Advertisement
ಆರೋಗ್ಯ ಸಚಿವ ಬಿ. ಶ್ರೀರಾಮುಲು ತಮ್ಮ ಮುಂದಿನ “ಆಸ್ಪತ್ರೆ ವಾಸ್ತವ್ಯ’ಕ್ಕೆ ವೆನ್ಲಾಕ್ ನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರು ಕೆಲವೇ ವಾರದೊಳಗೆ ಇಲ್ಲಿ ವಾಸ್ತವ್ಯ ಹೂಡಿ ಇಲ್ಲಿನ ಮೂಲ ಸಮಸ್ಯೆ-ಅಹವಾಲುಗಳಿಗೆ ಸ್ಪಂದಿಸುವ ಸಾಧ್ಯತೆಯಿದೆ. ಈ ವಿಚಾರವನ್ನು ಶ್ರೀರಾಮುಲು ಅವರೇ “ಉದಯವಾಣಿ’ಗೆ ತಿಳಿಸಿದ್ದಾರೆ.
ಆಸ್ಪತ್ರೆ ವಾಸ್ತವ್ಯದ ವೇಳೆ ಇಲ್ಲಿನ ಹಲವು ಬೇಡಿಕೆಗಳಿಗೆ ಸ್ಪಂದಿಸುವ ಸವಾಲು ಸಚಿವರ ಮುಂದಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಆರಂಭವಾಗಿರುವ 200 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಬ್ಲಾಕ್‌ಗೆ ಉಪಕರಣಗಳ ಖರೀದಿಗೆ 5 ಕೋ. ರೂ. ಅನುದಾನ ತತ್‌ಕ್ಷಣವೇ ಬಿಡುಗಡೆ ಮಾಡಬೇಕಿದೆ. ಈ ಹೊಸ ಕಟ್ಟಡದಲ್ಲಿರುವ 35 ಹಾಸಿಗೆಯ ಐಸಿಯು ವಿಭಾಗಕ್ಕೆ ಸಿಬಂದಿ, ಗ್ರೂಪ್ ಡಿ ನೌಕರರು, ತಾಂತ್ರಿಕ ಸಿಬಂದಿ ನೇಮಕವಾಗಬೇಕಿದೆ. ರೋಗಿಗಳ ಹಿತದೃಷ್ಟಿಯಿಂದ ಟ್ರೋಮಾ ಬ್ಲಾಕ್, ಹೊಸ ಕ್ಯಾಶ್ಯುವಾಲಿಟಿ ಬೇಕಿದೆ.
Related Articles
ವೆನ್ಲಾಕ್ ನ ವಿವಿಧ ಬ್ಲಾಕ್‌ಗಳು ನಾನಾ ಕಡೆ ಇದ್ದು, ಒಂದು ಬ್ಲಾಕ್‌ನಿಂದ ಇನ್ನೊಂದೆಡೆಗೆ ತೆರಳುವುದು ಕಷ್ಟವಾಗಿದೆ. ಬ್ಲಾಕ್‌ಗಳಿಗೆ ಅಂತರ್ ಸಂಪರ್ಕ ಕಲ್ಪಿಸುವ ಬೇಡಿಕೆಯನ್ನೂ ಸರಕಾರದ ಮುಂದಿಡಲಾಗಿದೆ. ಆಸ್ಪತ್ರೆ ವಾಸ್ತವ್ಯದ ವೇಳೆ ಸಚಿವರ ಮುಂದೆ ಈ ಬೇಡಿಕೆಯನ್ನು ಇರಿಸಲಾಗುವುದು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ರಾಜೇಶ್ವರಿ ದೇವಿ ತಿಳಿಸಿದ್ದಾರೆ.
Advertisement
ಔಷಧ ಸಿಗಬೇಕುವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ಸೇವೆ ಸಿಗುತ್ತಿದೆ. ಆದರೆ ಆಸ್ಪತ್ರೆ ಆವರಣ ಮತ್ತು ಹೊರ ಭಾಗದಲ್ಲಿರುವ ಜನರಿಕ್ ಮತ್ತು ಜನೌಷಧ ಕೇಂದ್ರಗಳಲ್ಲಿ ಬೇಕಾದ ಔಷಧ ಲಭ್ಯವಿರುವುದಿಲ್ಲ. ಬೇಕಾದ ಔಷಧಗಳು ಸಕಾಲಕ್ಕೆ ಈ ಕೇಂದ್ರಗಳಲ್ಲಿ ಸಿಗುವಂತೆ ವ್ಯವಸ್ಥೆ ಮಾಡಬೇಕು ಎಂದು ಇಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಮೊಗ್ಗ ಮೂಲದ ರೋಗಿಯೊಬ್ಬರು ಮನವಿ ಮಾಡಿದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿ ರಾತ್ರಿ ವಾಸ್ತವ್ಯದ ಭಾಗವಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಲಾಗುವುದು. ಮಾ. 5ರ ಬಳಿಕ ವಾಸ್ತವ್ಯದ ಬಗ್ಗೆ ಚಿಂತನೆ ನಡೆಸಲಾಗಿದೆ. ಆಸ್ಪತ್ರೆ ಸ್ಥಿತಿಗತಿ, ರೋಗಿಗಳಿಗಾಗುತ್ತಿರುವ ಸಮಸ್ಯೆ ಅರಿತುಕೊಂಡು ಗುಣಮಟ್ಟದ ಸೇವೆಗೆ ವ್ಯವಸ್ಥೆ ಕಲ್ಪಿಸುವುದು ಇದರ ಉದ್ದೇಶ.
–ಬಿ. ಶ್ರೀರಾಮುಲು,
ಆರೋಗ್ಯ ಸಚಿವರು