Advertisement

ಬಾಂಗ್ಲಾಕ್ಕೆ ವೈಟ್‌ವಾಶ್‌ ಮಾಡಿದ ವಿಂಡೀಸ್‌

10:52 PM Feb 14, 2021 | Team Udayavani |

ಢಾಕಾ: ಮತ್ತೂಂದು “ಥ್ರಿಲ್ಲಿಂಗ್‌ ಫೈಟ್‌’ನಲ್ಲಿ ಆತಿಥೇಯ ಬಾಂಗ್ಲಾದೇಶವನ್ನು 17 ರನ್ನುಗಳಿಂದ ಮಣಿಸಿದ ವೆಸ್ಟ್‌ ಇಂಡೀಸ್‌ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಕ್ಲೀನ್‌ ಸ್ವೀಪ್‌ ಆಗಿ ವಶಪಡಿಸಿಕೊಂಡಿದೆ.

Advertisement

230 ರನ್ನುಗಳ ಗೆಲುವಿನ ಗುರಿ ಪಡೆದ ಬಾಂಗ್ಲಾದೇಶ, ದಢೂತಿ ಸ್ಪಿನ್ನರ್‌ ರಖೀಂ ಕಾರ್ನ್ವಾಲ್‌ ದಾಳಿಗೆ ಕುಸಿದು 213ಕ್ಕೆ ಇನ್ನಿಂಗ್ಸ್‌ ಮುಗಿಸಿತು. ಕಾರ್ನ್ವಾಲ್‌ 105 ರನ್‌ ವೆಚ್ಚದಲ್ಲಿ 4 ವಿಕೆಟ್‌ ಕಿತ್ತರು. ಮೊದಲ ಸರದಿಯಲ್ಲಿ ಅವರ ಸಾಧನೆ 74ಕ್ಕೆ 5 ವಿಕೆಟ್‌. ಪ್ರಥಮ ಟೆಸ್ಟ್‌ ಪಂದ್ಯವನ್ನು ಕೈಲ್‌ ಮೇಯರ್ ಅವರ ದ್ವಿಶತಕ ಪರಾಕ್ರಮದಿಂದ ವಿಂಡೀಸ್‌ 3 ವಿಕೆಟ್‌ಗಳಿಂದ ಗೆದ್ದಿತ್ತು. ಏಕದಿನ ಸರಣಿಯಲ್ಲಿ ಅನುಭವಿಸಿದ 3-0 ಸೋಲಿಗೆ ವಿಂಡೀಸ್‌ ಟೆಸ್ಟ್‌ ಸರಣಿಯಲ್ಲಿ ಭರ್ಜರಿಯಾಗಿ ಸೇಡು ತೀರಿಸಿಕೊಂಡಿತು.

ಜಾಸನ್‌ ಹೋಲ್ಡರ್‌ ಸಹಿತ ತಂಡದ ಅನೇಕ ಪ್ರಮುಖ ಆಟಗಾರರು ಕೊರೊನಾ ಕಾರಣವನ್ನು ಮುಂದೊಡ್ಡಿ ಬಾಂಗ್ಲಾ ಪ್ರವಾಸದಿಂದ ಹೊರಗುಳಿದಿದ್ದರು. ಕ್ರೆಗ್‌ ಬ್ರಾತ್‌ವೇಟ್‌ ಸಾರಥ್ಯದಲ್ಲಿ ಕೆರಿಬಿಯನ್ನರು ಕಣಕ್ಕಿಳಿದಿದ್ದರು.

230 ರನ್‌ ಚೇಸಿಂಗ್‌ ಹಾದಿಯಲ್ಲಿ ತಮಿಮ್‌ ಇಕ್ಬಾಲ್‌ ಮಾತ್ರ ಭರವಸೆ ಮೂಡಿಸಿದರು. ಇವರ ಬ್ಯಾಟಿನಿಂದ ಭರ್ತಿ 50 ರನ್‌ ಹರಿದು ಬಂತು. ಕೊನೆಯಲ್ಲಿ ಮೆಹಿದಿ ಹಸನ್‌ ಹೋರಾಟ ನಡೆಸಿದರೂ ಅವರಿಗೆ ತಂಡವನ್ನು ದಡ ಸೇರಿಸಲಾಗಲಿಲ್ಲ. 31 ರನ್‌ ಮಾಡಿದ ಹಸನ್‌ ಕೊನೆಯವರಾಗಿ ಪೆವಿಲಿಯನ್‌ ಸೇರಿಕೊಂಡರು.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌-409 ಮತ್ತು 117. ಬಾಂಗ್ಲಾದೇಶ-296 ಮತ್ತು 231 (ತಮಿಮ್‌ ಇಕ್ಬಾಲ್‌ 50, ಮೆಹಿದಿ ಹಸನ್‌ 31, ಲಿಟನ್‌ ದಾಸ್‌ 22, ಕಾರ್ನಿವಾಲ್‌ 105ಕ್ಕೆ 4, ಬ್ರಾತ್‌ವೇಟ್‌ 25ಕ್ಕೆ 3, ವ್ಯಾರಿಕ್ಯಾನ್‌ 47ಕ್ಕೆ 3).

Advertisement

ಸರಣಿಶ್ರೇಷ್ಠ: ಎನ್‌ಕ್ರುಮಾಹ್‌ ಬಾನರ್‌.

 

  • ವೆಸ್ಟ್‌ ಇಂಡೀಸ್‌ ರನ್‌ ಅಂತರದ 2ನೇ ಸಣ್ಣ ಗೆಲುವು ದಾಖಲಿಸಿತು (17 ರನ್‌). ಇದಕ್ಕೂ ಮೊದಲು ಆಸ್ಟ್ರೇಲಿಯ ಎದುರಿನ 1993ರ ಅಡಿಲೇಡ್‌ ಟೆಸ್ಟ್‌ ಪಂದ್ಯವನ್ನು ಒಂದು ರನ್ನಿನಿಂದ ಜಯಿಸಿತ್ತು.
  • ವಿಂಡೀಸ್‌ 2012ರ ಬಳಿಕ ಬಾಂಗ್ಲಾದೇಶದಲ್ಲಿ ಮೊದಲ ಸಲ ಟೆಸ್ಟ್‌ ಸರಣಿ ಜಯಿಸಿತು. ಅಂದಿನ ಅಂತರವೂ 2-0.
  • ಈ ಪಂದ್ಯದ 4ನೇ ಇನ್ನಿಂಗ್ಸ್‌ನ ಎಲ್ಲ ವಿಕೆಟ್‌ಗಳೂ ಸ್ಪಿನ್ನರ್‌ಗಳ ಪಾಲಾದವು. ವೆಸ್ಟ್‌ ಇಂಡೀಸ್‌ ಸ್ಪಿನ್ನರ್ ಈ ಸಾಧನೆಗೈದ 3ನೇ ನಿದರ್ಶನ ಇದಾಗಿದೆ.
  • ರಖೀಂ ಕಾರ್ನಿವಾಲ್‌ ಈ ಪಂದ್ಯದಲ್ಲಿ 9 ವಿಕೆಟ್‌ ಕಿತ್ತರು. ಇದು ಬಾಂಗ್ಲಾದಲ್ಲಿ ವಿಂಡೀಸ್‌ ಬೌಲರ್‌ ಒಬ್ಬನ ಶ್ರೇಷ್ಠ ಸಾಧನೆಯಾಗಿದೆ.
  • ಮೆಹಿದಿ ಹಸನ್‌ ಮಿರಾಜ್‌ 100 ವಿಕೆಟ್‌ ಉರುಳಿಸಿದರು. ಅವರು ಈ ಸಾಧನೆಗೈದ ಬಾಂಗ್ಲಾದೇಶದ ಅತೀ ಕಿರಿಯ ಬೌಲರ್‌. ಜತೆಗೆ ಅತೀ ಕಡಿಮೆ 24 ಟೆಸ್ಟ್‌ಗಳಲ್ಲಿ “ವಿಕೆಟ್‌ ಶತಕ’ ಪೂರೈಸಿದರು. ಬಾಂಗ್ಲಾದ ಹಿಂದಿನ ದಾಖಲೆ ತೈಜುಲ್‌ ಇಸ್ಲಾಮ್‌ ಅವರದಾಗಿತ್ತು (25 ಟೆಸ್ಟ್‌ಗಳಲ್ಲಿ 100 ವಿಕೆಟ್‌).
Advertisement

Udayavani is now on Telegram. Click here to join our channel and stay updated with the latest news.

Next