Advertisement

ಇಂಗ್ಲೆಂಡಿಗೆ ಗೆಲುವಿನ ಸಮಾಧಾನ

12:30 AM Feb 14, 2019 | Team Udayavani |

ನಾರ್ತ್‌ ಸೌಂಡ್‌: ವೆಸ್ಟ್‌ ಇಂಡೀಸ್‌ ಎದುರಿನ ಮೂರನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ 232 ರನ್‌ ಜಯಭೇರಿ ಮೊಳಗಿಸಿದ ಇಂಗ್ಲೆಂಡ್‌ ಸರಣಿ ಸೋಲಿನ ಅಂತರವನ್ನು 2-1ಕ್ಕೆ ಇಳಿಸಿಕೊಂಡು ಸಮಾಧಾನಪಟ್ಟಿದೆ. ಆದರೆ ಮೊದಲೆರಡು ಟೆಸ್ಟ್‌ ಪಂದ್ಯಗಳನ್ನು ಜಯಿಸಿದ ವಿಂಡೀಸ್‌ “ವಿಸ್ಡನ್‌ ಟ್ರೋಫಿ’ಯನ್ನು ಎತ್ತಿ ಹಿಡಿಯಿತು.

Advertisement

ಗೆಲುವಿಗೆ 485 ರನ್ನುಗಳ ಗುರಿ ಪಡೆದ ಆತಿಥೇಯ ವೆಸ್ಟ್‌ ಇಂಡೀಸ್‌ ಇನ್ನೂ ಒಂದು ದಿನದ ಆಟ ಬಾಕಿ ಇರುವಂತೆಯೆ 252ಕ್ಕೆ ಆಲೌಟ್‌ ಆಯಿತು. ಉತ್ತಮ ಬ್ಯಾಟಿಂಗ್‌ ಹೋರಾಟ ಸಂಘಟಿಸಿದ ರೋಸ್ಟನ್‌ ಚೇಸ್‌ 5ನೇ ಶತಕದೊಂದಿಗೆ ಮಿಂಚಿದರು. 31ಕ್ಕೆ 4, 76ಕ್ಕೆ 5 ವಿಕೆಟ್‌ ಉರುಳಿಸಿಕೊಂಡು ಪರದಾಡುತ್ತಿದ್ದ ವಿಂಡೀಸ್‌, ಚೇಸ್‌ ಅವರ ಅಜೇಯ 102 ರನ್‌ ಸಾಹಸದಿಂದ ಸೋಲಿನಲ್ಲೂ ಸಮಾಧಾನಪಟ್ಟಿತು. 191 ಎಸೆತ ನಿಭಾಯಿಸಿದ ಚೇಸ್‌ 12 ಬೌಂಡರಿ ಹಾಗೂ ಒಂದು ಸಿಕ್ಸರ್‌ ಬಾರಿಸಿದರು.
ಚೇಸ್‌ ಹೊರತುಪಡಿಸಿದರೆ 34 ರನ್‌ ಮಾಡಿದ ಕೆಳ ಕ್ರಮಾಂಕದ ಅಲ್ಜಾರಿ ಜೋಸೆಫ್ ಅವರದೇ ಹೆಚ್ಚಿನ ಗಳಿಕೆ. ಕೆಮರ್‌ ರೋಚ್‌ 29 ರನ್‌ ಹೊಡೆದರು. 

ವಿಂಡೀಸ್‌ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದವರೆಂದರೆ ಆ್ಯಂಡರ್ಸನ್‌ ಮತ್ತು ಮೊಯಿನ್‌ ಅಲಿ. ಇಬ್ಬರೂ ತಲಾ 3 ವಿಕೆಟ್‌ ಕಿತ್ತರು. ಸ್ಟೋಕ್ಸ್‌ಗೆ 2 ವಿಕೆಟ್‌ ಲಭಿಸಿತು. ಮೊದಲ ಸರದಿಯಲ್ಲಿ 5 ವಿಕೆಟ್‌ ಕಬಳಿಸಿದ್ದ ಮಾರ್ಕ ವುಡ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ವುಡ್‌ಗೆ ಲಭಿಸಿದ್ದು ಒಂದು ವಿಕೆಟ್‌ ಮಾತ್ರ. ಕೆಮರ್‌ ರೋಚ್‌ ಸರಣಿಶ್ರೇಷ್ಠರೆನಿಸಿದರು.

ಜೋ ರೂಟ್‌ ಶತಕ
ಇದಕ್ಕೂ ಮುನ್ನ ಇಂಗ್ಲೆಂಡ್‌ ತನ್ನ ದ್ವಿತೀಯ ಸರದಿಯಲ್ಲಿ 5ಕ್ಕೆ 361 ರನ್‌ ಗಳಿಸಿ ಡಿಕ್ಲೇರ್‌ ಮಾಡಿತು. ನಾಯಕ ಜೋ ರೂಟ್‌ 122 ರನ್ನಿಗೆ (225 ಎಸೆತ, 10 ಬೌಂಡರಿ) ಔಟಾದೊಡನೆ ವಿಂಡೀಸನ್ನು ಬ್ಯಾಟಿಂಗಿಗೆ ಆಹ್ವಾನಿಸಿದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-277 ಮತ್ತು 5 ವಿಕೆಟಿಗೆ 361 ಡಿಕ್ಲೇರ್‌ (ರೂಟ್‌ 122, ಡೆನ್ಲಿ 69, ಬಟ್ಲರ್‌ 56, ಗ್ಯಾಬ್ರಿಯಲ್‌ 95ಕ್ಕೆ 2). ವೆಸ್ಟ್‌ ಇಂಡೀಸ್‌-154 ಮತ್ತು 252 (ಚೇಸ್‌ ಔಟಾಗದೆ 102, ಜೋಸೆಫ್ 34, ರೋಚ್‌ 29, ಆ್ಯಂಡರ್ಸನ್‌ 27ಕ್ಕೆ 3, ಅಲಿ 99ಕ್ಕೆ 3). ಪಂದ್ಯಶ್ರೇಷ್ಠ: ಮಾರ್ಕ ವುಡ್‌. ಸರಣಿಶ್ರೇಷ್ಠ: ಕೆಮರ್‌ ರೋಚ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next