ಹೊಸದಿಲ್ಲಿ: ಕೆಲವು ತಿಂಗಳು ಗಳಿಂದ ಹೈವೋಲ್ಟೇಜ್ ಪ್ರಚಾರ, ಆರೋಪ- ಪ್ರತ್ಯಾರೋಪ, ಘಟಾನುಘಟಿಗಳ ವಾಕ್‌ಪ್ರಹಾರ, ಹೈಡ್ರಾಮಾಗಳಿಗೆ ಸಾಕ್ಷಿಯಾಗಿದ್ದ ಪಶ್ಚಿಮ ಬಂಗಾಲ ಮತ್ತು ಅಸ್ಸಾಂಗಳಲ್ಲಿ ಶನಿವಾರ ಮೊದಲ ಹಂತದ ಮತದಾನ ನಡೆದಿದೆ.
ಬಂಗಾಲದ ಕೆಲವು ಕಡೆ ಹಿಂಸಾಚಾರ, ಚುನಾವಣ ಅಕ್ರಮದ ಆರೋಪ, ಸಣ್ಣಪುಟ್ಟ ಅಹಿತಕರ ಘಟನೆಗಳು ಹೊರತುಪಡಿಸಿದರೆ ಉಳಿದಂತೆ ಮತದಾನ ಶಾಂತಿಯುತವಾಗಿತ್ತು. ಉತ್ತಮ ಬೆಳವಣಿಗೆ ಎಂಬಂತೆ ಸಂಜೆ 5ರ ವೇಳೆಗೆ ಪ. ಬಂಗಾಲದಲ್ಲಿ ಶೇ. 79.79ರಷ್ಟು ಮತದಾನ ದಾಖಲಾದರೆ, ಅಸ್ಸಾಂನಲ್ಲಿ ಶೇ. 72.14ರಷ್ಟು ಮಂದಿ ಹಕ್ಕು ಚಲಾಯಿಸಿದ್ದಾರೆ.
ಪ. ಬಂಗಾಲದ ಪೂರ್ವ ಮೇದಿನಿಪುರ ಜಿಲ್ಲೆಯಲ್ಲಿ ಮತದಾನ ಆರಂಭವಾಗುತ್ತಿದ್ದಂತೆ ಬಾಂಬ್ ಎಸೆತ- ಗುಂಡು ಹಾರಾಟ ನಡೆದಿತ್ತು.
ಕಾಂತಿ ದಕ್ಷಿಣ ಕ್ಷೇತ್ರದಲ್ಲಿ ಇವಿಎಂ ದೋಷ ಪೂರಿತವಾಗಿದೆ ಎಂದು ಆರೋಪಿಸಿ ಮತ ದಾರರು ಪ್ರತಿಭಟನೆ ನಡೆಸಿದರು. ಇಲ್ಲಿ ಮತ ಚಲಾಯಿಸಿದವರ ಸಂಖ್ಯೆ ಕೇವಲ ಐದು ನಿಮಿಷಗಳಲ್ಲಿ ಅರ್ಧಕ್ಕಿಳಿದಿದೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ ಚುನಾವಣ ಆಯುಕ್ತರಿಗೆ ದೂರು ಸಲ್ಲಿಸಿದೆ.
ಕಾಂತಿಯಲ್ಲಿ ಟಿಎಂಸಿ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿಯವರ ಸಹೋದರ ಸೌಮೇಂದು ಆರೋಪಿಸಿದ್ದಾರೆ. ಬಿಜೆಪಿಯು ಇವಿಎಂ ತಿರುಚಿದೆ, ಮತದಾರರಿಗೆ ಬೆದರಿಕೆ ಹಾಕುತ್ತಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಮೋಹನ್‌ಪುರ ದಲ್ಲಿ ಟಿಎಂಸಿ-ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಕೇಶಿಯಾರಿ ಎಂಬಲ್ಲಿ ಪ್ರತಿಭಟಿಸುತ್ತಿದ್ದ ಸ್ಥಳೀಯರ ಮೇಲೆ ಭದ್ರತಾ ಪಡೆಗಳು ಲಾಠಿಪ್ರಹಾರ ಮಾಡಿವೆ.