ಬೆಂಗಳೂರು: ಲೋಕಸಭಾ ಚುನಾವಣಾ ಅಖಾಡ ಸಜ್ಜಾಗತೊಡಗಿದ್ದು, ಏತನ್ಮಧ್ಯೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದಿಂದ ಕಣಕ್ಕಿಳಿಯಲಿ ಎಂದು ಕಾಂಗ್ರೆಸ್ ಪಕ್ಷದ ಪರವಾಗಿ ಒತ್ತಾಯಿಸುತ್ತೇನೆ ಎಂದು ಹೇಳಿಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗೆ ತಿರುಗೇಟು ನೀಡಿರುವ ಯುವ ಬ್ರಿಗೇಡ್ ಮುಖಂಡ ಚಕ್ರವರ್ತಿ ಸೂಲಿಬೆಲೆ “ಬನ್ನಿ ರಾಹುಲ್ ಕರ್ನಾಟಕದಲ್ಲಿ ನಿಲ್ಲಿ..ಒಂದು ಕೈ ನೋಡ್ತೀವಿ ಎಂಬ ಅಭಿಯಾನ ಆರಂಭಿಸಿದ್ದು, ಇದು ಟ್ವೀಟರ್ ನಲ್ಲಿ ಟ್ರೆಂಡ್ ಆಗಿದೆ!
#ಒಂದು ಕೈ ನೋಡ್ತೀವಿ,#WeWillHandleHim ಹ್ಯಾಶ್ ಟ್ಯಾಗ್ ಟ್ರೆಂಡ್ ಆಗತೊಡಗಿದೆ. ಬನ್ನಿ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಸ್ಪರ್ಧಿಸಿ. ಆ ಮೂಲಕವಾದರೂ ಇಂದಿರಾ ಗಾಂಧಿ, ಸೋನಿಯಾಗಾಂಧಿ ಅವರನ್ನು ಗೆಲ್ಲಿಸಿದ ತಪ್ಪನ್ನು ಸರಿಪಡಿಸಲು ಅವಕಾಶ ನೀಡಿ. ನೀವು ಕ್ಷೇತ್ರವನ್ನು ಆಯ್ದುಕೊಳ್ಳಿ, ಸೋಲಿಸುವುದು ನಮ್ಮ ಕೆಲಸ ಎಂದು ಸೂಲಿಬೆಲೆ ಟ್ವೀಟ್ ಮೂಲಕ ಆಹ್ವಾನ ನೀಡಿದ್ದರು.
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಚೌಕಿದಾರ್ ಎಂಬ ಟೀಕೆಯನ್ನು ಟ್ವೀಟರ್ ಖಾತೆಯಲ್ಲಿ ಹೆಸರನ್ನು ಬದಲಿಸಿಕೊಳ್ಳುವ ಮೂಲಕ ಅಭಿಯಾನ ಶುರು ಮಾಡಿದ್ದರು. ಅದಕ್ಕೆ ಕೇಂದ್ರದ ಸಚಿವರು ಕೂಡಾ ನಾನೂ ಚೌಕಿದಾರ್ ಎಂಬುದಾಗಿ ಸಾಥ್ ನೀಡಿದ್ದರು. ಇದೀಗ #ಒಂದು ಕೈ ನೋಡ್ತೀವಿ ಎಂಬ ಅಭಿಯಾನವನ್ನು ಕೂಡಾ ಹಲವರು ಅನುಸರಿಸಿ ಟ್ವೀಟ್ ಮಾಡಿದ್ದಾರೆ.