Advertisement

ಖೇಲ್‌ ಮುಗಿಸಿದರೇ ಕ್ರಿಸ್‌ ಗೇಲ್‌?

11:28 PM Nov 06, 2021 | Team Udayavani |

ಅಬುಧಾಬಿ: ವೆಸ್ಟ್‌ ಇಂಡೀಸಿನ ಮಹಾನ್‌ ಕ್ರಿಕೆಟಿಗ ಕ್ರಿಸ್‌ ಗೇಲ್‌ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿಯುವ ಸೂಚನೆ ನೀಡಿದ್ದಾರೆ. ಡ್ವೇನ್‌ ಬ್ರಾವೊ ತಮ್ಮ ನಿವೃತ್ತಿ ಘೋಷಿಸಿದ್ದಾರೆ. ಇವರ ಆರ್ಭಟ, ಇವರ ಆಟಗಾರಿಕೆ, ಶುದ್ಧ ಮನೋರಂಜನೆ ಮತ್ತು ಕೆರಿಬಿಯನ್‌ ಡ್ಯಾನ್ಸ್‌ ಇನ್ನು ಮುಂದೆ ಕಂಡುಬರುವುದಿಲ್ಲ. ಕೇವಲ ವಿಂಡೀಸ್‌ ಮಾತ್ರವಲ್ಲ, ಎಲ್ಲ ದೇಶಗಳಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಇವರ ನಿವೃತ್ತಿಯಿಂದ ಕ್ರಿಕೆಟ್‌ನಲ್ಲಿ ಶೂನ್ಯವೊಂದು ಆವರಿಸಲಿದೆ.

Advertisement

ತನ್ನನ್ನು ತಾನೇ “ಯುನಿವರ್ಸ್‌ ಬಾಸ್‌’ ಎಂದು ಹೇಳಿಕೊಳ್ಳುತ್ತಿದ್ದ, ಇದನ್ನು ಆಗಾಗ ಸಾಬೀತುಪಡಿಸುತ್ತಲೇ ಇದ್ದ 42 ವರ್ಷದ ಕ್ರಿಸ್ಟೋಫ‌ರ್‌ ಹೆನ್ರಿ ಗೇಲ್‌ ಅಧಿಕೃತವಾಗೇನೂ ನಿವೃತ್ತಿ ಘೋಷಣೆ ಮಾಡಿಲ್ಲ. ಆದರೆ, “ಗೇಲ್‌ ಅವರನ್ನು ನಾವೆಲ್ಲ ಕೊನೆಯ ಸಲ ವೆಸ್ಟ್‌ ಇಂಡೀಸ್‌ ಜೆರ್ಸಿಯಲ್ಲಿ ನೋಡುತ್ತಿದ್ದೇವೆ’ ಎಂಬ ಕಮೆಂಟೇಟರ್‌ ಇಯಾನ್‌ ಬಿಶಪ್‌ ಅವರ ಮಾತು, ಗೇಲ್‌ ಅವರ ವರ್ತನೆಗಳೆಲ್ಲ ಇದನ್ನು ಸಾಬೀತುಪಡಿಸಿವೆ.

1999ರಲ್ಲಿ ವೆಸ್ಟ್‌ ಇಂಡೀಸ್‌ ಪರ ಕ್ರಿಕೆಟ್‌ ಆಡಲಾರಂಭಿಸಿದ ಕ್ರಿಸ್‌ ಗೇಲ್‌, ತಂಡಕ್ಕೆ 2 ಸಲ ಟಿ20 ವಿಶ್ವಕಪ್‌ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 79 ಟಿ20 ಪಂದ್ಯಗಳಿಂದ 1,899 ರನ್‌ ಪೇರಿಸಿದ್ದಾರೆ. 2 ಶತಕ, 14 ಅರ್ಧ ಶತಕ ಸೇರಿದೆ. ಸರಾಸರಿ 28.11; ಸ್ಟ್ರೈಕ್‌ರೇಟ್‌ 137.31.

ಇದನ್ನೂ ಓದಿ:ವೆಸ್ಟ್‌ ಇಂಡೀಸ್‌ ವಿರುದ್ಧ ಆಸ್ಟ್ರೇಲಿಯ ವಿಜಯ

ಟಿ20 ಕ್ಯಾರಿಯರ್‌ನ 445 ಇನ್ನಿಂಗ್ಸ್‌ಗಳಿಂದ 14,321 ರನ್‌ ರಾಶಿ ಹಾಕಿದ್ದು ಗೇಲ್‌ ಬ್ಯಾಟಿಂಗ್‌ ವೈಭವಕ್ಕೆ ಸಾಕ್ಷಿ. ಸಿಡಿಸಿದ್ದು 22 ಶತಕ. 2013ರ ಐಪಿಎಲ್‌ನಲ್ಲಿ ಆರ್‌ಸಿಬಿ ಪರ 66 ಎಸೆತಗಳಿಂದ 175 ರನ್‌ ಬಾರಿಸಿದ ಸಾಹಸಿ ಈ ಗೇಲ್‌. ಅವರ ಕೊನೆಯ ಹಾಗೂ 1,045ನೇ ಸಿಕ್ಸರ್‌ ಶನಿವಾರದ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಸಿಡಿಯಿತು.

Advertisement

ಬ್ರಾವೊ ಅಧಿಕೃತ ಘೋಷಣೆ
ಆಲ್‌ರೌಂಡರ್‌ ಡ್ವೇನ್‌ ಬ್ರಾವೊ ತಮ್ಮ ಟಿ20 ವಿದಾಯವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. “ನನ್ನಲ್ಲಿರುವ ಪ್ರತಿಭೆಯನ್ನು ಪರಿಚಯಿಸಿದ ದೇವರಿಗೆ ಮೊದಲು ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ಕಳೆದ 18 ವರ್ಷಗಳ ಕಾಲ ವೆಸ್ಟ್‌ ಇಂಡೀಸ್‌ ಕ್ರಿಕೆಟಿಗೆ ಸೇವೆ ಸಲ್ಲಿಸಿದ್ದೇನೆ. ಬ್ರಿಯಾನ್‌ ಲಾರಾ ನನ್ನ ಬಾಲ್ಯದ ಹೀರೋ. ಅವರು ಪ್ರತಿನಿಧಿಸಿದ ತಂಡದಲ್ಲಿ ಇಷ್ಟೊಂದು ವರ್ಷ ಆಡುವ ಅವಕಾಶ ಲಭಿಸಿದ್ದು ನನ್ನ ಅದೃಷ್ಟ’ ಎಂಬುದಾಗಿ ಬ್ರಾವೊ ಹೇಳಿದರು.

“ನಾನು ಕ್ರಿಸ್‌ ಗೇಲ್‌ ಅವರ ದೊಡ್ಡ ಅಭಿಮಾನಿ. ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಬೆಳವಣಿಗೆಯಲ್ಲಿ ಗೇಲ್‌ ಕೊಡುಗೆ ದೊಡ್ಡದು. 42 ವರ್ಷದಲ್ಲೂ ಅವರು ಕ್ರಿಕೆಟ್‌ ಹಸಿವನ್ನು ಹೊಂದಿದ್ದಾರೆ. ಅವರೋರ್ವ ಲೆಜೆಂಡ್‌…’ ಎಂದುದಾಗಿ ಬ್ರಾವೊ ತಮ್ಮ ಸಹ ಆಟಗಾರನ ಗುಣಗಾನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next