Advertisement

ಅರ್ಹತಾ ಪಂದ್ಯದಲ್ಲಿ ಮತ್ತೊಂದು ಏರುಪೇರು; ಸ್ಕಾಟ್ಲೆಂಡ್‌ ಏಟಿಗೆ ವಿಂಡೀಸ್‌ ಪಲ್ಟಿ

11:18 PM Oct 17, 2022 | Team Udayavani |

ಹೋಬರ್ಟ್‌: ಟಿ20 ವಿಶ್ವಕಪ್‌ ಅರ್ಹತಾ ಸುತ್ತಿನ ಸ್ಪರ್ಧೆಯ ದ್ವಿತೀಯ ದಿನವೂ ಏರುಪೇರಿನ ಫ‌ಲಿತಾಂಶ ದಾಖಲಾಗಿದೆ.

Advertisement

“ಬಿ’ ಗ್ರೂಪ್‌ ಸೆಣಸಾಟದಲ್ಲಿ ಸ್ಕಾಟ್ಲೆಂಡ್‌ ಪಡೆ ಎರಡು ಬಾರಿಯ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ತಂಡವನ್ನು 42 ರನ್ನುಗಳಿಂದ ಕೆಡವಿದೆ.

ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಸ್ಕಾಟ್ಲೆಂಡ್‌ 5 ವಿಕೆಟಿಗೆ 160 ರನ್‌ ಗಳಿಸಿ ಸವಾಲೊಡ್ಡಿತು. ಟಿ20 ಸ್ಪೆಷಲಿಸ್ಟ್‌ಗಳನ್ನು ಹೊಂದಿದ್ದ ವೆಸ್ಟ್‌ ಇಂಡೀಸ್‌ 18.3 ಓವರ್‌ಗಳಲ್ಲಿ 118ಕ್ಕೆ ಸರ್ವಪತನ ಕಂಡಿತು.

ಮೊದಲ ದಿನ “ಎ’ ವಿಭಾಗದ ಪಂದ್ಯದಲ್ಲಿ ನಮೀಬಿಯಾ ಮಾಜಿ ಚಾಂಪಿಯನ್‌ ಲಂಕೆಯನ್ನು ಬಲೆಗೆ ಬೀಳಿಸಿತ್ತು. ರಿಚಿ ಬೆರಿಂಗ್ಟನ್‌ ನಾಯಕತ್ವದ ಸ್ಕಾಟ್ಲೆಂಡ್‌, ಆರಂಭಕಾರ ಜಾರ್ಜ್‌ ಮುನ್ಸಿ ಪ್ರಯತ್ನದಿಂದ 160ರ ತನಕ ಸಾಗಿತು. ಮುನ್ಸಿ ಔಟಾಗದೆ 66 ರನ್‌ ಹೊಡೆದರು (53 ಎಸೆತ, 9 ಬೌಂಡರಿ). ಅಲ್ಜಾರಿ ಜೋಸೆಫ್ ಮತ್ತು ಒಬೆಡ್‌ ಮೆಕಾಯ್‌ ತಲಾ 2 ವಿಕೆಟ್‌ ಕಿತ್ತರು.

ಸ್ಪಿನ್‌ ಸುಳಿಯಲ್ಲಿ ವಿಂಡೀಸ್‌
ವಿಂಡೀಸ್‌ ಸ್ಪಿನ್‌ ಸುಳಿಗೆ ಸಿಲುಕಿತು. ಎಡಗೈ ಸ್ಪಿನ್ನರ್‌ ಮಾರ್ಕ್‌ ವ್ಯಾಟ್‌ ಬೌಲಿಂಗ್‌ ಆರಂಭಿಸಿ 12 ರನ್ನಿಗೆ 3 ವಿಕೆಟ್‌ ಉರುಳಿಸಿದರು. ಆಫ್ಸ್ಪಿನ್ನರ್‌ ಮೈಕಲ್‌ ಲೀಸ್ಕ್ ಮತ್ತು ಮಧ್ಯಮ ವೇಗಿ ಬ್ರಾಡ್‌ ವೀಲ್‌ ತಲಾ 2 ವಿಕೆಟ್‌ ಕಿತ್ತು ಕೆರಿಬಿಯನ್ನರನ್ನು ಕಾಡಿದರು.

Advertisement

38 ರನ್‌ ಮಾಡಿದ ಜೇಸನ್‌ ಹೋಲ್ಡರ್‌ ಅವರದು ವಿಂಡೀಸ್‌ ಸರದಿಯ ಅತ್ಯಧಿಕ ಗಳಿಕೆ. ಮೇಯರ್‌ 20, ಕಿಂಗ್‌ 17, ಲೂಯಿಸ್‌ 14 ರನ್‌ ಮಾಡಿದರು. ಮುಂದಿನ ಪಂದ್ಯದಲ್ಲಿ ಜಿಂಬಾಬ್ವೆ ಯನ್ನು ಸೋಲಿಸಿದರಷ್ಟೇ ವೆಸ್ಟ್‌ ಇಂಡೀಸ್‌ಗೆ ಸೂಪರ್‌-12 ಪ್ರವೇಶ ಸಾಧ್ಯವಾಗಲಿದೆ ಎಂಬುದು ಸದ್ಯದ ಲೆಕ್ಕಾಚಾರ.

ಸಂಕ್ಷಿಪ್ತ ಸ್ಕೋರ್‌: ಸ್ಕಾಟ್ಲೆಂಡ್‌-5 ವಿಕೆಟಿಗೆ 160 (ಮುನ್ಸಿ 66, ಮೆಕ್‌ ಲಿಯೋಡ್‌ 23, ಜೋನ್ಸ್‌ 20, ಹೋಲ್ಡರ್‌ 14ಕ್ಕೆ 2, ಜೋಸೆಫ್ 28ಕ್ಕೆ 2). ವೆಸ್ಟ್‌ ಇಂಡೀಸ್‌-18.3 ಓವರ್‌ಗಳಲ್ಲಿ 118 (ಹೋಲ್ಡರ್‌ 38, ಮೇಯರ್ 20, ಕಿಂಗ್‌ 17, ವ್ಯಾಟ್‌ 12ಕ್ಕೆ 3, ಲೀಸ್ಕ್ 14ಕ್ಕೆ 2, ವೀಟ್‌ 32ಕ್ಕೆ 2).
ಪಂದ್ಯಶ್ರೇಷ್ಠ: ಜಾರ್ಜ್‌ ಮುನ್ಸಿ.

ಜಿಂಬಾಬ್ವೆಗೆ 31 ರನ್‌ ಜಯ
ಮತ್ತೊಂದು ಗ್ರೂಪ್‌ “ಬಿ’ ಪಂದ್ಯದಲ್ಲಿ ಜಿಂಬಾಬ್ವೆ 31 ರನ್ನುಗಳಿಂದ ಐರ್ಲೆಂಡ್‌ಗೆ ಸೋಲುಣಿಸಿತು. ಜಿಂಬಾಬ್ವೆ 7 ವಿಕೆಟಿಗೆ 174 ರನ್‌ ಹೊಡೆದರೆ, ಐರ್ಲೆಂಡ್‌ 9 ವಿಕೆಟ್‌ ನಷ್ಟಕ್ಕೆ 143 ರನ್‌ ಮಾಡಿತು. ಜಿಂಬಾಬ್ವೆ ಪರ ಸಿಕಂದರ್‌ ರಝಾ ಬ್ಯಾಟಿಂಗ್‌ ನಲ್ಲಿ (82), ಬ್ಲೆಸಿಂಗ್‌ ಮುಝರ ಬನಿ ಬೌಲಿಂಗ್‌ನಲ್ಲಿ ಮಿಂಚಿದರು (23ಕ್ಕೆ 3).

ಇತರ ಅಭ್ಯಾಸ ಪಂದ್ಯಗಳ ಫ‌ಲಿತಾಂಶ
ನ್ಯೂಜಿಲ್ಯಾಂಡ್‌ 98 ಆಲೌಟ್‌
ಬ್ರಿಸ್ಬೇನ್‌: ದಕ್ಷಿಣ ಆಫ್ರಿಕಾ ಎದುರಿನ ಅಭ್ಯಾಸ ಪಂದ್ಯದಲ್ಲಿ 98 ರನ್ನಿಗೆ ಉದುರಿದ ನ್ಯೂಜಿಲ್ಯಾಂಡ್‌ 9 ವಿಕೆಟ್‌ಗಳ ಸೋಲಿಗೆ ತುತ್ತಾಗಿದೆ. ಕೇಶವ್‌ ಮಹಾರಾಜ್‌ (17ಕ್ಕೆ 3), ತಬ್ರೇಜ್‌ (6ಕ್ಕೆ 2) ಮತ್ತು ವೇನ್‌ ಪಾರ್ನೆಲ್‌ (8ಕ್ಕೆ 2) ದಾಳಿಗೆ ಸಿಲುಕಿದ ಕಿವೀಸ್‌ 17.1 ಓವರ್‌ಗಳಲ್ಲಿ 98ಕ್ಕೆ ಕುಸಿಯಿತು. ದಕ್ಷಿಣ ಆಫ್ರಿಕಾ 11.2 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 100 ರನ್‌ ಬಾರಿಸಿತು. ರಿಲೀ ರೋಸ್ಯೂ ಅಜೇಯ 54 ರನ್‌ ಹೊಡೆದರು. ನ್ಯೂಜಿಲ್ಯಾಂಡ್‌ ಪರ ಮಾರ್ಟಿನ್‌ ಗಪ್ಟಿಲ್‌ ಸರ್ವಾಧಿಕ 26 ರನ್‌ ಮಾಡಿದರು.

ಪಾಕ್‌ಗೆ ಸೋಲುಣಿಸಿದ ಇಂಗ್ಲೆಂಡ್‌
ಬ್ರಿಸ್ಬೇನ್‌: ಮಳೆಯಿಂದಾಗಿ 19 ಓವರ್‌ಗಳಿಗೆ ಇಳಿಸಲ್ಪಟ್ಟ ಪಂದ್ಯದಲ್ಲಿ ಇಂಗ್ಲೆಂಡ್‌ 6 ವಿಕೆಟ್‌ಗಳಿಂದ ಪಾಕಿಸ್ಥಾನವನ್ನು ಮಣಿಸಿದೆ. ಪಾಕ್‌ 8 ವಿಕೆಟ್‌ ನಷ್ಟಕ್ಕೆ 160 ರನ್‌ ಗಳಿಸಿದರೆ ಇಂಗ್ಲೆಂಡ್‌ ಕೇವಲ 14.4 ಓವರ್‌ಗಳಲ್ಲಿ 4 ವಿಕೆಟಿಗೆ 163 ರನ್‌ ಬಾರಿಸಿತು. ಬೆನ್‌ ಸ್ಟೋಕ್ಸ್‌ (36), ಲಿವಿಂಗ್‌ಸ್ಟೋನ್‌ (28), ಹ್ಯಾರಿ ಬ್ರೂಕ್‌ (ಅಜೇಯ 45), ಸ್ಯಾಮ್‌ ಕರನ್‌ (ಅಜೇಯ 33) ಬಿರುಸಿನ ಆಟದ ಮೂಲಕ ಪಾಕ್‌ ದಾಳಿಯನ್ನು ಪುಡಿಗಟ್ಟಿದರು. ಪಾಕಿಸ್ಥಾನ ಸ್ಟಾರ್‌ ಆಟಗಾರರರಿಗೆ ವಿಶ್ರಾಂತಿ ನೀಡಿತ್ತು.

ಬಾಂಗ್ಲಾವನ್ನು ಬಗ್ಗುಬಡಿದ ಅಫ್ಘಾನ್‌
ಬ್ರಿಸ್ಬೇನ್‌: ಶೋಚನೀಯ ಬ್ಯಾಟಿಂಗ್‌ ಪ್ರದರ್ಶಿಸಿದ ಬಾಂಗ್ಲಾದೇಶ 62 ರನ್ನುಗಳಿಂದ ಅಫ್ಘಾನಿಸ್ಥಾನಕ್ಕೆ ಶರಣಾಗಿದೆ. ಅಫ್ಘಾನ್‌ 7 ವಿಕೆಟಿಗೆ 161 ರನ್‌ ಗಳಿಸಿದರೆ, ಬಾಂಗ್ಲಾದೇಶ 9ಕ್ಕೆ ಕೇವಲ 98 ರನ್‌ ಗಳಿಸಿ ಶರಣಾಯಿತು. ಫ‌ಝಲ್‌ ಹಕ್‌ ಫಾರೂಖಿ 9 ರನ್ನಿಗೆ 3 ವಿಕೆಟ್‌ ಕಿತ್ತು ಬಾಂಗ್ಲಾವನ್ನು ಕೆಡವಿದರು. ಅಫ್ಘಾನ್‌ ಪರ ಇಬ್ರಾಹಿಂ ಜದ್ರಾನ್‌ 46, ನಾಯಕ ಮೊಹಮ್ಮದ್‌ ನಬಿ ಅಜೇಯ 41 ರನ್‌ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next