ಸೌಥಂಪ್ಟನ್: ಕೋವಿಡ್-19 ಸೋಂಕಿನ ಕಾರಣದಿಂದ ಸುಮಾರು ತಿಂಗಳ ನಂತರ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಗೆಲುವಿನ ನಿರೀಕ್ಷೆಯಲ್ಲಿದೆ.
ನಾಲ್ಕನೇ ದಿನದ ಅಂತ್ಯಕ್ಕೆ ಇಂಗ್ಲೆಂಡ್ ಎಂಟು ವಿಕೆಟ್ ನಷ್ಟಕ್ಕೆ 284 ರನ್ ಗಳಿಸಿದ್ದು 170 ರನ್ ಮುನ್ನಡೆಯಲ್ಲಿದೆ.
ದ್ವಿತೀಯ ಇನ್ನಿಂಗ್ಸ್ ನಲ್ಲಿ ವಿಕೆಟ್ ನಷ್ಟವಿಲ್ಲದೆ 15 ರನ್ ಗಳಿಸಿದ್ದಲ್ಲಿಂದ ನಾಲ್ಕನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ಗೆ ಉತ್ತಮ ಆರಂಭ ದೊರೆಯಿತು. ರೋರಿ ಬರ್ನ್ಸ್ 42 ರನ್ ಗಳಿಸಿದರೆ, ಡೊಮಿನಿಕ್ ಸಿಬ್ಲೆ 50 ರನ್ ಗಳಿಸಿದರು. ಜೊ ಡೆನ್ಲಿ 29 ರನ್ ಗಳಿಸಿದರೆ, ನಾಯಕ ಬೆನ್ ಸ್ಟೋಕ್ಸ್ 46 ರನ್ ಗಳಿಸಿದರು. ಉತ್ತಮ ಬ್ಯಾಟಿಂಗ್ ಮಾಡಿದ ಜ್ಯಾಕ್ ಕ್ರಾವ್ಲಿ 76 ರನ್ ಗಳಿಸಿದರು.
ಒಂದು ಹಂತದಲ್ಲಿ ಮೂರು ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಇಂಗ್ಲೆಂಡ್ ಅಂತಿಮ ಸೆಶನ್ ನಲ್ಲಿ ವಿಕೆಟ್ ಕಳೆದುಕೊಂಡಿತು. ನಂತರ 30 ರನ್ ಅಂತರದಲ್ಲಿ ಐದು ವಿಕೆಟ್ ಕಳೆದುಕೊಂಡಿತು. ಶೆನಾನ್ ಗ್ಯಾಬ್ರುಯಲ್ ಮತ್ತು ಅಲ್ಜಾರಿ ಜೋಸೆಫ್ ಉತ್ತಮ ದಾಳಿ ಸಂಘಟಿಸಿದರು.
ದಿನದ ಅಂತ್ಯಕ್ಕೆ ಇಂಗ್ಲೆಂಡ್ ಪಡೆ ಎಂಟು ವಿಕೆಟ್ ನಷ್ಟಕ್ಕೆ 284 ರನ್ ಗಳಿಸಿದರು. ಅಂತಿಮ ದಿನದಲ್ಲಿ ಬೇಗನೇ ಎರಡು ವಿಕೆಟ್ ಕಬಳಿಸಿ ಗುರಿ ಬೆನ್ನತ್ತಿ ಐತಿಹಾಸಿಕ ಜಯ ಸಾಧಿಸಲು ಹೋಲ್ಡರ್ ಪಡೆ ಎದುರು ನೋಡುತ್ತಿದೆ.