ಕೋಲ್ಕತಾ: ಅಂಡಮಾನ್‌ನ ಉತ್ತರ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮತ್ತಷ್ಟು ತೀವ್ರಗೊಂಡಿದ್ದು, ಅ.24ರ ಬಳಿಕ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಏಳುವುದು ಬಹುತೇಕ ಖಚಿತವಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಈ ಚಂಡಮಾರುತಕ್ಕೆ “ಸಿತ್ರಾಂಗ್’ ಎಂಬ ಹೆಸರು ಇರಿಸಲಾಗಿದೆ.
ವಾಯುಭಾರ ಕುಸಿತವು ಪಶ್ಚಿಮ ವಾಯುವ್ಯಕ್ಕೆ ಚಲಿಸಿತು ಹಾಗೂ ಶನಿವಾರ ಬೆಳಗ್ಗೆ 8.30 ಗಂಟೆ ವೇಳೆಗೆ ಅಂಡಮಾನ್ ದ್ವೀಪಗಳ ಪಶ್ಚಿಮಕ್ಕೆ ಚಲಿಸಿ ಕುಸಿತ ಮತ್ತಷ್ಟು ತೀವ್ರಗೊಂಡಿತು ಎಂದು ಹವಾಮಾನ ಇಲಾಖೆಯ ಬುಲೆಟಿನ್ ತಿಳಿಸಿದೆ.
ಬಂಗಾಳ ಕೊಲ್ಲಿಯಲ್ಲಿ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿಯಲ್ಲಿ ಮೀನುಗಾರರು ಅ.23ರಿಂದ 26ರವರೆಗೆ ಆಳ ಸಮುದ್ರದ ಪ್ರದೇಶಕ್ಕೆ ಹೋಗದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಒಡಿಶಾ ಮತ್ತು ಪಶ್ಚಿಮ ಬಂಗಾಳ ಕರಾವಳಿಯಾದ್ಯಂತ ಈಗಾಗಲೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.