ಬ್ರಿಜ್‌ಟೌನ್ (ಬಾರ್ಬಡಾಸ್): ವಿಂಡೀಸ್ ನಾಯಕ ಕ್ರೆಗ್ ಬ್ರಾತ್‌ವೇಟ್ ಅಮೋಘ 160 ರನ್ ಬಾರಿಸಿ ಇಂಗ್ಲೆಂಡ್ ಎದುರಿನ ದ್ವಿತೀಯ ಟೆಸ್ಟ್ ಪಂದ್ಯವನ್ನು ಡ್ರಾದತ್ತ ಕೊಂಡೊಯ್ದಿದ್ದಾರೆ.
ಇಂಗ್ಲೆಂಡಿನ 507ಕ್ಕೆ ಜವಾಬು ನೀಡಿದ ವೆಸ್ಟ್ ಇಂಡೀಸ್ 411ಕ್ಕೆ ಮೊದಲ ಇನ್ನಿಂಗ್ಸ್ ಮುಗಿಸಿತು. ಬ್ರಾತ್‌ವೇಟ್ ಮ್ಯಾರಥಾನ್ ಬ್ಯಾಟಿಂಗ್ ಮೂಲಕ 160 ರನ್ ಬಾರಿಸಿ ಹೋರಾಟವನ್ನು ಜಾರಿಯಲ್ಲಿರಿಸಿದರು. ಅವರು ಬರೋಬ್ಬರಿ 489 ಎಸೆತಗಳನ್ನು ನಿಭಾಯಿಸಿ ನಿಂತರು.
ಹೊಡೆದದ್ದು 17 ಬೌಂಡರಿ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಜರ್ಮೈನ್ ಬ್ಲ್ಯಾಕ್‌ವುಡ್ ಮತ್ತೋರ್ವ ಶತಕವೀರ. ಅವರು 215 ಎಸೆತಗಳಿಂದ 102 ರನ್ ಮಾಡಿದರು (11 ಬೌಂಡರಿ).
ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 4ನೇ ದಿನದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 40 ರನ್ ಮಾಡಿದೆ. 136 ರನ್ ಮುನ್ನಡೆಯಲ್ಲಿದೆ.