Advertisement

ವೆನ್ಲಾಕ್ : ಸದ್ಯವೇ ಒಪಿಡಿ ಪುನರಾರಂಭ

01:25 AM Jun 05, 2020 | Sriram |

ಮಂಗಳೂರು: ಕೋವಿಡ್‌-19 ಕಾರಣದಿಂದಾಗಿ ಇತರ ರೋಗಿಗಳಿಗೆ ಮುಚ್ಚಿದ್ದ ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಮೂರ್‍ನಾಲ್ಕು ದಿನಗಳೊಳಗೆ ಹೊರರೋಗಿ ವಿಭಾಗ ಕಾರ್ಯಾರಂಭ ಮಾಡಲಿದೆ.

Advertisement

ಮಂಗಳೂರಿನಲ್ಲಿ ಕೋವಿಡ್‌-19 ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಮಾ. 26ರಂದು ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್‌ ಆಸ್ಪತ್ರೆ ಯನ್ನಾಗಿ ಘೋಷಿಸಲಾಗಿತ್ತು. ಅಲ್ಲಿ ಒಳ ರೋಗಿಗಳಾಗಿ ದಾಖಲಾಗಿದ್ದವರನ್ನು ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿತ್ತು.

ಸುಮಾರು ಎರಡೂವರೆ ತಿಂಗಳ ಕಾಲ ವೆನ್ಲಾಕ್ ಆಸ್ಪತ್ರೆಯಲ್ಲಿ ಇತರ ರೋಗಗಳಿಗೆ ಚಿಕಿತ್ಸೆ ಲಭಿಸದ ಕಾರಣ ಹಲವಾರು ರೋಗಿಗಳೂ ಸಾಕಷ್ಟು ಸಮಸ್ಯೆ ಅನುಭವಿಸಿ ದ್ದಾರೆ. ಈಗ ಹಂತಹಂತವಾಗಿ ಇತರ ರೋಗಿ ಗಳ ಚಿಕಿತ್ಸೆಗೆ ತೆರೆಯಲು ಜಿಲ್ಲಾಡಳಿತ ನಿರ್ಧರಿಸಿದೆ.

ಕೆಲವೇ ದಿನಗಳಲ್ಲಿ ಒಪಿಡಿ ಕಾರ್ಯಾರಂಭ
ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತನೆ ಯಾಗಿದ್ದ ವೆನ್ಲಾಕ್ ಆಸ್ಪತ್ರೆಯ ಇನ್ನೊಂದು ಕಟ್ಟಡದಲ್ಲಿ ಮೂರ್‍ನಾಲ್ಕು ದಿನಗಳಲ್ಲಿ ಹೊರ ರೋಗಿ ವಿಭಾಗ ಕಾರ್ಯಾರಂಭ ಮಾಡಲಿದೆ.

ಆರಂಭಿಕ ಹಂತದಲ್ಲಿ ಒಳರೋಗಿಗಳಿಗೆ ಅವಕಾಶ ಇರುವುದಿಲ್ಲ. ಹಂತ ಹಂತವಾಗಿ ಇತರ ಚಿಕಿತ್ಸೆಗಳನ್ನೂ ಆರಂಭಿಸಲು ಯೋಚಿಸಲಾಗುತ್ತಿದೆ.

Advertisement

ರೋಗಿಗಳಿಗೆ ಸಮಸ್ಯೆ
ವೆನ್ಲಾಕ್ ನಿಂದ ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದ ಮತ್ತು ಶಿಫಾರಸು ಮಾಡಿದ ಬಡ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಸಾಕಷ್ಟು ಸಮಸ್ಯೆಗಳಾಗುತ್ತಿವೆ ಎಂಬ ದೂರುಗಳು ಕೇಳಿಬರುತ್ತಿವೆ. ವೆನ್ಲಾಕ್ ನಲ್ಲಿರುವ ವಿಮಾ ಸೌಲಭ್ಯಗಳು ಖಾಸಗಿ ಆಸ್ಪತ್ರೆಯಲ್ಲಿ ಇಲ್ಲದಿರುವುದರಿಂದ ಬಿಲ್‌ ಪಾವತಿಸುವುದು ಸಹಿತ ವಿವಿಧ ಸಮಸ್ಯೆ ಗಳನ್ನು ರೋಗಿಗಳು ಅನುಭವಿಸುತ್ತಿದ್ದಾರೆ. ಈ ಬಗ್ಗೆ ಶಾಸಕ ಯು. ಟಿ. ಖಾದರ್‌ ಅವರೂ ಸರಕಾರದ ಗಮನ ಸೆಳೆದಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಉಸ್ತುವಾರಿ ಸಚಿವರು, ಪ್ರತಿ ಖಾಸಗಿ ಆಸ್ಪತ್ರೆಯಲ್ಲಿಯೂ ವೆನ್ಲಾಕ್ ನಿಂದ ಶಿಫಾರಸು ಮಾಡಿರುವ ರೋಗಿಗಳಿಗೆ ಸ್ಪಂದಿಸಲು ಹೆಲ್ಪ್ ಡೆಸ್ಕ್ ತೆರೆದು ಅಲ್ಲಿ ನೋಡಲ್‌ ಅಧಿಕಾರಿಯನ್ನು ನೇಮಿಸಲಾಗಿದೆ. ಗೊಂದಲಗಳಿದ್ದಲ್ಲಿ ರೋಗಿಗಳು ಅವರನ್ನು ಸಂಪರ್ಕಿಸಲು ಅವಕಾಶವಿದೆ ಎಂದಿದ್ದಾರೆ.

ದಿನಕ್ಕೆ 2 ಸಾವಿರ ರೋಗಿಗಳು
ವೆನ್ಲಾಕ್ ಆಸ್ಪತ್ರೆಗೆ ದಿನವೊಂದಕ್ಕೆ ಕನಿಷ್ಠ 2,000 ಮಂದಿ ಹೊರರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ರಾಜ್ಯದಲ್ಲೇ ಅತ್ಯುತ್ತಮ ಆಸ್ಪತ್ರೆ ಎಂಬ ಹೆಗ್ಗಳಿಕೆ ಹೊಂದಿರುವ ವೆನ್ಲಾಕ್ ಆಸ್ಪತ್ರೆಗೆ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು, ದಾವಣಗೆರೆ ಮತ್ತು ನೆರೆಯ ಕೇರಳದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ.

ಶೀಘ್ರ ಒಪಿಡಿ ಪ್ರಾರಂಭ–ಮೂರ್‍ನಾಲ್ಕು ದಿನಗಳಲ್ಲಿ ವೆನ್ಲಾಕ್ ‌ನಲ್ಲಿ ಹೊರರೋಗಿ ವಿಭಾಗ ಕಾರ್ಯಾರಂಭ ಮಾಡಲಿದೆ. ಹಂತ ಹಂತವಾಗಿ ಇತರ ಚಿಕಿತ್ಸೆಗಳಿಗೂ ತಯಾರಿ ನಡೆಸಲಾಗುವುದು. ಸದ್ಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೆನ್ಲಾಕ್ ನಿಂದ ಶಿಫಾರಸು ಮಾಡಿದ ರೋಗಿಗಳು ಅಲ್ಲಿ ತೆರೆಯಲಾಗಿರುವ ಹೆಲ್ಪ್ ಡೆಸ್ಕ್, ನೋಡಲ್‌ ಅಧಿಕಾರಿಗಳ ಸಹಾಯ ಪಡೆಯಬಹುದು. ರೋಗಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು.
-ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next