ಕೋಲ್ಕತಾ: ಸಿಬಿಐ ಶನಿವಾರ ಟಿಎಂಸಿ ಮಾಜಿ ಸಂಸದೆ ಮಹುವಾ ಮೊಯಿತ್ರಾ ಅವರ ಕೃಷ್ಣಾನಗರ ಕಚೇರಿ ಸೇರಿದಂತೆ ಹಲವು ಸ್ಥಳಗಳಲ್ಲಿ ವಿಚಾರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೋಕಪಾಲ್ ನಿರ್ದೇಶನದ ಮೇರೆಗೆ ಸಿಬಿಐ ಗುರುವಾರ ಎಫ್‌ಐಆರ್ ದಾಖಲಿಸಿದ್ದು, ಆರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಏಜೆನ್ಸಿಗೆ ಸೂಚಿಸಿದೆ
ಡಿಸೆಂಬರ್‌ನಲ್ಲಿ “ಅನೈತಿಕ ನಡವಳಿಕೆ”ಗಾಗಿ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟನೆ ಮಾಡಲಾಗಿತ್ತು. ಇದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೊಯಿತ್ರಾ ಪ್ರಶ್ನಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೃಷ್ಣಾನಗರ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಮತ್ತೆ ಕಣಕ್ಕಿಳಿಯಲಿದ್ದಾರೆ.
ಟಿಎಂಸಿ ನಾಯಕ ಕುನಾಲ್ ಘೋಷ್ ಪ್ರತಿಕ್ರಿಯಿಸಿ “ಇದು ಕೇಂದ್ರ ಸರ್ಕಾರದ ಸೇಡಿನ ರಾಜಕೀಯವಾಗಿದೆ. ಮಹುವಾ ಮೊಯಿತ್ರಾ ಅವರು ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಪ್ರಶ್ನೆಗಳನ್ನು ಎತ್ತಿದ ನಂತರ ಅವರ ಗುರಿಯಾದರು. ಆಕೆಗೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಹ ಅವಕಾಶ ಸಿಗಲಿಲ್ಲ ಮತ್ತು ಆಕೆಯನ್ನು ತಪ್ಪಿತಸ್ಥೆ ಎಂದು ಘೋಷಿಸಲಾಯಿತು. ಮಹುವಾ ಮೊಯಿತ್ರಾ ಕೃಷ್ಣಾನಗರದಿಂದ ನಮ್ಮ ಅಭ್ಯರ್ಥಿ, ಬಿಜೆಪಿ ಏನೇ ಮಾಡಿದರೂ ಅವರು ಸ್ಪರ್ಧಿಸಿ ಗೆಲ್ಲುತ್ತಾರೆ’ ಎಂದರು.
ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ಪ್ರತಿಕ್ರಿಯಿಸಿ “ಈಗಾಗಲೇ ನೈತಿಕ ಸಮಿತಿಯು ಸಿಬಿಐ ದಾಳಿಗೆ ಸೂಚಿಸಿದೆ , ಅದು ಅವರ ಕರ್ತವ್ಯವಾಗಿದೆ. ಮಹುವಾ ಮೊಯಿತ್ರಾ ವಿರುದ್ಧ ಆರೋಪಗಳಿವೆ. ಅವರು ತನ್ನ ಖಾತೆಯ ಪಾಸ್‌ವರ್ಡ್ ಅನ್ನು ಯಾರೋ ಅಪರಿಚಿತ ವ್ಯಕ್ತಿಯೊಂದಿಗೆ ಹಂಚಿಕೊಂಡಿದ್ದಾರೆ. ಇದು ನಮ್ಮ ದೇಶದ ಆಂತರಿಕ ಭದ್ರತೆಯ ವಿಷಯವಾಗಿದೆ” ಎಂದರು.
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಮೊಯಿತ್ರಾ ವಿರುದ್ಧ ಮಾಡಿದ ಆರೋಪಗಳ ಪ್ರಾಥಮಿಕ ತನಿಖೆಯ ನಂತರ ಭ್ರಷ್ಟಾಚಾರ ವಿರೋಧಿ ಓಂಬುಡ್ಸ್‌ಮನ್ ಲೋಕಪಾಲ್ ಅವರು ಸಿಬಿಐಗೆ ನಿರ್ದೇಶನಗಳನ್ನು ನೀಡಿದೆ.
ಕೈಗಾರಿಕೋದ್ಯಮಿ ಗೌತಮ್ ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರರ ಮೇಲೆ ದಾಳಿ ಮಾಡಲು ದುಬೈ ಮೂಲದ ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ನಗದು ಮತ್ತು ಉಡುಗೊರೆಗಳನ್ನು ಪಡೆದು ಮೊಯಿತ್ರಾ ಅವರು ಸಂಸತ್ ಕಲಾಪದಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಲೋಕಸಭೆ ಸದಸ್ಯ ದುಬೆ ಆರೋಪಿಸಿದ್ದರು.