Advertisement
ನಿಸಾರ್ ಅವರಿಗೆ 84 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ನಿಸಾರ್ ಅಹಮದ್ ಅವರನ್ನು ಇತ್ತೀಚೆಗಷ್ಟೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಅವರು ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
Related Articles
Advertisement
ನಿಸಾರ್ ಅಹಮ್ಮದ್ ಅವರು ಕರ್ನಾಟಕದ ಜನಸಾಮಾನ್ಯರಿಗೂ ಪರಿಚಿತರಾದದ್ದು ‘ನಿತ್ಯೋತ್ಸವ’ ಕವನ ಸಂಕಲನದ ಮೂಲಕ. ಅದರಲ್ಲಿನ ಜನಪ್ರಿಯ ಗೀತೆಯಾದ ‘ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ..’ ಕವನದ ಮೂಲಕ. ಇದು ಕರುನಾಡಿನಾದ್ಯಂತ ಇಂದೂ ಸಹ ಮನೆಮಾತಾಗಿದೆ.
ಮನಸು ಗಾಂಧಿ ಬಜಾರು, ನೆನದವರ ಮನದಲ್ಲಿ, ಸುಮುಹೂರ್ತ, ಸಂಜೆ ಐದರ ಮಳೆ, ನಾನೆಂಬ ಪರಕೀಯ, ಆಯ್ದ ಕವಿತೆಗಳು, ನಿತ್ಯೋತ್ಸವ, ಸ್ವಯಂ ಸೇವೆಯ ಗಿಳಿಗಳು, ಅನಾಮಿಕ ಆಂಗ್ಲರು, ಸಮಗ್ರ ಕವಿತೆಗಳು, ನವೋಲ್ಲಾಸ, ಅರವತ್ತೈದರ ಐಸಿರಿ, ಸಮಗ್ರ ಭಾವಗೀತೆಗಳು, ಪ್ರೊಫೆಸರ್ ನಿಸಾರ್ ಅಹಮದ್ ಅವರ ಪ್ರಮುಖ ಕವನ ಸಂಕಲನಗಳು.
ನಿಸಾರ್ ಅಹಮ್ಮದ್ ಅವರು ತಮ್ಮ ಸಾಹಿತ್ಯ ಕೃಷಿ ಜೀವನದಲ್ಲಿ ವಿಮರ್ಶಾ ಬರಹಗಳು, ಅನುವಾದ ಬರಹ ವಿಭಾಗಗಳಲ್ಲೂ ಕೈಯಾಡಿಸಿದ್ದರೂ ಜನಸಾಮಾನ್ಯರಿಗೆ ಅವರೆಂದೂ ನಿತ್ಯೋತ್ಸವದ ಕವಿಯಾಗಿಯೇ ಉಳಿದಿದ್ದರು. ಇದೀಗ ಪ್ರೊಫೆಸರ್ ನಿಸಾರ್ ಅಹಮ್ಮದ್ ಅವರು ಭೌತಿಕವಾಗಿ ನಮ್ಮನ್ನಗಲಿದ್ದರೂ ಕನ್ನಡ ಸಾಹಿತ್ಯ ಲೋಕಕ್ಕೆ ಅವರ ಅತ್ಯುನ್ನತ ಕೊಡುಗೆಗಳ ಮೂಲಕ ಅವರ ನೆನಪು ಕನ್ನಡಿಗರ ಮನದಲ್ಲಿ ನಿತ್ಯ ನೂತನವಾಗಿರುತ್ತದೆ.
ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಅ.ನ.ಕೃ. ಪ್ರಶಸ್ತಿ, ಸೋವಿಯತ್ ನೆಹರೂ ಪುರಸ್ಕಾರ, ಕರ್ನಾಟಕ ವಿಶ್ವ ವಿದ್ಯಾನಿಲಯದ ಡಾಕ್ಟರೇಟ್, ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಸಹಿತ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಪ್ರೊಫೆಸರ್ ನಿಸಾರ್ ಅಹಮದ್ ಅವರು ಭಾಜನರಾಗಿದ್ದರು. ಕರ್ನಾಟದಲ್ಲಿ ಮೊದಲ ಭಾವಗೀತೆಗಳ ಧ್ವನಿ ಸುರುಳಿ ಬಿಡುಗೆಯಾಗಿದ್ದು ನಿಸಾರ್ ಅಹಮ್ಮದ್ ಅವರ ಭಾವಗೀತಗಳದ್ದು ಎಂಬುದೊಂದು ಹೆಗ್ಗಳಿಕೆಯೇ ಸರಿ.