Advertisement

ಪ.ಘಟ್ಟ : ಅಭಿವೃದ್ಧಿ ಯೋಜನೆಗಳ ಆತಂಕ

09:28 AM Sep 22, 2018 | |

ಮಂಗಳೂರು: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಇನ್ನಷ್ಟು ಅಭಿವೃದ್ಧಿ ಯೋಜನೆಗಳಿಗೆ ಅವಕಾಶವಿದೆಯೇ ಎಂಬುದಕ್ಕೆ ಉತ್ತರ ಕಂಡುಕೊಳ್ಳಲು ಕೇಂದ್ರ ಅರಣ್ಯ ಪರಿಸರ ಸಚಿವಾಲಯ ನಡೆಸಿದ ಧಾರಣ ಶಕ್ತಿ ಅಧ್ಯಯನ ವರದಿ ಎರಡು ವರ್ಷವಾದರೂ ಪ್ರಕಟಗೊಳ್ಳದಿರುವುದು ಅಚ್ಚರಿ ತಂದಿದೆ.

Advertisement

ಈ ವರ್ಷ ಈ ಪ್ರದೇಶದಲ್ಲಿ ಭಾರೀ ಪ್ರಾಕೃತಿಕ ವಿಕೋಪ ಸಂಭವಿಸಿದೆ. ಬೆನ್ನಲ್ಲೇ ನದಿಗಳಲ್ಲಿ ನೀರಿನ ಪ್ರಮಾಣವೂ ಕುಸಿದಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶದಲ್ಲಿ ಆತಂಕ ಹೆಚ್ಚಾಗಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ವರದಿಯ ಅಂಶಗಳನ್ನು ಬಹಿರಂಗಗೊಳಿಸಬೇಕಾದ ಸಚಿವಾಲಯ ತಣ್ಣಗಿದೆ. 

ಪ. ಘಟ್ಟದ ಕರ್ನಾಟಕ ಭಾಗದಲ್ಲಿ ಮಾನವ ಹಸ್ತಕ್ಷೇಪ ಹೆಚ್ಚುತ್ತಿದೆ. ಅದರ ಭೌಗೋಳಿಕ ಸೂಕ್ಷ್ಮತೆ ಹಾಗೂ ಜೀವ ವೈವಿಧ್ಯಕ್ಕೆ ಧಕ್ಕೆಯಾಗುತ್ತಿದೆೆ ಎಂಬ ರಾಷ್ಟ್ರೀಯ ಹಸಿರು ಪೀಠದ ಆದೇಶ ಹಾಗೂ ಕರ್ನಾಟಕ ಅರಣ್ಯ, ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಪತ್ರದ ಹಿನ್ನೆಲೆಯಲ್ಲಿ ಸಚಿವಾಲಯ ಪ. ಘಟ್ಟ ಕರ್ನಾಟಕ ವಲಯದ ಧಾರಣ ಶಕ್ತಿಯ ಅಧ್ಯಯನ ನಡೆಸಲು 2016ರ ಜೂ. 22ರಂದು ತಜ್ಞರ ಸಮಿತಿ ರಚಿಸಿತ್ತು.

ಸಚಿವಾಲಯದ ಹೆಚ್ಚುವರಿ ಮಹಾ ನಿರ್ದೇಶಕ ಅನಿಲ್‌ ಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ಪ. ಘಟ್ಟ ಸಂರಕ್ಷಣ ಸಂಘಟನೆಗಳು, ರಾಜ್ಯ ಸರಕಾರದ ಅರಣ್ಯ ಮತ್ತು ಪರಿಸರ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಪರಿಸರ ತಜ್ಞರ ಸಹಿತ 12 ಮಂದಿಯನ್ನು ಸದಸ್ಯರಾಗಿ ನೇಮಿಸಲಾಗಿತ್ತು.

ಪಶ್ಚಿಮ ಘಟ್ಟದ ಭೌಗೋಳಿಕ ಸ್ಥಿತಿ ಗತಿ ಮತ್ತು ಹವಾಮಾನದಲ್ಲಿ ಸ್ಥಿತ್ಯಂತರ ಗಳಾಗುತ್ತಿವೆ ಎಂಬ ಆತಂಕ ವನ್ನು ಇತ್ತೀಚೆಗೆ ಸಂಭವಿಸಿದ ವಿದ್ಯ ಮಾನಗಳು ಸಾಬೀತುಪಡಿಸಿವೆ. ತಿಂಗಳು ಗಟ್ಟಲೆ ಭಾರೀ ಮಳೆ ಸುರಿದು ಗುಡ್ಡ ಕುಸಿದು ಒಂದು ಬಗೆಯ ಸಮಸ್ಯೆ ಯಾಗಿದ್ದರೆ, ಉಕ್ಕಿ ಹರಿದ ನದಿ ಗಳೂ ಒಂದೇ ತಿಂಗಳೊಳಗೆ ಒಳ ಹರಿವು ಕ್ಷೀಣಿಸಿಕೊಂಡಿವೆ. ಇದಕ್ಕೆ ಪಶ್ಚಿಮ ಘಟ್ಟದಲ್ಲಿ ಕಾಡು ನಾಶ ಹಾಗೂ ಮಿತಿ ಮೀರು ತ್ತಿರುವ ಮಾನವ ಹಸ್ತಕ್ಷೇಪವೇ ಕಾರಣ ಎಂಬುದು ಪರಿಸರ ತಜ್ಞರ ಅಭಿಪ್ರಾಯ.

Advertisement

ಸಲ್ಲಿಕೆಯಾಗಿದೆ ವರದಿ
ಪ್ರಸ್ತಾವಿತ ಯೋಜನೆಗಳಿಂದಾಗಿ ಈ ಪ್ರದೇಶದ ಪರಿಸರ ಹಾಗೂ ಭೌಗೋಳಿಕ ಸೂಕ್ಷ್ಮತೆಗೆ ಧಕ್ಕೆಯಾಗಲಿದೆಯೇ, ಉದ್ದೇಶಿತ ಯೋಜನೆಗಳನ್ನು ಭರಿಸುವ ಧಾರಣ ಶಕ್ತಿಯನ್ನು ಹೊಂದಿದೆಯೇ ಎಂಬುದರ ಸಮಗ್ರ ಅಧ್ಯಯನ ನಡೆಸಲು ಸೂಚಿಸಲಾಗಿತ್ತು. ಕರಡು ವರದಿಯನ್ನು 3 ಹಾಗೂ ಅಂತಿಮ ವರದಿಯನ್ನು 4 ತಿಂಗಳೊಳಗೆ ಸಲ್ಲಿಸುವಂತೆಯೂ ಆದೇಶಿಸಲಾಗಿತ್ತು. ಸಮಿತಿಯು ವರದಿಯನ್ನು ಸಚಿವಾಲಯಕ್ಕೆ ಸಲ್ಲಿಸಿದೆ. ಅದರ ಅಂಶಗಳನ್ನು ಬಹಿರಂಗಗೊಳಿಸದ ಸಚಿವಾಲಯ, ವರದಿಯ ಮೇಲೆ ಪಾರಿಸರಿಕ ತಜ್ಞರ ಅಭಿಪ್ರಾಯ ಪಡೆಯಲು ನಿರ್ಧರಿಸಿದೆ ಎನ್ನಲಾಗಿದೆ.

ಪಶ್ಚಿಮ ಘಟ್ಟ  ಸಂರಕ್ಷಣೆ ಕ್ರಮಗಳು ಅಗತ್ಯ. ನನ್ನ ಅವಧಿ (2009-2013)ಯಲ್ಲಿ ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳ ಧಾರಣ ಶಕ್ತಿಯ ಬಗ್ಗೆ ವರದಿಗಳನ್ನು ಸಿದ್ಧಪಡಿಸಲಾಗಿತ್ತು. ಇದಲ್ಲದೆ ಇಡೀ ಪಶ್ಚಿಮಘಟ್ಟದ ಬಗ್ಗೆ ನೀಡಿರುವ 3 ವರದಿಗಳಲ್ಲಿ ಒಟ್ಟು ಸ್ಥಿತಿಗತಿ ಹಾಗೂ ಪೂರಕ ಅಂಶಗಳನ್ನು ಉಲ್ಲೇಖೀಸಲಾಗಿದೆ.
ಅನಂತ್‌ ಹೆಗಡೆ ಅಶೀಸರ, ಪಶ್ಚಿಮ ಘಟ್ಟ  ಸಂರಕ್ಷಣ ಕಾರ್ಯಪಡೆಯ ಮಾಜಿ ಅಧ್ಯಕ್ಷ

* ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next