Advertisement

ವೆಸ್ಟ್‌ ಇಂಡೀಸ್‌ ಎದುರು ನಡೆದ ರೋಚಕ ಹೋರಾಟದಲ್ಲಿ ಬಾಂಗ್ಲಾಕ್ಕೆ ಸೋಲು

08:56 PM Oct 29, 2021 | Team Udayavani |

ಶಾರ್ಜಾ: ಟಿ20 ವಿಶ್ವಕಪ್‌ ಗುಂಪು ಒಂದರ ಮಾಡು-ಮಡಿ ರೋಚಕ ಹೋರಾಟದಲ್ಲಿ ಬಾಂಗ್ಲಾದೇಶವನ್ನು 3 ರನ್ನುಗಳಿಂದ ಮಣಿಸಿದ ಹಾಲಿ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ಅಂಕದ ಖಾತೆ ತೆರೆದಿದೆ.

Advertisement

ಮೂರೂ ಪಂದ್ಯಗಳಲ್ಲಿ ಸೋಲನುಭವಿಸಿದ ಬಾಂಗ್ಲಾ ಕೂಟದಿಂದ ಬಹುತೇಕ ಹೊರಬಿದ್ದಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ವೆಸ್ಟ್‌ ಇಂಡೀಸ್‌ 20 ಓವರ್‌ಗಳಲ್ಲಿ 7 ವಿಕೆಟಿಗೆ 142 ರನ್‌ ಗಳಿಸಿದರೆ, ಬಾಂಗ್ಲಾ 20 ಓವರ್‌ಗಳಲ್ಲಿ 5 ವಿಕೆಟಿಗೆ 139 ರನ್‌ ಮಾಡಿ ಶರಣಾಯಿತು. ಬಾಂಗ್ಲಾ ಇನ್ನು ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯದ ಕಠಿಣ ಸವಾಲನ್ನು ಎದುರಿಸಬೇಕಿದೆ.

ಲಿಟನ್‌ ದಾಸ್‌ ಮತ್ತು ನಾಯಕ ಮಹಮದುಲ್ಲ ಉತ್ತಮ ಹೋರಾಟ ನೀಡಿ ಬಾಂಗ್ಲಾದ ಗೆಲುವಿನ ಆಸೆ ಚಿಗುರಿಸಿದರು. ಆದರೆ ಅಂತಿಮ 3 ಓವರ್‌ಗಳಿಂದ 30 ರನ್‌, 2 ಓವರ್‌ಗಳಿಂದ 22 ರನ್‌ ತೆಗೆಯುವ ಒತ್ತಡವನ್ನು ನಿಭಾಯಿಸಲು ವಿಫ‌ಲರಾದರು. ಆ್ಯಂಡ್ರೆ ರಸೆಲ್‌ ಪಾಲಾದ ಅಂತಿಮ ಓವರ್‌ನಲ್ಲಿ 13 ರನ್‌ ಸವಾಲು ಎದುರಾಯಿತು. ಅಂತಿಮ ಎಸೆತದಲ್ಲಿ ಬೌಂಡರಿ ಬೇಕಿತ್ತು. ಸ್ವತಃ ಕಪ್ತಾನ ಮಹಮದುಲ್ಲ ಕ್ರೀಸಿನಲ್ಲಿದ್ದರು. ಆದರೆ ಅವರ ಬ್ಯಾಟ್‌ಗೆ ಚೆಂಡು ಸಿಗಲಲ್ಲ, ಯಾವುದೇ ರನ್‌ ಬರಲಿಲ್ಲ. ಕೆರಿಬಿಯನ್ನರು ಮೊದಲ ಸಲ ಗೆಲುವಿನ ಖುಷಿಯನ್ನಾಚರಿಸಿದರು. ದಾಸ್‌ ಸರ್ವಾಧಿಕ 44 ರನ್‌ (43 ಎಸೆತ, 4 ಬೌಂಡರಿ), ಮಹಮದುಲ್ಲ ಔಟಾಗದೆ 31 ರನ್‌ ಮಾಡಿದರು (24 ಎಸೆತ, 2 ಬೌಂಡರಿ, 1 ಸಿಕ್ಸರ್‌).

ಅಂತಿಮ 6 ಓವರ್‌ ಆಟ: ಸತತ 3ನೇ ಸಲವೂ ಮೊದಲು ಬ್ಯಾಟಿಂಗ್‌ ಅವಕಾಶ ಪಡೆದ ವೆಸ್ಟ್‌ ಇಂಡೀಸ್‌ಗೆ ಇಲ್ಲಿಯೂ ಚಾಂಪಿಯನ್‌ ತಂಡದ ತಾಕತ್ತನ್ನು ತೋರಲಾಗಲಿಲ್ಲ. ಮೊದಲ 14 ಓವರ್‌ಗಳಲ್ಲಿ ಒಟ್ಟುಗೂಡಿದ್ದು ಬರೀ 70 ರನ್‌. ಆದರೆ ಅಂತಿಮ 6 ಓವರ್‌ಗಳಲ್ಲಿ ವಿಂಡೀಸ್‌ ಸಿಡಿದು ನಿಂತು 72 ರನ್‌ ಪೇರಿಸಿತು. ಇದರಲ್ಲಿ 19 ರನ್‌ ಮುಸ್ತಫಿಜುರ್‌ ಅವರ ಅಂತಿಮ ಓವರ್‌ನ ಅಂತಿಮ 5 ಎಸೆತಗಳಲ್ಲಿ ಬಂತು. ಇದರಲ್ಲಿ ಹೋಲ್ಡರ್‌ 2 ಸಿಕ್ಸರ್‌, ಪೊಲಾರ್ಡ್‌ ಒಂದು ಸಿಕ್ಸರ್‌ ಸಿಡಿಸಿದರು.

Advertisement

ಇದನ್ನೂ ಓದಿ:ಚುನಾವಣಾ ಆಯೋಗದ “ಐಕಾನ್‌’ ಆಗಿದ್ದ ಪುನೀತ್‌

ಸ್ಪಿನ್ನರ್‌ ಮೆಹೆದಿ ಹಸನ್‌ (27ಕ್ಕೆ 2), ಪೇಸರ್‌ಗಳಾದ ಮುಸ್ತಫಿಜುರ್‌ (43ಕ್ಕೆ 2) ಮತ್ತು ಶೊರಿಫ‌ುಲ್‌ ಇಸ್ಲಾಮ್‌ (20ಕ್ಕೆ2) ವಿಂಡೀಸಿಗೆ ಭರ್ಜರಿ ಕಡಿವಾಣ ಹಾಕಿದರು. ವಿಂಡೀಸರು ಸ್ಪಿನ್ನಿಗೆ ಆಡುವುದಿಲ್ಲ ಎಂಬುದನ್ನು ಅರಿತ ನಾಯಕ ಮಹಮದುಲ್ಲ ಆರಂಭದಲ್ಲೇ ಚೆಂಡನ್ನು ಆಫ್ಸ್ಪಿನ್ನರ್‌ ಮೆಹೆದಿ ಹಸನ್‌ ಕೈಗಿತ್ತಿದ್ದರು. ಈ ಯೋಜನೆ ಯಶಸ್ಸು ಕಂಡಿತು. 5ನೇ ಓವರ್‌ನಲ್ಲಿ ಮತ್ತೆ ಹಸನ್‌ ಅವರನ್ನು ದಾಳಿಗೆ ಇಳಿಸಲಾಯಿತು. ಗೇಲ್‌ (4) ಕ್ಲೀನ್‌ ಬೌಲ್ಡ್‌ ಆದರು. ಇದಕ್ಕೂ ಮುನ್ನ ಲೆವಿಸ್‌ ಆರೇ ರನ್ನಿಗೆ ಆಟ ಮುಗಿಸಿದ್ದರು. ಹೆಟ್‌ಮೈರ್‌ 9ರ ಗಡಿ ದಾಟಲಿಲ್ಲ. ರಸೆಲ್‌ ಬಾಲ್‌ ಎದುರಿಸುವ ಮೊದಲೇ ರನೌಟ್‌. ವಿಂಡೀಸ್‌ ಸ್ಥಿತಿ ಬಿಗಡಾಯಿಸಿತು.

ಒನ್‌ಡೌನ್‌ನಲ್ಲಿ ಬಂದಿದ್ದ ರೋಸ್ಟನ್‌ ಚೇಸ್‌ 19ನೇ ಓವರ್‌ ತನಕ ನಿಂತು ತಂಡವನ್ನು ಮೇಲೆತ್ತುವ ಪ್ರಯತ್ನ ಮಾಡಿದರು (39 ರನ್‌, 46 ಎಸೆತ). ಕೊನೆಯ ಹಂತದಲ್ಲಿ ನಿಕೋಲಸ್‌ ಪೂರಣ್‌ ಕೈಜೋಡಿಸಿದರು. 22 ಎಸೆತಗಳಿಂದ 40 ರನ್‌ ಚಚ್ಚಿದರು (4 ಸಿಕ್ಸರ್‌, 1 ಫೋರ್‌).

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌ 20 ಓವರ್‌, 142/7 (ನಿಕೋಲಸ್‌ ಪೂರನ್‌ 40, ರೋಸ್ಟನ್‌ ಚೇಸ್‌ 39, ಮೆಹೆದಿ ಹಸನ್‌ 27ಕ್ಕೆ 2). ಬಾಂಗ್ಲಾ 20 ಓವರ್‌, 139/5 (ಲಿಟನ್‌ ದಾಸ್‌ 44, ಮಹ್ಮದುಲ್ಲ 31, ಜೇಸನ್‌ ಹೋಲ್ಡರ್‌ 22ಕ್ಕೆ 1).

Advertisement

Udayavani is now on Telegram. Click here to join our channel and stay updated with the latest news.

Next