ವೆಲ್ಲಿಂಗ್ಟನ್ : ಸತತ 2ನೇ ಸಲ ಫಾಲೋಆನ್‌ಗೆ ತುತ್ತಾದ ಪ್ರವಾಸಿ ವೆಸ್ಟ್ ಇಂಡೀಸ್ ಮತ್ತೂಂದು ಇನ್ನಿಂಗ್ಸ್ ಸೋಲಿಗೆ ಹತ್ತಿರವಾಗಿದೆ. ನ್ಯೂಜಿಲ್ಯಾಂಡಿನ 2-0 ಸರಣಿ ಗೆಲುವಿನ ಕ್ಷಣಗಣನೆ ಆರಂಭಗೊಂಡಿದೆ.
ನ್ಯೂಜಿಲ್ಯಾಂಡಿನ 460 ರನ್ನುಗಳ ದೊಡ್ಡ ಮೊತ್ತಕ್ಕೆ ಉತ್ತರವಾಗಿ 131ಕ್ಕೆ ಕುಸಿದ ಹೋಲ್ಡರ್ ಪಡೆ 329 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿತು. ಮರಳಿ ಬ್ಯಾಟಿಂಗಿಗೆ ಇಳಿಸಲ್ಪಟ್ಟು ದ್ವಿತೀಯ ಇನ್ನಿಂಗ್ಸ್‌ನಲ್ಲಿ 6 ವಿಕೆಟಿಗೆ 244 ರನ್ ಗಳಿಸಿದೆ. ನ್ಯೂಜಿಲ್ಯಾಂಡನ್ನು ಮರಳಿ ಬ್ಯಾಟಿಂಗಿಗೆ ಇಳಿಸಬೇಕಾದರೆ ಇನ್ನೂ 85 ರನ್ ಮಾಡಬೇಕಿದೆ. 3ನೇ ದಿನದಾಟ ಮಳೆ ಹಾಗೂ ಬೆಳಕಿನ ಅಭಾವದಿಂದ ಬೇಗನೇ ಕೊನೆಗೊಂಡಿತ್ತು.
ವಿಂಡೀಸ್ 8ಕ್ಕೆ 124 ರನ್ ಗಳಿಸಿದಲ್ಲಿಂದ ಮೊದಲ ಇನ್ನಿಂಗ್ಸ್ ಮುಂದುವರಿಸಿತ್ತು. ಉಳಿದೆರಡೂ ವಿಕೆಟ್‌ಗಳನ್ನು ಟಿಮ್ ಸೌಥಿ ಉರುಳಿಸಿದರು. ಇದರೊಂದಿಗೆ ಸೌಥಿ ಮತ್ತು ಜಾಮೀಸನ್ ತಲಾ 5 ವಿಕೆಟ್ ಬೇಟೆಯಾಡಿದಂತಾಯಿತು.
ದ್ವಿತೀಯ ಸರದಿಯಲ್ಲಿ ಕೆರಿಬಿಯನ್ನರ ಬ್ಯಾಟಿಂಗ್ ಭಾರೀ ಸುಧಾರಣೆಯೇನೂ ಕಾಣಲಿಲ್ಲ. ಆರಂಭಕಾರ ಜಾನ್ ಕ್ಯಾಂಬೆಲ್ 68, ಶಮರ್ ಬ್ರೂಕ್ಸ್ 36 ರನ್ ಹೊಡೆದರು. ಆದರೂ 170 ರನ್ನಿಗೆ 6 ವಿಕೆಟ್ ಉರುಳಿ ಹೋಯಿತು. ಈ ಹಂತದಲ್ಲಿ ನಾಯಕ ಹೋಲ್ಡರ್ ಹಾಗೂ ಜೋಶುವ ಡಾ ಸಿಲ್ವ ಹೋರಾಟವೊಂದನ್ನು ಸಂಘಟಿಸುವಲ್ಲಿ ಯಶಸ್ವಿಯಾದರು. ಹೋಲ್ಡರ್ 60, ಸಿಲ್ವ 25 ರನ್ ಮಾಡಿ ಆಡುತ್ತಿದ್ದು, 7ನೇ ವಿಕೆಟಿಗೆ 74 ರನ್ ಒಟ್ಟುಗೂಡಿಸಿದ್ದಾರೆ.
ನ್ಯೂಜಿಲ್ಯಾಂಡ್ ಪರ ಬೌಲ್ಟ್ 3, ಜಾಮೀಸನ್ 2 ಹಾಗೂ ವ್ಯಾಗ್ನರ್ ಒಂದು ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲ್ಯಾಂಡ್-460. ವೆಸ್ಟ್ ಇಂಡೀಸ್-131 ಮತ್ತು 6 ವಿಕೆಟಿಗೆ 244 (ಕ್ಯಾಂಬೆಲ್ 68, ಹೋಲ್ಡರ್ ಬ್ಯಾಟಿಂಗ್ 60, ಬ್ರೂಕ್ಸ್ 36, ಸಿಲ್ವ ಬ್ಯಾಟಿಂಗ್ 25, ಬ್ರಾತ್‌ವೇಟ್ 24, ಬೌಲ್ಟ್ 75ಕ್ಕೆ 3, ಜಾಮೀಸನ್ 43ಕ್ಕೆ 2).