ಕೋಲ್ಕತಾ: ಪಶ್ಚಿಮ ಬಂಗಾಲದ ಗ್ರಾಮ ಪಂಚಾಯಿತಿ ಚುನಾವಣೆ ವ್ಯಾಪಕ ಹಿಂಸಾಚಾರಕ್ಕೆ ಸಾಕ್ಷಿಯಾಯಿತು. ಸೋಮವಾರ ಮತದಾನ ನಡೆದಿದ್ದು, ಹಲವು ಜಿಲ್ಲೆಗಳಲ್ಲಿ ನಡೆದ ಹಿಂಸಾಚಾರದಲ್ಲಿ 12 ಜನ ಮೃತಪಟ್ಟು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಎಂಟು ಜಿಲ್ಲೆಗಳಲ್ಲಿ ಬಾಂಬ್ ದಾಳಿ ಪ್ರಕರಣಗಳೂ ವರದಿಯಾಗಿವೆ.
ಕೆಲವು ಪ್ರದೇಶಗಳಲ್ಲಿ ಮತದಾರರಿಗೆ ಮತ ಹಾಕಲು ಅವಕಾಶವನ್ನೇ ನೀಡಿಲ್ಲ. ಚುನಾವಣೆಗೂ ಮುನ್ನವೇ ಶೇ. 34ರಷ್ಟು ಕ್ಷೇತ್ರಗಳಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಈ ಬಗ್ಗೆ ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಇಷ್ಟಾಗಿಯೂ ಸಂಜೆ 5 ಗಂಟೆಯವರೆಗೆ ಶೇ.73 ರಷ್ಟು ಮತದಾನ ನಡೆದಿದೆ.
ಉತ್ತರ ಹಾಗೂ ದಕ್ಷಿಣ 24 ಪರಗಣ, ಪೂರ್ವ ಮಿಡ್ನಾಪುರ, ಬದ್ವಾìನ್, ನಾಡಿಯಾ, ಮುರ್ಷಿದಾಬಾದ್ ಮತ್ತು ದಕ್ಷಿಣ ದಿನಜ್‌ಪುರ ಜಿಲ್ಲೆಗಳಲ್ಲಿ ವ್ಯಾಪಕ ಹಿಂಸಾಚಾರ ನಡೆದಿದ್ದು, ಒಟ್ಟು 60 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ವರದಿ ನೀಡುವಂತೆ ಕೇಂದ್ರ ಸರಕಾರವು ಪಶ್ಚಿಮ ಬಂಗಾಲ ಸರಕಾರವನ್ನು ಕೇಳಿದೆ. ಪ.ಬಂಗಾಲದಲ್ಲಿ ಗ್ರಾ.ಪಂ ಚುನಾವಣೆಯು ವಿಧಾನಸಭೆ ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. 2008ರಲ್ಲಿ ಸಿಪಿಎಂ ಆಡಳಿತದಲ್ಲಿ ನಡೆದ ಚುನಾವಣೆ ವೇಳೆ ಟಿಎಂಸಿ ಗೆಲುವು ಸಾಧಿಸಿತ್ತು. ಅಲ್ಲದೆ ನಂತರ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಅಧಿಕಾರಕ್ಕೇರಿತ್ತು.
ಹಿಂಸೆಯ ರಾಜಕೀಯ: ಚುನಾವಣೆಯಲ್ಲಿ ಹಿಂಸಾಚಾರ ನಡೆದಿರುವುದಕ್ಕೆ ಟಿಎಂಸಿ ವಿರುದ್ಧ ವಿಪಕ್ಷ ಸಿಪಿಎಂ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸುವುದಕ್ಕೇ ಅವಕಾಶ ನೀಡಿಲ್ಲ. ನಾಮಪತ್ರ ಸಲ್ಲಿಸಿದ ಮೇಲೂ ಹಿಂಪಡೆಯುವಂತೆ ಟಿಎಂಸಿ ಬೆದರಿಕೆ ಒಡ್ಡಿದೆ. ಹಿಂಪಡೆಯದ ಅಭ್ಯರ್ಥಿಗಳ ಮೇಲೆ ದಾಳಿ ನಡೆಸಲಾಗಿದೆ. ಇದು ಪ್ರಜಾಪ್ರಭುತ್ವ ಮಾದರಿಯ ಚುನಾವಣೆಯೇ ಅಲ್ಲ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಆರೋಪಿಸಿದ್ದಾರೆ. ಆದರೆ ಈ ಆರೋಪ ತಳ್ಳಿಹಾಕಿರುವ ಟಿಎಂಸಿ, ಹಿಂದಿನ ಗ್ರಾಪಂ ಚುನಾವಣೆಗೆ ಹೋಲಿಸಿದರೆ ಈ ಬಾರಿ ಹಿಂಸಾಚಾರ ಕಡಿಮೆಯಾಗಿದೆ. 1990ರಲ್ಲಿ ಸಿಪಿಎಂ ಆಡಳಿತವಿದ್ದಾಗ 400 ಜನರು ಸಾವನ್ನಪ್ಪಿದ್ದರು. 2003ರಲ್ಲಿ 40 ಜನರು ಸಾವನ್ನಪ್ಪಿದ್ದರು. 58 ಸಾವಿರ ಮತಗಟ್ಟೆಗಳಲ್ಲಿ 40 ಕಡೆ ಗಲಭೆಯಾಗಿದೆಯಷ್ಟೇ ಎಂದು ಟಿಎಂಸಿ ಮುಖಂಡ ಡೆರೆಕ್ ಓಬ್ರಿಯಾನ್ ಟ್ವೀಟ್ ಮಾಡಿದ್ದಾರೆ.