ಟ್ರಿನಿಡಾಡ್: ಇಂಗ್ಲೆಂಡ್ ಪ್ರವಾಸವನ್ನು ಯಶಸ್ವಿಯಾಗಿ ಪೂರೈಸಿದ ಭಾರತೀಯ ತಂಡವು ಜು. 22ರಿಂದ ಆರಂಭವಾಗುವ ಮೂರು ಏಕಿದಿನ ಮತ್ತು ಐದು ಟಿ20 ಪಂದ್ಯಗಳಿಗಾಗಿ ವೆಸ್ಟ್‌ಇಂಡೀಸ್‌ಗೆ ಪ್ರಯಾಣಿಸಲಿದೆ.
ರೋಹಿತ್ ಶರ್ಮ ಅವರ ಅನುಪಸ್ಥಿತಿಯಲ್ಲಿ 50 ಓವರ್‌ಗಳ ಏಕದಿನ ಸರಣಿಗೆ ತಂಡದ ನಾಯಕತ್ವವನ್ನು ಶಿಖರ್ ಧವನ್ ಅವರು ವಹಿಸಿಕೊಳ್ಳಲಿದ್ದಾರೆ.
ಧವನ್ ನೇತೃತ್ವದ ಭಾರತೀಯ ತಂಡ ಬುಧವಾರ ಹೊಟೇಲ್‌ಗೆ ಪ್ರವೇಶಿಸಿದ ಬಳಿಕ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.
ಆಟಗಾರರಾದ ಯಜುವೇಂದ್ರ ಚಹಲ್, ಆವೇಶ್ ಖಾನ್, ಶ್ರೇಯಸ್ ಅಯರ್, ಇಶಾನ್ ಕಿಶನ್, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಅವರು ಹೊಟೇಲ್‌ಗೆ ಆಗಮಿಸಿದರು. ಇಂಗ್ಲೆಂಡ್ ಪ್ರವಾಸದ ವೇಳೆ ಕಾಣಿಸಿಕೊಂಡಿದ್ದ ಹಿರಿಯ ಆಟಗಾರರಾದ ರಿಷಬ್ ಪಂತ್ ಹಾರ್ದಿಕ್ ಪಾಂಡ್ಯ ಅವರಿಗೆ ವಿಂಡಿಸ್ ವಿರುದ್ಧದ ಏಕದಿನ ಸರಣಿಗೆ ವಿಶ್ರಾಂತಿ ನೀಡಲಾಗಿದೆ. ಜಸ್‌ಪ್ರೀತ್ ಬುಮ್ರಾ ಮತ್ತು ವಿರಾಟ್ ಕೊಹ್ಲಿ ಪೂರ್ಣ ಸರಣಿಯಲ್ಲಿ ಪಾಲ್ಗೊಳ್ಳುತ್ತಿಲ್ಲ.
ಏಕದಿನ ಸರಣಿಗೆ ಭಾರತೀಯ ತಂಡವು ಯುವ ವೇಗದ ಪಡೆಯನ್ನು ಅವಲಂಭಿಸಿದೆ. ಸಿರಾಜ್, ಕೃಷ್ಣ, ಅರ್ಷದೀಪ್, ಆವೇಶ್ ಮತ್ತು ಶಾದೂìಲ್ ಅವರು ವಿಂಡೀಸ್ ಪಡೆಯನ್ನು ಕಟ್ಟಿಹಾಕಬೇಕಾಗಿದೆ. ಧವನ್ ಅವರು ಋತುರಾಜ್ ಗಾಯಕ್‌ವಾಡ್ ಅಥವಾ ಕಿಶನ್ ಜತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಆಬಳಿಕ ಮಧ್ಯಮ ಕ್ರಮಾಂಕದಲ್ಲಿ ಶುಭ್‌ಮನ್ ಗಿಲ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ ಮತ್ತು ಸೂರ್ಯಕುಮಾರ್ ಯಾದವ್ ತಂಡವನ್ನು ಆಧರಿಸಲಿದ್ದಾರೆ. ತಂಡದಲ್ಲಿ ಓರ್ವ ತಜ್ಞ ಸ್ಪಿನ್ನರ್ (ಚಹಲ್) ಇದ್ದಾರೆ. ಅವರಿಗೆ ರವೀಂದ್ರ ಜಡೇಜ, ಅಕ್ಷರ್ ಪಟೇಲ್ ಮತ್ತು ದೀಪಕ್ ಹೂಡಾ ಸಹಕರಿಸಲಿದ್ದಾರೆ.
ಇದೇ ವೇಳೆ ವೆಸ್ಟ್‌ಇಂಡೀಸ್ ತಂಡದ ಮುಖ್ಯ ಆಯ್ಕೆಗಾರ ಡೇಸ್ಮಂಡ್ ಹೇಯ್ನ ತಮ್ಮ ಹಿರಿಯ ಆಲ್‌ರೌಂಡರ್ ಜಾಸನ್ ಹೋಲ್ಡರ್ ಅವರ ಸಾಮರ್ಥ್ಯದ ವಿವರ ನೀಡಿದರು. ಅವರು ಭಾರತ ವಿರುದ್ಧದ ಸರಣಿಗೆ ಬಹಳ ಉತ್ಸಾಹದಿಂದ ಹಾತೊರೆಯುತ್ತಿದ್ದಾರೆ. ಮೈದಾನದಲ್ಲೂ ಉತ್ತಮ ನಿರ್ವಹಣೆ ನೀಡುವ ವಿಶ್ವಾಸವಿದೆ ಎಂದರು.
ವಿಶ್ವದ ಖ್ಯಾತ ಆಲ್‌ರೌಂಡರ್ ಆಗಿರುವ ಹೋಲ್ಡರ್ ತಂಡಕ್ಕೆ ಮರಳಿರುವುದಕ್ಕೆ ಖುಷಿ ಯಿದೆ. ಅವರು ಮೈದಾನದಲ್ಲಿ ಅದ್ಭುತವನ್ನು ಸೃಷ್ಟಿ ಮಾಡಲಿದ್ದಾರೆ ಮತ್ತು ತಂಡದ ಉತ್ತಮ ಸಾಧನೆಗೆ ಕೊಡುಗೆ ನೀಡಲಿದ್ದಾರೆ ಎಂದು ಹೇಯ್ನ ಹೇಳಿದರು. ನಿಕೋಲಾಸ್ ಪೂರಣ್ ನೇತೃತ್ವದ ವಿಂಡೀಸ್ ತಂಡ ಭಾರತ ವಿರುದ್ಧ ಉತ್ತಮ ನಿರ್ವಹಣೆ ನೀಡುವ ನಿರೀಕ್ಷೆಯಿದೆ. ಇತ್ತೀಚೆಗೆ ನಡೆದ ಬಾಂಗ್ಲಾದೇಶ ವಿರುದ್ಧದ ತವರಿನ ಏಕದಿನ ಸರಣಿಯಲ್ಲಿ ವೆಸ್ಟ್‌ಇಂಡೀಸ್ 0-3 ಅಂತರದಿಂದ ಸೋತಿತ್ತು.