Advertisement

ವಿಂಡೀಸ್‌ 381 ರನ್‌ ಜಯಭೇರಿ

12:30 AM Jan 28, 2019 | |

ಬ್ರಿಜ್‌ಟೌನ್‌: ನಿರೀಕ್ಷೆಯಂತೆ ಪ್ರವಾಸಿ ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ವೆಸ್ಟ್‌ ಇಂಡೀಸ್‌ ಪ್ರಚಂಡ ಗೆಲುವು ಸಾಧಿಸಿದೆ. 381 ರನ್‌ ಜಯಭೇರಿಯೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಂಡಿದೆ.

Advertisement

ಇಲ್ಲಿನ “ಕೆನ್ನಿಂಗ್‌ಸ್ಟನ್‌  ಓವಲ್‌’ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಗೆಲುವಿಗೆ 628 ರನ್ನುಗಳ ಅಸಾಧ್ಯ ಗುರಿ ಪಡೆದಿದ್ದ ಇಂಗ್ಲೆಂಡ್‌ 246ಕ್ಕೆ ಸರ್ವಪತನ ಕಂಡಿತು. ಘಾತಕ ದಾಳಿ ಸಂಘಟಿಸಿದ ರೋಸ್ಟನ್‌ ಚೇಸ್‌ 60 ರನ್ನಿಗೆ 8 ವಿಕೆಟ್‌ ಉಡಾಯಿಸಿ ಜೀವನಶ್ರೇಷ್ಠ ಬೌಲಿಂಗ್‌ ಪ್ರದರ್ಶಿಸಿದರು. 4ನೇ ದಿನದಾಟದಲ್ಲಿ ಇಂಗ್ಲೆಂಡಿನ ಕೊನೆಯ 6 ವಿಕೆಟ್‌ಗಳು ಬರೀ 31 ರನ್‌ ಅಂತರದಲ್ಲಿ ಉದುರಿದವು. ಕ್ರೀಸ್‌ ಆಕ್ರಮಿಸಿಕೊಂಡದ್ದು ಆರಂಭಕಾರ ರೋರಿ ಬರ್ನ್ಸ್ ಮಾತ್ರ (84). ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 77 ರನ್ನಿಗೆ ಕುಸಿದಾಗಲೇ ಸೋಲಿನತ್ತ ಮುಖ ಮಾಡಿತ್ತು.

ಡಾನ್‌ ಬಳಿಕ ಹೋಲ್ಡರ್‌
ನಾಯಕ ಜಾಸನ್‌ ಹೋಲ್ಡರ್‌ ಅವರ ಚೊಚ್ಚಲ ದ್ವಿಶತಕ (ಔಟಾಗದೆ 202) ಮತ್ತು ಕೀಪರ್‌ ಶೇನ್‌ ಡೌರಿಚ್‌ ಅವರ ಆಕರ್ಷಕ ಶತಕ (ಔಟಾಗದೆ 116), ಇವರಿಬ್ಬರ ನಡುವಿನ 295 ರನ್‌ ಜತೆಯಾಟದ ನೆರವಿನಿಂದ ವೆಸ್ಟ್‌ ಇಂಡೀಸ್‌ ತನ್ನ ದ್ವಿತೀಯ ಸರದಿಯಲ್ಲಿ 6 ವಿಕೆಟಿಗೆ 415 ರನ್‌ ಬಾರಿಸಿ ಡಿಕ್ಲೇರ್‌ ಮಾಡಿತ್ತು.

ಈ ದ್ವಿಶತಕದೊಂದಿಗೆ ಜಾಸನ್‌ ಹೋಲ್ಡರ್‌ ಕ್ರಿಕೆಟ್‌ ದಂತಕತೆ ಡಾನ್‌ ಬ್ರಾಡ್‌ಮನ್‌ ಅವರ ದಾಖಲೆಯೊಂದನ್ನು ಸರಿದೂಗಸಿದರು. ಟೆಸ್ಟ್‌ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ 6ನೇ ಅಥವಾ ಇದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಆಡಲಿಳಿದು ದ್ವಿಶತಕ ಬಾರಿಸಿದ್ದು ಹೋಲ್ಡರ್‌ ಸಾಧನೆಯಾಗಿದೆ. ಬ್ರಾಡ್‌ಮನ್‌ 1937ರ ಆ್ಯಶಸ್‌ ಸರಣಿಯ ಮೆಲ್ಬರ್ನ್ ಟೆಸ್ಟ್‌ನಲ್ಲಿ 7ನೇ ಕ್ರಮಾಂಕದಲ್ಲಿ ಆಡಲಿಳಿದು 270 ರನ್‌ ಬಾರಿಸಿದ್ದರು.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌-289 ಮತ್ತು 6 ವಿಕೆಟಿಗೆ 415 ಡಿಕ್ಲೇರ್‌. ಇಂಗ್ಲೆಂಡ್‌-77 ಮತ್ತು 246. ಪಂದ್ಯಶ್ರೇಷ್ಠ: ಜಾಸನ್‌ ಹೋಲ್ಡರ್‌.

Advertisement

ಹೋಲ್ಡರ್‌ ನಂ.1 ಆಲ್‌ರೌಂಡರ್‌
ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ವೆಸ್ಟ್‌ ಇಂಡೀಸ್‌ ತಂಡದ ನಾಯಕ ಜಾಸನ್‌ ಹೋಲ್ಡರ್‌ ನಂ.1 ಆಲ್‌ರೌಂಡರ್‌ ಆಗಿ ಮೂಡಿಬಂದಿದ್ದಾರೆ.

ಸೋಮವಾರ ಪ್ರಕಟಗೊಂಡ ನೂತನ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಹೋಲ್ಡರ್‌ ಎರಡು ಸ್ಥಾನಗಳ ಜಿಗಿತ ಕಂಡು ನಂ.1 ಸ್ಥಾನಕ್ಕೆ ಏರಿದರು. ಬ್ರಿಜ್‌ಟೌನ್‌ ಟೆಸ್ಟ್‌ನಲ್ಲಿ ಚೊಚ್ಚಲ ದ್ವಿಶತಕ ಬಾರಿಸುವುದರೊಂದಿಗೆ 2 ವಿಕೆಟ್‌ ಕಿತ್ತು ತಂಡದ ಗೆಲುವಿಗೆ ನೆರವಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next