ಉಳಿದುಹೋದವನಿಗೆ ಕಣ್ಣು ತುಂಬಿ ಬಂದು, ಮುಂದಿನ ದಾರಿ ಮಂಜು ಮಂಜು.
ಜೀವ ಮುಳ್ಳೂರು