ಕೋಲ್ಕತಾ: ಪಶ್ಚಿಮಬಂಗಾಳದ ಅರಣ್ಯ ಖಾತೆ ಸಚಿವ ರಾಜೀವ್ ಬ್ಯಾನರ್ಜಿ ತಮ್ಮ ಸ್ಥಾನಕ್ಕೆ ಶುಕ್ರವಾರ(ಜನವರಿ 22, 2021) ರಾಜೀನಾಮೆ ನೀಡಿದ್ದು, ಇದರೊಂದಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಗೆ ಭಾರೀ ಹಿನ್ನಡೆಯಾದಂತಾಗಿದೆ.
ರಾಜೀನಾಮೆಗೆ ಬ್ಯಾನರ್ಜಿ ಯಾವುದೇ ಸ್ಪಷ್ಟ ಕಾರಣವನ್ನು ನೀಡಿಲ್ಲ. ಆದರೆ ಮಾರ್ಚ್, ಏಪ್ರಿಲ್ ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮಂಗಳೂರು ಪೊಲೀಸರ ಭರ್ಜರಿ ಬೇಟೆ: 44 ಕೆಜಿ ಗಾಂಜಾ ವಶ, ಏಳು ಆರೋಪಿಗಳ ಬಂಧನ
ಇಂದಿನಿಂದ(ಜ.22) ಅನ್ವಯವಾಗುವಂತೆ ನಾನು ಅರಣ್ಯ ಖಾತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ರಾಜೀವ್ ಬ್ಯಾನರ್ಜಿ ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದು, ರಾಜೀನಾಮೆಯನ್ನು ರಾಜ್ಯಪಾಲ ಜಗ್ ದೀಪ್ ಧಾನ್ಕಾರ್ ಅಂಗೀಕರಿಸಲಿದ್ದಾರೆ ಎಂದು ವರದಿ ವಿವರಿಸಿದೆ. ಕಳೆದ ಒಂದು ತಿಂಗಳಲ್ಲಿ ಪಶ್ಚಿಮ ಬಂಗಾಳದ ಸರ್ಕಾರದಲ್ಲಿ ಮೂವರು ಸಚಿವರು ರಾಜೀನಾಮೆ ನೀಡಿದಂತಾಗಿದೆ.
ತೃಣಮೂಲ ಕಾಂಗ್ರೆಸ್ ನ ಕೆಲವು ಮುಖಂಡರು ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿರುವುದಾಗಿ ಆರೋಪಿಸಿದ ನಂತರ ಬ್ಯಾನರ್ಜಿ ರಾಜೀನಾಮೆ ನೀಡಿರುವ ಬೆಳವಣಿಗೆ ನಡೆದಿದೆ. ಕಳೆದ ಎರಡು ತಿಂಗಳಿನಿಂದ ಸರ್ಕಾರ ಹಾಗೂ ಪಕ್ಷದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಟಿಎಂಸಿ ಹಿರಿಯ ಮುಖಂಡ, ಸಚಿವ ಪಾರ್ಥ ಚಟರ್ಜಿ ಎರಡು ಸುತ್ತಿನ ಮಾತುಕತೆ ನಡೆಸಿದ್ದರು.
ತೃಣಮೂಲ ಪಕ್ಷದ ಕೆಲವು ಮುಖಂಡರು ತನ್ನ ವಿರುದ್ಧ ಪಕ್ಷದ ಕಾರ್ಯಕರ್ತರನ್ನು ಎತ್ತಿಕಟ್ಟುತ್ತಿರುವುದಾಗಿ ಜನವರಿ 16ರ ಫೇಸ್ ಬುಕ್ ಲೈವ್ ಸೆಷನ್ ನಲ್ಲಿ ಆರೋಪಿಸಿದ್ದರು ಎಂದು ಎಎನ್ ಐ ವರದಿ ಮಾಡಿದೆ.