Advertisement

ಮಾಯವಾಗುತ್ತಿವೆ‌ ಕುಡಿಯುವ ನೀರಿನ ಬಾವಿಗಳು !

09:25 AM Apr 13, 2018 | Karthik A |

ಕುಂಬಳೆ : ಹಿಂದಿನ ಕಾಲದಲ್ಲಿ ಕುಡಿಯುವ ನೀರಿಗಾಗಿ ಮನೆಗೊಂದು ಬಾವಿ ಅನಿವಾರ್ಯವಾಗಿತ್ತು.ಕೃಷಿಗೆ ತೋಟಗಳಲ್ಲಿ ಕೊಳಗಳಿದ್ದುವು. ಇದರಲ್ಲಿ ಧಾರಾಳ ನೀರಾಶ್ರಯವಿತ್ತು. ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಕೆಲವರಿಗೆ ಪ್ರಕೃತಿದತ್ತವಾಗಿ ಹರಿದು ಬರುವ ಸುರಂಗವಿತ್ತು. ಇದರಿಂದ ಶುದ್ಧ ಜಲಧಾರೆಯಾಗುತ್ತಿತ್ತು. ಕಾಲ ಕ್ರಮೇಣ ಮಳೆ ವಿರಳವಾಗಿ ಹವಾಮಾನದ ವೈಪರೀತ್ಯದಿಂದ ನೀರಿನ ಕೊರತೆ ಆರಂಭವಾಯಿತು.

Advertisement

ಜನಸಂಖ್ಯೆ ಏರಿಕೆಯಿಂದ ನೀರಿನ ಬಳಕೆ ಅಧಿಕವಾಗಿ ಜಲಮೂಲಗಳಲ್ಲಿ ನೀರಿನ ಕೊರತೆ ತಲೆದೋರಲು ಪ್ರಾರಂಭವಾಯಿತು. ಬಾವಿಗಳಲ್ಲಿ ನೀರು ತಳಸೇರಿ ಬಾವಿ ಬತ್ತಲು ತೊಡಗಿತು. ಬಾವಿಗೆ ಪರ್ಯಾಯವಾಗಿ ಕೊಳವೆ ಬಾವಿ ತೋಡಲು ಆರಂಭಗೊಂಡಿತು. ಇದೀಗ ಎಲ್ಲೆಡೆ ಬೋರ್‌ವೆಲ್‌ಗ‌ಳ ಕೊರೆತದ ಭೋರ್ಗರೆಯುವ ಶಬ್ದವನ್ನು ರಾತ್ರಿ ಹಗಲೆನ್ನದೆ ಎಲ್ಲೆಲ್ಲೂ ಕೇಳಬಹುದು.ರಾತ್ರಿ ಬೆಳಗಾಗುವುದರೊಳಗೆ ಅದೆಷೋr ಕೊಳವೆ ಬಾವಿಗಳು ನಿರ್ಮಾಣಗೊಳ್ಳುತ್ತಿವೆ. ಇದರಿಂದಾಗಿ ನೀರಿನ ಮಟ್ಟ ವರ್ಷದಿಂದ ವರ್ಷಕ್ಕೆ ಆಳಕ್ಕೆ ಇಳಿಯುತ್ತಿದೆ. ನೀರಿಲ್ಲದೆ ಹೆಚ್ಚಿನ ಬರಿದಾದ ಬಾವಿಗಳೆಲ್ಲವೂ ಅನಾಥ ವಾಗಿವೆ. ಇದರಲ್ಲಿ ಕೆಲವು ಬಾವಿಗಳು ಮನೆ, ಕಟ್ಟಡ ಕಟ್ಟುವಾಗ ಮಣ್ಣು ತುಂಬಿಸಿ ಮುಚ್ಚಿದರೆ, ಇನ್ನು ಕೆಲವು ಬಾವಿಗಳನ್ನು ಮನೆಯ ಶೌಚಾಲಯದ ಗುಂಡಿಗಳನ್ನಾಗಿಸ‌ಲಾಗಿದೆ. ಇನ್ನು ಕೆಲವನ್ನು ಶಾಶ್ವತವಾಗಿ ಮುಚ್ಚಲಾಗಿದೆ. ಸಾರ್ವಜನಿಕರ ಬಳಕೆಗಾಗಿ ಸರಕಾರದಿಂದ ತೋಡಿದ ಬಾವಿಗಳು ಮಾಲಿನ್ಯ ತುಂಬುವ ಹೊಂಡಗಳಾಗಿವೆ. ಪೇಟೆ ಪಟ್ಟಣ ಮತ್ತು ರಸ್ತೆ ಪಕ್ಕಲ್ಲಿರುವ ಬಾವಿಗಳು ಹತ್ತಿರದ ಅಂಗಡಿ ಮುಂಗಟ್ಟುಗಳಿಗೆ ಮತ್ತು ಮನೆಯವರಿಗೆ ತ್ಯಾಜ್ಯ ಸುರಿಯುವ ಗುಂಡಿಗಳಾಗಿವೆ. ಅಲ್ಲಲ್ಲಿ ಕೊಳವೆ ಬಾವಿ ನಿರ್ಮಾಣವಾಗುತ್ತಿದ್ದು ನೀರಿನ ಮಟ್ಟ ಪಾತಾಳಕ್ಕೆ ಇಳಿಯುವುದರಿಂದ ಬಾವಿಗಳ ನೀರು ಬತ್ತಿಹೋಗಿ ಹೆಚ್ಚಿನ ಬಾವಿಗಳ ಬಳಕೆ ಇಲ್ಲವಾಗಿದೆ. 

ಬಾವಿಗಳು ದುರ್ಬಳಕೆಯಾಗುತ್ತಿವೆೆ.


ಪಾಳು ಬಾವಿಗಳಿಗೆ ಮಳೆ ನೀರು ಬೀಳುವುದರಿಂದ ಬಾವಿಯಲ್ಲಿ ನೀರು ಶೇಖರಣೆಯಾಗುವುದು.ಮತ್ತು ಮಳೆಗಾಲದ ಹರಿಯುವ ನೀರನ್ನು ಬಾವಿಗೆ ಹರಿಯ ಬಿಡುವುದರಿಂದ ನೀರನ್ನು ಭೂಮಿಗೆ ಇಂಗಿಸ ಬಹುದಾಗಿದೆ. ಆದರೆ ಇದರತ್ತ ಸಾರ್ವಜನಿಕರು ಮತ್ತು ಸರಕಾರ ಹೆಚ್ಚಿನ ಗಮನ ಹರಿಸಿಲ್ಲವೆಂಬ ಆರೋಪ ಕೇಳಿ ಬರುತ್ತಿದೆ. ಇದೇ ರೀತಿ ಮುಂದುವರಿದಲ್ಲಿ ನೀರಿನ ಸಮಸ್ಯೆ ಜಟಿಲವಾಗಿ ಮುಂದಿನ ದಿನಗಳಲ್ಲಿ ಬಾವಿಗಳೇ ಇಲ್ಲವಾಗುವುದರಲ್ಲಿ ಸಂಶಯವಿಲ್ಲ. ಸಂಬಂಧಪಟ್ಟವರು ಇದರತ್ತ ಗಮನ ಹರಿಸಿ ಇದ್ದ ಬಾವಿಗಳನ್ನು ಉಳಿಸಬೇಕಾಗಿದೆ. ಬಾವಿಗಳ ರಕ್ಷಣೆಗೆ ಗಂಭೀರ ಚಿಂತನೆ ನಡೆಯಬೇಕಿದೆ. ನೀರಿಂಗಿಸಲು ಇಂಗು ಗುಂಡಿಗಳ ನಿರ್ಮಾಣಕ್ಕೆ ಸರಕಾರದಿಂದ ಆರ್ಥಿಕ ನೆರವು ನೀಡಲಾಗುವುದು. ಆದರೆ ನಿರುಪಯುಕ್ತ, ಪಾಳುಬಿದ್ದಿರುವ ಬಾವಿಗಳ ಉಳಿವಿಗೆ ಯೋಜನೆ ಇಲ್ಲವಾಗಿದೆ. ಬಾವಿಗಳನ್ನು ಮುಚ್ಚುವವರ ವಿರುದ್ಧ ಯಾವುದೇ ಕಾನೂನಿನ ಬಿಗಿ ಕ್ರಮ ಇಲ್ಲದ ಕಾರಣ ಬಾವಿಗಳು ಮಾಯವಾಗುತ್ತಿವೆ.

— ಅಚ್ಯುತ ಚೇವಾರ್‌

Advertisement

Udayavani is now on Telegram. Click here to join our channel and stay updated with the latest news.

Next