ನವದೆಹಲಿ:ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕವೂ ಪಶ್ಚಿಮಬಂಗಾಳದಲ್ಲಿ ಹಿಂಸಾಚಾರ ಮುಂದುವರಿದಿದ್ದು, ಇದೀಗ ಭಾನುವಾರ ತಡರಾತ್ರಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತನೊಬ್ಬನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಉತ್ತರ 24 ಪರಾಗಣ್ ಜಿಲ್ಲೆಯಲ್ಲಿ ನಡೆದಿದೆ.
ಉತ್ತರಪ್ರದೇಶದ ಅಮೇಠಿಯಲ್ಲಿಯೂ ಭಾನುವಾರ ಸಂಸದೆ ಸ್ಮೃತಿ ಇರಾನಿ ಅವರ ಆಪ್ತ, ಬಿಜೆಪಿ ಕಾರ್ಯಕರ್ತ ಸುರೇಂದ್ರ ಸಿಂಗ್ (50ವರ್ಷ) ಎಂಬವರನ್ನು ಗುಂಡಿಕ್ಕಿ ಹತ್ಯೆಗೈದ ಬೆನ್ನಲ್ಲೇ ಪಶ್ಚಿಮಬಂಗಾಳದಲ್ಲಿಯೂ ಬಿಜೆಪಿ ಕಾರ್ಯಕರ್ತನನ್ನು ಹತ್ಯೆಗೈಯಲಾಗಿದೆ ಎಂದು ವರದಿ ತಿಳಿಸಿದೆ.
ಬಿಜೆಪಿ ಕಾರ್ಯಕರ್ತ ಚಂದನ್ ಶಾ (24ವರ್ಷ) ಎಂಬ ಯುವಕ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿ ಕೊಂದಿದ್ದರು. ಘಟನೆ ನಡೆದ ಬಳಿಕ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನೆಲೆಸಿದ್ದು, ಮುಂಜಾಗ್ರತಾ ಕ್ರಮವಾಗಿ ಭದ್ರತಾ ಪಡೆಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿವೆ.
ಚುನಾವಣೆ ನಡೆದ ನಂತರವೂ ಪಶ್ಚಿಮಬಂಗಾಳದ ವಿವಿಧೆಡೆ ಹಿಂಸಾಚಾರ ಮುಂದುವರಿದಿದೆ. ಭಾನುವಾರ ಅರಣ್ಯ ಸಚಿವ ಬಿನಯ್ ಕೃಷ್ಣಾ ಅವರ ಬೆಂಗಾವಲು ವಾಹನದ ಮೇಲೆ ದಾಳಿ ನಡೆದಿತ್ತು. ಈ ಘಟನೆ ನಂತರದ ಟಿಎಂಸಿ ಕಾರ್ಯಕರ್ತರು ಬಿಜೆಪಿ ಕಚೇರಿಯನ್ನು ಧ್ವಂಸಗೊಳಿಸಿದ್ದರು.