ಕಿಂಗ್‌ಸ್ಟನ್: ಇದೇ ತಿಂಗಳಲ್ಲಿ 2 ಟೆಸ್ಟ್ ಪಂದ್ಯಗಳಿಗಾಗಿ ಜಿಂಬಾಬ್ವೆಗೆ ತೆರಳುವ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವನ್ನು ಅಂತಿಮಗೊಳಿಸಲಾಗಿದೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಆಡಲಾದ 15 ಸದಸ್ಯರ ತಂಡವನ್ನೇ ಉಳಿಸಿಕೊಳ್ಳಲಾಗಿದೆ.
ಇಂಗ್ಲೆಂಡ್ ಎದುರಿನ 3 ಪಂದ್ಯಗಳ ಈ ಸರಣಿಯನ್ನು ವಿಂಡೀಸ್ 1-2 ಅಂತರದಿಂದ ಕಳೆದುಕೊಂಡಿತ್ತು. ಈ ಸರಣಿಯಲ್ಲಿ ಕೇವಲ 41 ರನ್ ಮಾಡಿದ ಕೈಲ್ ಹೋಪ್ ಹಾಗೂ ಬರೀ 24 ರನ್ ಮಾಡಿದ ಕೀಪರ್ ಶೇನ್ ಡೌರಿಚ್ ಅವರ ಮೇಲೆ ಆಯ್ಕೆಗಾರರು ವಿಶ್ವಾಸವಿರಿಸಿದ್ದಾರೆ.
ವಿಂಡೀಸ್ ತಂಡವನ್ನು ಜಾಸನ್ ಹೋಲ್ಡರ್ ಮುನ್ನಡೆಸಲಿದ್ದಾರೆ. ಬುಲವಾಯೋದಲ್ಲಿ ಅ. 15ರಿಂದ ಜಿಂಬಾಬ್ವೆ “ಎ’ ವಿರುದ್ಧ ತ್ರಿದಿನ ಅಭ್ಯಾಸದ ಬಳಿಕ ಟೆಸ್ಟ್ ಸರಣಿ ಆರಂಭವಾಗಲಿದೆ. ಎರಡೂ ಟೆಸ್ಟ್‌ಗಳು ಬೊಲವಾಯೋದಲ್ಲೇ ನಡೆಯಲಿವೆ.
ಮೊದಲ ಟೆಸ್ಟ್ ಅ. 21ರಿಂದ, 2ನೇ ಟೆಸ್ಟ್ ನ. 2ರಿಂದ ಆರಂಭವಾಗಲಿದೆ.
ವೆಸ್ಟ್ ಇಂಡೀಸ್ ತಂಡ: ಜಾಸನ್ ಹೋಲ್ಡರ್ (ನಾಯಕ), ಕ್ರೆಗ್ ಬ್ರಾತ್‌ವೇಟ್, ದೇವೇಂದ್ರ ಬಿಶೂ, ಜರ್ಮೈನ್ ಬ್ಲ್ಯಾಕ್‌ವುಡ್, ರೋಸ್ಟನ್ ಚೇಸ್, ಮಿಗ್ಯುಯೆಲ್ ಕಮಿನ್ಸ್, ಶೇನ್ ಡೌರಿಚ್ (ವಿ.ಕೀ.), ಶಾನನ್ ಗ್ಯಾಬ್ರಿಯಲ್, ಶಿಮ್ರನ್ ಹೆಟ್‌ಮೈರ್, ಕೈಲ್ ಹೋಪ್, ಶೈ ಹೋಪ್, ಅಲ್ಜಾರಿ ಜೋಸೆಫ್, ಕೈರನ್ ಪೊವೆಲ್, ರೇಮನ್ ರೀಫರ್, ಕೆಮರ್ ರೋಶ್.