ಹರಾರೆ: ಇಲ್ಲಿನ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಅರ್ಹತಾ ಪಂದ್ಯದ ಶನಿವಾರ ನಡೆದ ಸೂಪರ್ ಸಿಕ್ಸ್ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡ ವೆಸ್ಟ್ ಇಂಡೀಸ್ ಗೆ ಸೋಲಿನ ಶಾಕ್ ನೀಡಿದೆ. ಇದರಿಂದಾಗಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯುವ ರೇಸ್‌ನಿಂದ ಎರಡು ಬಾರಿಯ ಚಾಂಪಿಯನ್ ಹೊರ ಬಿದ್ದಿತು.
1975 ಮತ್ತು 1979 ರ ಚಾಂಪಿಯನ್ ವಿಂಡೀಸ್ 48 ವರ್ಷಗಳ ಪಂದ್ಯಾವಳಿಯ ಇತಿಹಾಸದಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅಗ್ರ 10 ತಂಡಗಳಲ್ಲಿ ಕಾಣಿಸಿಕೊಳ್ಳದಿರುವುದು ಇದೇ ಮೊದಲು. ಈಗಾಗಲೇ ಆತಿಥೇಯ ಜಿಂಬಾಬ್ವೆ ಮತ್ತು ನೆದರ್ಲೆಂಡ್ಸ್ ವಿರುದ್ಧ ಸೋಲು ಅನುಭವಿಸಿದ ವಿಂಡೀಸ್ ಗೆ ಸ್ಕಾಟ್ಲೆಂಡ್ ವಿರುದ್ಧ ಗೆಲ್ಲಲೇಬೇಕಾದ ಸೂಪರ್ ಸಿಕ್ಸ್ ಪಂದ್ಯದ ಸೋಲು ಗಾಯದ ಮೇಲೆ ಹಾಕಿದ ಮಾಸದ ಬರೆಯಾಗಿ ಪರಿಣಮಿಸಿದೆ.
ಸ್ಕಾಟ್ಲೆಂಡ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬಿಗಿ ಬೌಲಿಂಗ್ ದಾಳಿ ನಡೆಸಿ ವಿಂಡೀಸ್ ತಂಡವನ್ನು 181 ರನ್ ಗಳಿಗೆ ನಿಯಂತ್ರಿಸಿತು. ಸಾಧಾರಣ ಗುರಿ ಬೆನ್ನಟ್ಟಿದ ಸ್ಕಾಟ್ಲೆಂಡ್ ಕ್ರಿಸ್ಟೋಫರ್ ಮ್ಯಾಕ್ಬ್ರೈಡ್ ಅವರ ವಿಕೆಟ್ ಅನ್ನು ಮೊದಲ ಎಸೆತದಲ್ಲಿ ಕಳೆದುಕೊಂಡಿತು. ಆದರೂ ಮ್ಯಾಥ್ಯೂ ಕ್ರಾಸ್ ಔಟಾಗದೆ 74 ರನ್, ಬ್ರ್ಯಾಂಡನ್ ಮೆಕ್‌ಮುಲ್ಲೆನ್ 69 ರನ್ ಗಳ ತಾಳ್ಮೆಯ ಸಮಯೋಚಿತ ಆಟ ಗೆಲುವಿಗೆ ಕಾರಣ ವಾಯಿತು. 43.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿ 7 ವಿಕೆಟ್ ಗಳ ಜಯ ಗಳಿಸಿತು.
ಸ್ಕಾಟ್ಲೆಂಡ್ ಪರ ಬೌಲಿಂಗ್ ನಲ್ಲೂ ಮಿಂಚಿದ ಮೆಕ್‌ಮುಲ್ಲೆನ್ 3 ವಿಕೆಟ್ ಪಡೆದರು. ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ವಿಂಡೀಸ್ 81 ರನ್ ಆಗುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಪರದಾಡಿತು. ಆರಂಭಿಕ ಆಟಗಾರ ಬ್ರಾಂಡನ್ ಕಿಂಗ್ 22 ರನ್ ಗಳಿಸಿದ್ದು ಹೊರತು ಪಡಿಸಿ ಉಳಿದ ಆಟಗಾರರು ರನ್ ಬರ ಅನುಭವಿಸಿ ಪೆವಿಲಿಯನ್ ಪೆರೇಡ್ ನಡೆಸಿದರು. ಪೂರನ್ 21 ಮತ್ತು ಹೋಲ್ಡರ್ 45 ರನ್ ಗಳಿಸಿ ತಂಡ ಎರಡಂಕಿ ದಾಟಲು ನೆರವಾದರು. ಆ ಬಳಿಕ ರೊಮಾರಿಯೋ ಶೆಫರ್ಡ್36 ರನ್ ಗಳಿಸಿದರು. ಕೆವಿನ್ ಸಿಂಕ್ಲೇರ್ 10 ರನ್ , ಅಕೇಲ್ ಹೋಸೇನ್ ಔಟಾಗದೆ 6, ಅಲ್ಜಾರಿ ಜೋಸೆಫ್ 6 ರನ್ ಗಳಿಸಿ ಔಟಾದರು.