Advertisement
ಟಾಸ್ ಗೆದ್ದು ಮೊದಲು ಬ್ಯಾಟಿಂಗಿಗೆ ಇಳಿದ ಬಾಂಗ್ಲಾದೇಶ 5 ವಿಕೆಟಿಗೆ 184 ರನ್ ಪೇರಿಸಿ ಸವಾಲೊಡ್ಡಿತು. ಆದರೆ ವೆಸ್ಟ್ ಇಂಡೀಸ್ ಚೇಸಿಂಗಿಗೆ ವೇಳೆ ಮಳೆ ಅಡ್ಡಿಯಾಯಿತು. 17.1ನೇ ಓವರ್ ವೇಳೆ ಸುರಿದ ಮಳೆ ಮತ್ತೆ ಆಟವನ್ನು ಮುಂದುವರಿಸಲು ಅವಕಾಶ ನೀಡಲಿಲ್ಲ. ಆಗ ವಿಂಡೀಸ್ 7 ವಿಕೆಟಿಗೆ 135 ರನ್ ಮಾಡಿತ್ತು. ಡಕ್‌ವರ್ತ್-ಲೂಯಿಸ್ ನಿಯದ ಪ್ರಕಾರ ಈ ಅವಧಿಯಲ್ಲಿ ಕೆರಿಬಿಯನ್ ಪಡೆ 155 ರನ್ ಗಳಿಸಬೇಕಿತ್ತು.
ಬಾಂಗ್ಲಾದ ಬೃಹತ್ ಮೊತ್ತಕ್ಕೆ ಕಾರಣರಾದವರು ಆರಂಭಕಾರ ಲಿಟನ್ ದಾಸ್. ಅವರು ಜೀವನಶ್ರೇಷ್ಠ 61 ರನ್ ಬಾರಿಸಿದರು (32 ಎಸೆತ, 6 ಬೌಂಡರಿ, 3 ಸಿಕ್ಸರ್). ದಾಸ್-ತಮಿಮ್ ಇಕ್ಬಾಲ್ 4.4 ಓವರ್‌ಗಳಿಂದ 61 ರನ್ ಪೇರಿಸಿ ಭರ್ಜರಿ ಆರಂಭ ಒದಗಿಸಿದರು. ಬಾಂಗ್ಲಾ ಟಿ20 ಇತಿಹಾಸದಲ್ಲಿ ಆರಂಭಿಕ ವಿಕೆಟಿಗೆ ಅತೀ ವೇಗದಲ್ಲಿ 50 ರನ್ ಪೇರಿಸಿದ ದಾಖಲೆಯನ್ನೂ ಇವರು ಬರೆದರು (21 ಎಸೆತ). ಕೊನೆಯ ಗಳಿಗೆಯಲ್ಲಿ ಸಿಡಿದ ಮಹಮದುಲ್ಲ ಅಜೇಯ 32 ರನ್ ಹೊಡೆದರು (20 ಎಸೆತ, 4 ಬೌಂಡರಿ, 1 ಸಿಕ್ಸರ್). ಮಹಮದುಲ್ಲ-ಅರೀಫ್ ಉಲ್ ಹಕ್ (ಔಟಾಗದೆ 18) ಅಂತಿಮ 4 ಓವರ್‌ಗಳಲ್ಲಿ 38 ರನ್ ಸೂರೆಗೈದುದರಿಂದ ಬಾಂಗ್ಲಾ ಬೊಂಬಾಟ್ ಸ್ಕೋರ್ ದಾಖಲಿಸಿತು.
Related Articles
ಚೇಸಿಂಗ್ ವೇಳೆ ವೆಸ್ಟ್ ಇಂಡೀಸ್ ಎಡಗೈ ಮಧ್ಯಮ ವೇಗಿ ಮುಸ್ತಫಿಜುರ್ ದಾಳಿಗೆ ಸಿಲುಕಿತು (31ಕ್ಕೆ 3). ಆ್ಯಂಡ್ರೆ ಫ್ಲೆಚರ್ (6), ಸಾಮ್ಯುಯೆಲ್ಸ್ (2) ಬೇಗನೇ ಔಟಾದದ್ದು ದೊಡ್ಡ ಹೊಡೆತ ನೀಡಿತು. ರಿಕಾರ್ಡೊ ಪೊವೆಲ್ (23), ದಿನೇಶ್ ರಾಮದಿನ್ (21), ಚಾಡ್ವಿಕ್ ವಾಲ್ಟನ್ (19) ಕೂಡ ಕ್ರೀಸ್ ಆಕ್ರಮಿಸಲು ವಿಫಲರಾದರು.
Advertisement
ಈ ಹಂತದಲ್ಲಿ ಸಿಡಿದು ನಿಂತ ಆ್ಯಂಡ್ರೆ ರಸೆಲ್ ಬಾಂಗ್ಲಾ ಬೌಲರ್‌ಗಳ ಮೇಲೆರಗಿ ಹೋದರು. ಕೇವಲ 21 ಎಸೆತಗಳಿಂದ 47 ರನ್ ಸಿಡಿಸಿನ ಭೀತಿಯೊಡ್ಡಿದರು (6 ಸಿಕ್ಸರ್, 1 ಬೌಂಡರಿ). ಆದರೆ 17.1ನೇ ಓವರಿನಲ್ಲಿ ರಸೆಲ್ ವಿಕೆಟ್ ಬಿದ್ದೊಡನೆಯೇ ಮಳೆ ಆರಂಭಗೊಂಡಿತು. ಪಂದ್ಯ ಇಲ್ಲಿಗೇ ನಿಂತಿತು.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ-5 ವಿಕೆಟಿಗೆ 184 (ಲಿಟನ್ ದಾಸ್ 61, ಮಹಮದುಲ್ಲ ಔಟಾಗದೆ 32, ಪೌಲ್ 26ಕ್ಕೆ 2, ಬ್ರಾತ್‌ವೇಟ್ 32ಕ್ಕೆ 2). ವೆಸ್ಟ್ ಇಂಡೀಸ್-17.1 ಓವರ್‌ಗಳಲ್ಲಿ 7 ವಿಕೆಟಿಗೆ 135 (ರಸೆಲ್ 47, ಪೊವೆಲ್ 23, ಮುಸ್ತಫಿಜುರ್ 31ಕ್ಕೆ 3). ಪಂದ್ಯಶ್ರೇಷ್ಠ: ಲಿಟನ್ ದಾಸ್. ಸರಣಿಶ್ರೇಷ್ಠ: ಶಕಿಬ್ ಅಲ್ ಹಸನ್.