Advertisement

ಎರಡನೇ ವಿಶ್ವಕಪ್‌ ಕೂಡ ವೆಸ್ಟ್‌ ಇಂಡೀಸ್‌ ಪಾಲು

09:03 AM May 19, 2019 | keerthan |

ಮೊದಲ ವಿಶ್ವಕಪ್‌ ಪಂದ್ಯಾವಳಿಯ ಯಶಸ್ಸು, ಇದಕ್ಕೆ ಸಿಕ್ಕಿದ ಜನಪ್ರಿಯತೆ, ಅಭಿಮಾನಿಗಳ ಕಾತರ, ಏಕದಿನ ಕ್ರಿಕೆಟ್‌ ಮೂಡಿಸಿದ ಸಂಚಲನ… ಇದೆಲ್ಲವೂ ಐಸಿಸಿಯಲ್ಲಿ ಹೊಸ ಹುಮ್ಮಸ್ಸು ಮೂಡಿಸಿತ್ತು. 1975ರ ವಿಶ್ವಕಪ್‌ ಮುಗಿದ ಕೆಲವೇ ದಿನಗಳಲ್ಲಿ ಮುಂದಿನ ಕೂಟದ ರೂಪರೇಷೆಗಳೆಲ್ಲ ಸಿದ್ಧಗೊಂಡವು. ಇಂಗ್ಲೆಂಡಿನಲ್ಲೇ ಈ ಪಂದ್ಯಾವಳಿ ನಡೆಸುವುದೆಂದು ಒಮ್ಮತದ ತೀರ್ಮಾನಕ್ಕೆ ಬರಲಾಯಿತು. ಪ್ರುಡೆನ್ಶಿಯಲ್‌ ಕಂಪೆನಿ ತಾನಾಗಿಯೇ ಪ್ರಾಯೋಜನೆಗೆ ಮುಂದೆ ಬಂತು. ಹೀಗಾಗಿ ಇದು ಕೂಡ “ಪ್ರುಡೆನ್ಶಿಯಲ್‌ ವಿಶ್ವಕಪ್‌’ ಎನಿಸಿಕೊಂಡಿತು.

Advertisement

ಪ್ರತ್ಯೇಕ ಅರ್ಹತಾ ಪಂದ್ಯಾವಳಿ
ಟೆಸ್ಟ್‌ ಮಾನ್ಯತೆ ಪಡೆದ 6 ತಂಡಗಳೊಂದಿಗೆ ಕಾದಾಡಲು ಐಸಿಸಿಯ 2 ಸದಸ್ಯ ರಾಷ್ಟ್ರಗಳಿಗೆ ಈ ಸಲವೂ ಅವಕಾಶ ಕಲ್ಪಿಸಲಾಯಿತು. ಇದಕ್ಕಾಗಿಯೇ ಪ್ರತ್ಯೇಕ ಅರ್ಹತಾ ಪಂದ್ಯಾವಳಿಯೊಂದನ್ನು ಆಡಿಸಿದ್ದು ವಿಶೇಷ. ಇದರಲ್ಲಿ 15 ತಂಡಗಳು ಪಾಲ್ಗೊಂಡವು. ಮುಂದೆ ಇದು ಮಿನಿ ವಿಶ್ವಕಪ್‌ ಎಂದೇ ಖ್ಯಾತಿ ಗಳಿಸಿತು.

“ಐಸಿಸಿ ಅರ್ಹತಾ ಕಪ್‌ ಟೂರ್ನಿ’ಯಲ್ಲಿ ಚಾಂಪಿಯನ್‌ ಆದ ಶ್ರೀಲಂಕಾ ಮತ್ತು ರನ್ನರ್ ಅಪ್‌ ಕೆನಡಾ ಪ್ರಧಾನ ಸುತ್ತಿನಲ್ಲಿ ಆಡಲಿಳಿದವು. ಮೊದಲ ವಿಶ್ವಕಪ್‌ನಲ್ಲಿ ಆಡಿದ ಪೂರ್ವ ಆಫ್ರಿಕಾ ಅರ್ಹತೆ ಪಡೆಯುವಲ್ಲಿ ವಿಫ‌ಲವಾಯಿತು. ಹೀಗಾಗಿ ಇದು ಯಾವುದೇ ಆಫ್ರಿಕನ್‌ ದೇಶವನ್ನು ಹೊಂದಿಲ್ಲದ ವಿಶ್ವಕಪ್‌ ಕೂಟವೆನಿಸಿತು.

ಎರಡೇ ವಾರಗಳ ಟೂರ್ನಿ
ಕೇವಲ 15 ದಿನಗಳ ಪಂದ್ಯಾವಳಿ ಇದಾಗಿತ್ತು. ಒಂದೊಂದು ಸುತ್ತಿನ ಲೀಗ್‌ ಪಂದ್ಯಗಳೆಲ್ಲ ರೋಮಾಂಚಕಾರಿಯಾಗಿ ನಡೆದವು. “ಎ’ ವಿಭಾಗದಿಂದ ಅಜೇಯ ಇಂಗ್ಲೆಂಡ್‌ ಮತ್ತು ಒಂದು ಪಂದ್ಯದಲ್ಲಿ ಸೋತ ಪಾಕಿಸ್ಥಾನ ಸೆಮಿಫೈನಲಿಗೆ ಏರಿದವು. “ಬಿ’ ವಿಭಾಗದಲ್ಲಿ ಸೋಲರಿದ ವೆಸ್ಟ್‌ ಇಂಡೀಸ್‌ ಮತ್ತು ಒಂದರಲ್ಲಿ ಎಡವಿದ ನ್ಯೂಜಿಲ್ಯಾಂಡ್‌ ಮುನ್ನಡೆ ಕಂಡವು. ಸೆಮಿ ಫೈನಲ್‌ನಲ್ಲಿ ಪಾಕಿಸ್ಥಾನ ಮತ್ತು ನ್ಯೂಜಿಲ್ಯಾಂಡ್‌ ಮುಗ್ಗರಿಸಿದವು. ವೆಸ್ಟ್‌ ಇಂಡೀಸ್‌-ಇಂಗ್ಲೆಂಡ್‌ ಪ್ರಶಸ್ತಿ ಕಾಳಗಕ್ಕೆ ಅಣಿಯಾದವು.

ವಿಂಡೀಸ್‌ ವೇಗಿಗಳ ವಿಶ್ವರೂಪ!
ಲಾರ್ಡ್ಸ್‌ ಫೈನಲ್‌ನಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ವೆಸ್ಟ್‌ ಇಂಡೀಸ್‌ ವಿವಿಯನ್‌ ರಿಚರ್ಡ್ಸ್‌ ಅವರ ಅಮೋಘ 138 ರನ್‌ ಸಾಹಸದಿಂದ (157 ಎಸೆತ, 11 ಬೌಂಡರಿ, 3 ಸಿಕ್ಸರ್‌) 9 ವಿಕೆಟಿಗೆ 286 ರನ್‌ ಪೇರಿಸಿತು. 86 ರನ್‌ ಬಾರಿಸಿದ ಕಾಲಿಸ್‌ ಕಿಂಗ್‌ ಕೆರಿಬಿಯನ್‌ ಸರದಿಯ ಮತ್ತೋರ್ವ ಪ್ರಮುಖ ಸ್ಕೋರರ್‌.


ಆತಿಥೇಯ ಇಂಗ್ಲೆಂಡ್‌ ಭರ್ಜರಿಯಾಗಿಯೇ ಚೇಸಿಂಗ್‌ ನಡೆಸಿತು. ನಾಯಕ ಮೈಕ್‌ ಬ್ರೇಯರ್ಲಿ ಮತ್ತು ಜೆಫ್ ಬಾಯ್ಕಟ್‌ ಸೇರಿಕೊಂಡು ಮೊದಲ ವಿಕೆಟಿಗೆ 129 ರನ್‌ ಪೇರಿಸಿದರು. ಇಂಗ್ಲೆಂಡ್‌ ಚಾಂಪಿಯನ್‌ ಆಗಿಯೇ ಬಿಟ್ಟಿತು ಎಂಬ ವಾತಾವರಣ ಸೃಷ್ಟಿಯಾಯಿತು. ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್‌ ಅಭಿಮಾನಿಗಳ ಸಂತಸ ತಾರಕಕ್ಕೇರಿತ್ತು.

Advertisement

ಮುಂದಿನದ್ದೆಲ್ಲ ವಿಂಡೀಸ್‌ ವೇಗಿಗಳ ಘಾತಕ ದಾಳಿಯ ವಿಶ್ವರೂಪ ದರ್ಶನ! ಗಾರ್ನರ್‌, ಕ್ರಾಫ್ಟ್ ಮತ್ತು ಹೋಲ್ಡಿಂಗ್‌ ಸೇರಿಕೊಂಡು ಆಂಗ್ಲರ ಬ್ಯಾಟಿಂಗ್‌ ಸರದಿಯನ್ನು ನಿರ್ದಾಕ್ಷಿಣ್ಯವಾಗಿ ಸೀಳಿ ಹಾಕಿದರು. ಬರೀ 65 ರನ್‌ ಅಂತರದಲ್ಲಿ ಇಂಗ್ಲೆಂಡಿನ ಅಷ್ಟೂ ವಿಕೆಟ್‌ಗಳನ್ನು ಉಡಾಯಿಸಿದ ವಿಂಡೀಸ್‌ ತಾನೇಕೆ ಚಾಂಪಿಯನ್‌ ಎಂಬುದನ್ನು ವಿಶ್ವಕ್ಕೆ ಸಾರಿತು.

ವಿಶ್ವಕಪ್‌ ಗೆಲ್ಲುವ ಚಿನ್ನದಂಥ ಅವಕಾಶವನ್ನು ತಪ್ಪಿಸಿಕೊಂಡ ಇಂಗ್ಲೆಂಡಿಗೆ ಮುಂದೆಂದೂ ಕಪ್‌ ಒಲಿಯಲೇ ಇಲ್ಲ. ಒಟ್ಟು 3 ಸಲ ಫೈನಲಿಗೆ ಏರಿದರೂ ಕ್ರಿಕೆಟ್‌ ಜನಕರಿಗೆ “ಒನ್‌ ಡೇ ಕಿಂಗ್‌’ ಎನಿಸಿಕೊಳ್ಳುವ ಯೋಗ ಕೂಡಿಬರಲಿಲ್ಲ.

ವಿಜೇತ ವಿಂಡೀಸಿಗೆ 10 ಸಾವಿರ ಪೌಂಡ್‌
ಸತತ 2ನೇ ಸಲ ವಿಶ್ವಕಪ್‌ ಎತ್ತಿ ಮೆರೆದ ವೆಸ್ಟ್‌ ಇಂಡೀಸಿಗೆ 10 ಸಾವಿರ ಪೌಂಡ್‌ ಬಹುಮಾನ ಲಭಿಸಿತು. ಇದು 1975ರ ಕೂಟಕ್ಕೆ ಹೋಲಿಸಿದರೆ ಎರಡೂವರೆ ಪಟ್ಟು ಅಧಿಕ.

ಇಂಗ್ಲೆಂಡ್‌-ವೆಸ್ಟ್‌ ಇಂಡೀಸ್‌, ಜೂನ್‌ 23 ಲಾರ್ಡ್ಸ್‌, ಲಂಡನ್‌
ವೆಸ್ಟ್‌ ಇಂಡೀಸ್‌
ಗಾರ್ಡನ್‌ ಗ್ರೀನಿಜ್‌ ರನೌಟ್‌ 9
ಡೆಸ್ಮಂಡ್‌ ಹೇನ್ಸ್‌ ಸಿ ಹೆಂಡ್ರಿಕ್‌ ಬಿ ಓಲ್ಡ್‌ 20
ವಿವಿಯನ್‌ ರಿಚರ್ಡ್ಸ್‌ ಔಟಾಗದೆ 138
ಅಲ್ವಿನ್‌ ಕಾಳೀಚರಣ್‌ ಬಿ ಹೆಂಡ್ರಿಕ್‌ 4
ಕ್ಲೈವ್‌ ಲಾಯ್ಡ ಸಿ ಮತ್ತು ಬಿ ಓಲ್ಡ್‌ 13
ಕಾಲಿಸ್‌ ಕಿಂಗ್‌ ಸಿ ರ್‍ಯಾಂಡಲ್‌ ಬಿ ಎಡ್ಮಂಡ್ಸ್‌ 86
ಡೆರಿಕ್‌ ಮರ್ರೆ ಸಿ ಗೋವರ್‌ ಬಿ ಎಡ್ಮಂಡ್ಸ್‌ 5
ಆ್ಯಂಡಿ ರಾಬರ್ಟ್ಸ್ ಸಿ ಬ್ರೇಯರ್ಲಿ ಬಿ ಹೆಂಡ್ರಿಕ್‌ 0
ಜೋಯೆಲ್‌ ಗಾರ್ನರ್‌ ಸಿ ಟೇಲರ್‌ ಬಿ ಬೋಥಂ 0
ಮೈಕಲ್‌ ಹೋಲ್ಡಿಂಗ್‌ ಬಿ ಬೋಥಂ 0
ಕಾಲಿನ್‌ ಕ್ರಾಫ್ಟ್ ಔಟಾಗದೆ 0
ಇತರ 11
ಒಟ್ಟು (60 ಓವರ್‌ಗಳಲ್ಲಿ 9 ವಿಕೆಟಿಗೆ) 286
ವಿಕೆಟ್‌ ಪತನ: 1-22, 2-36, 3-55, 4-99, 5-238, 6-252, 7-258, 8-260, 9-272.
ಬೌಲಿಂಗ್‌:
ಇಯಾನ್‌ ಬೋಥಂ 12-2-44-2
ಮೈಕ್‌ ಹೆಂಡ್ರಿಕ್‌ 12-2-50-2
ಕ್ರಿಸ್‌ ಓಲ್ಡ್‌ 12-0-55-2
ಜೆಫ್ ಬಾಯ್ಕಟ್‌ 6-0-38-0
ಫಿಲ್‌ ಎಡ್ಮಂಡ್ಸ್‌ 12-2-40-2
ಗ್ರಹಾಂ ಗೂಚ್‌ 4-0-27-0
ವೇಯ್ನ ಲಾರ್ಕಿನ್ಸ್‌ 2-0-21-0

ಇಂಗ್ಲೆಂಡ್‌
ಮೈಕ್‌ ಬ್ರೇಯರ್ಲಿ ಸಿ ಕಿಂಗ್‌ ಬಿ ಹೋಲ್ಡಿಂಗ್‌ 64
ಜೆಫ್ ಬಾಯ್ಕಟ್‌ ಸಿ ಕಾಳೀಚರಣ್‌ ಬಿ ಹೋಲ್ಡಿಂಗ್‌ 57
ಡೆರೆಕ್‌ ರ್‍ಯಾಂಡಲ್‌ ಬಿ ಕ್ರಾಫ್ಟ್ 15
ಗ್ರಹಾಂ ಗೂಚ್‌ ಬಿ ಗಾರ್ನರ್‌ 32
ಡೇವಿಡ್‌ ಗೋವರ್‌ ಬಿ ಗಾರ್ನರ್‌ 0
ಇಯಾನ್‌ ಬೋಥಂ ಸಿ ರಿಚರ್ಡ್ಸ್‌ ಬಿ ಕ್ರಾಫ್ಟ್ 4
ವೇಯ್ನ ಲಾರ್ಕಿನ್ಸ್‌ ಬಿ ಗಾರ್ನರ್‌ 0
ಫಿಲ್‌ ಎಡ್ಮಂಡ್ಸ್‌ ಔಟಾಗದೆ 5
ಕ್ರಿಸ್‌ ಓಲ್ಡ್‌ ಬಿ ಗಾರ್ನರ್‌ 0
ಬಾಬ್‌ ಟೇಲರ್‌ ಸಿ ಮರ್ರೆ ಬಿ ಗಾರ್ನರ್‌ 0
ಮೈಕ್‌ ಹೆಂಡ್ರಿಕ್‌ ಬಿ ಕ್ರಾಫ್ಟ್ 0
ಇತರ 17
ಒಟ್ಟು (51 ಓವರ್‌ಗಳಲ್ಲಿ ಆಲೌಟ್‌) 194
ವಿಕೆಟ್‌ ಪತನ: 1-129, 2-135, 3-183, 4-183, 5-186, 6-186, 7-192, 8-192, 9-194.
ಬೌಲಿಂಗ್‌:
ಆ್ಯಂಡಿ ರಾಬರ್ಟ್ಸ್ 9-2-33-0
ಮೈಕಲ್‌ ಹೋಲ್ಡಿಂಗ್‌ 8-1-16-2
ಕಾಲಿನ್‌ ಕ್ರಾಫ್ಟ್ 10-1-42-3
ಜೋಯೆಲ್‌ ಗಾರ್ನರ್‌ 11-0-38-5
ವಿವಿಯನ್‌ ರಿಚರ್ಡ್ಸ್‌ 10-0-35-0
ಕಾಲಿಸ್‌ ಕಿಂಗ್‌ 3-0-13-0

ಪಂದ್ಯಶ್ರೇಷ್ಠ: ವಿವಿಯನ್‌ ರಿಚರ್ಡ್ಸ್‌

Advertisement

Udayavani is now on Telegram. Click here to join our channel and stay updated with the latest news.

Next