ಕಿಂಗ್‌ಸ್ಟನ್ (ಜಮೈಕಾ): ಪ್ರವಾಸಿ ನ್ಯೂಜಿಲ್ಯಾಂಡ್ ಎದುರಿನ ಟಿ20 ಸರಣಿಯಲ್ಲಿ ವೆಸ್ಟ್ ಇಂಡೀಸ್ ವೈಟ್‌ವಾಶ್ ಅವಮಾನದಿಂದ ಪಾರಾಗಿದೆ.
3ನೇ ಹಾಗೂ ಅಂತಿಮ ಪಂದ್ಯವನ್ನು 8 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದು ಸರಣಿ ಸೋಲಿನ ಅಂತರವನ್ನು 1-2ಕ್ಕೆ ಇಳಿಸಿಕೊಂಡಿದೆ.
ಇಲ್ಲಿನ “ಸಬೀನಾ ಪಾರ್ಕ್’ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ 7 ವಿಕೆಟಿಗೆ 145 ರನ್ ಗಳಿಸಿದರೆ, ವೆಸ್ಟ್ ಇಂಡೀಸ್ 19 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 150 ಬಾರಿಸಿತು. ಮೊದಲೆರಡು ಪಂದ್ಯಗಳನ್ನು ನ್ಯೂಜಿಲ್ಯಾಂಡ್ ಕ್ರಮವಾಗಿ 13 ರನ್ ಹಾಗೂ 90 ರನ್ನುಗಳಿಂದ ಜಯಿಸಿತ್ತು.
ವಿಂಡೀಸ್ ಆರಂಭಿಕರಾದ ಬ್ರ್ಯಾಂಡನ್ ಕಿಂಗ್ ಮತ್ತು ಶಮರ್ ಬ್ರೂಕ್ಸ್ ಪ್ರಚಂಡ ಬ್ಯಾಟಿಂಗ್ ನಡೆಸಿ ಭದ್ರ ಬುನಾದಿ ನಿರ್ಮಿಸಿದರು. 13.1 ಓವರ್‌ಗಳಲ್ಲಿ 101 ರನ್ ಹರಿದು ಬಂತು. ಕಿಂಗ್ ಗಳಿಕೆ 35 ಎಸೆತಗಳಿಂದ 53 ರನ್ (4 ಫೋರ್, 3 ಸಿಕ್ಸರ್). ಈ ಬ್ಯಾಟಿಂಗ್ ಸಾಹಸಕ್ಕಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.
ಬ್ರೂಕ್ಸ್ ಔಟಾಗದೆ 56 ರನ್ ಹೊಡೆದರು (59 ಎಸೆತ, 3 ಬೌಂಡರಿ, 2 ಸಿಕ್ಸರ್). ಇವರೊಂದಿಗೆ ಪೊವೆಲ್ 27 ರನ್ ಮಾಡಿ ಔಟಾಗದೆ ಉಳಿದರು.
ನ್ಯೂಜಿಲ್ಯಾಂಡಿಗೆ ಓಡಿಯನ್ ಸ್ಮಿತ್ ಕಡಿವಾಣ ಹಾಕಿದರು. ಇವರ ಸಾಧನೆ 29ಕ್ಕೆ 3 ವಿಕೆಟ್. ಅಖೀಲ್ ಹುಸೇನ್ 2 ವಿಕೆಟ್ ಕೆಡವಿದರು. 41 ರನ್ ಮಾಡಿದ ಗ್ಲೆನ್ ಫಿಲಿಪ್ಸ್ ಅವರದು ನ್ಯೂಜಿಲ್ಯಾಂಡ್ ಸರದಿಯ ಸರ್ವಾಧಿಕ ಗಳಿಕೆ.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲ್ಯಾಂಡ್-7 ವಿಕೆಟಿಗೆ 145 (ಫಿಲಿಪ್ಸ್ 41, ವಿಲಿಯಮ್ಸನ್ 24, ಕಾನ್ವೆ 21, ಸ್ಮಿತ್ 29ಕ್ಕೆ 3, ಹೊಸೇನ್ 28ಕ್ಕೆ 2). ವೆಸ್ಟ್ ಇಂಡೀಸ್-19 ಓವರ್‌ಗಳಲ್ಲಿ 2 ವಿಕೆಟಿಗೆ 150 (ಬ್ರೂಕ್ಸ್ ಔಟಾಗದೆ 56, ಕಿಂಗ್ 53, ಪೊವೆಲ್ ಔಟಾಗದೆ 27).
ಪಂದ್ಯಶ್ರೇಷ್ಠ: ಬ್ರ್ಯಾಂಡನ್ ಕಿಂಗ್.
ಸರಣಿಶ್ರೇಷ್ಠ: ಗ್ಲೆನ್ ಫಿಲಿಪ್ಸ್.