Advertisement

ಬಾವಿಗೆ ಬರುತ್ತಿದೆ ಮೋರಿ ನೀರು: ಅಧಿಕಾರಿಗಳೆಲ್ಲಿಹರು?

12:35 PM Dec 25, 2017 | Team Udayavani |

ಮಹಾನಗರ: ಒಳಚರಂಡಿ ನೀರು ಮನೆಯ ಬಾವಿಗಳಿಗೆ ಸೇರಿಕೊಂಡು ಮೂರು ವರ್ಷಗಳಿಂದ ಬಾವಿ ನೀರು ಕುಡಿಯಲು ಸಾಧ್ಯವಾಗದೆ ನಗರದ 35ನೇ ವಾರ್ಡ್‌ನ ಕುಲಶೇಖರದ ಮೇಗಿನಮನೆ ನಿವಾಸಿಗಳು ಮಹಾನಗರ
ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಒಳಚರಂಡಿ ಸಮರ್ಪಕವಾಗಿಲ್ಲದ ಕಾರಣ 15ಕ್ಕೂ ಹೆಚ್ಚು ಬಾವಿಗಳ ನೀರು ಕಲುಷಿತಗೊಂಡಿದ್ದು, ಇಲ್ಲಿನ ಜನರ ಗೋಳು ಕೇಳುವವರೇ ಇಲ್ಲ!

Advertisement

ಮೂರು ವರ್ಷಗಳಿಂದ ಈ ಭಾಗದ ಜನರು ಈ ಜ್ವಲಂತ ಸಮಸ್ಯೆ ಎದುರಿಸುತ್ತಿದ್ದರೂ, ಸಂಬಂಧಪಟ್ಟವರು ಇತ್ತ
ಕಣ್ಣೆತ್ತಿಯೂ ನೋಡುತ್ತಿಲ್ಲ. ಸೂಕ್ತ ಒಳ ಚರಂಡಿ ವ್ಯವಸ್ಥೆಯಿಲ್ಲದೆ ಈ ಭಾಗದ ಹತ್ತಾರು ಬಾವಿಗಳಲ್ಲಿ ಬರೀ ಚರಂಡಿ
ನೀರು ತುಂಬಿಕೊಳ್ಳುತ್ತಿದ್ದು, ಅಂತರ್ಜಲ ಸಂಪೂರ್ಣ ಕಲುಷಿತಗೊಂಡಿದೆ. ಸ್ವಂತ ಮನೆ, ಮನೆಯ ಮುಂಭಾಗದ ಬಾವಿ ತುಂಬ ನೀರಿದ್ದರೂ ಪಾಲಿಕೆ ನೀರಿಗೆ ಕಾಯಬೇಕಾದ ದುಃಸ್ಥಿತಿ ಸ್ಥಳೀಯರದು. ಅಧಿಕಾರಿಗಳಿಗೆ ಹಲವು ಬಾರಿ
ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂಬುದು ನಿವಾಸಿ ಗಳ ಆರೋಪ.

ಎರಡು ದಿನಕ್ಕೊಮೆ ಪಾಲಿಕೆ ನೀರು
‘ಮನೆಯ ಮುಂಭಾಗದಲ್ಲಿ ಬಾವಿ ಇದ್ದರೂ ನೀರು ಕುಡಿಯುವುದಕ್ಕೆ ಯೋಗ್ಯವಾಗಿಲ್ಲ. ಪಾಲಿಕೆ ನೀರು ಎರಡು
ದಿನಗಳಿಗೊಮ್ಮೆ ಬರುತ್ತದೆ. ಅದಕ್ಕಾಗಿ ಕಾದು ನೀರು ತುಂಬಿಸಿ ಇಟ್ಟುಕೊಳ್ಳಬೇಕಾಗಿದೆ. ಇನ್ನು ಕೆಲವು ಕಡೆ ಬಾವಿ ನೀರು ಬೇರೆ ಉದ್ದೇಶಗಳಿಗೂ ಬಳಕೆ ಮಾಡುವುದಕ್ಕೂ ಸಾಧ್ಯವಾಗದಷ್ಟು ಗಬ್ಬುನಾತ ಬೀರುತ್ತಿವೆ. ನಮ್ಮ ಭಾಗದ
ಬಾವಿ ನೀರನ್ನು ಪ್ರಯೋಗಾಲದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಅದು ಕುಡಿಯುವುದಕ್ಕೆ ಯೋಗ್ಯವಲ್ಲ ಎನ್ನುವ ವರದಿ ಬಂದಿದೆ. ಬೇಸಿಗೆಯಲ್ಲಿ ನೀರಿಗಾಗಿ ಅನುಭವಿಸುವ ತೊಂದರೆ ಹೇಳತೀರದು. ಪಾಲಿಕೆಯಿಂದಲೂ ಸಕಾಲದಲ್ಲಿ ನೀರು
ಸರಬರಾಜು ಆಗುವುದಿಲ್ಲ’ ಎಂದು ಸ್ಥಳೀಯ ನಿವಾಸಿ ಪ್ರಜ್ವಲ್‌ “ಸುದಿನ’ ಜತೆ ತಮ್ಮ ಅಳಲು ತೋಡಿ ಕೊಂಡಿದ್ದಾರೆ.

ಕಳಪೆ ಕಾಮಗಾರಿಯಿಂದ ಸಮಸ್ಯೆ
2013ರಲ್ಲಿ ಈ ಭಾಗದಲ್ಲಿ ಒಳಚರಂಡಿ ಕಾಮಗಾರಿಯನ್ನು ಮಾಡಲಾಗಿತ್ತು. ಆದರೆ, ಒಳಚರಂಡಿ ಕಾಮಗಾರಿ ಕಳಪೆಯಾಗಿದ್ದು, ಗಲೀಜು ನೀರು ಸುತ್ತ-ಮುತ್ತಲಿನ ಬಾವಿಗಳಿಗೆ ಹರಿಯುತ್ತಿದೆ. ಒಳಚರಂಡಿಯಲ್ಲಿ ನೀರು ಸರಿಯಾಗಿ ಹರಿಯುತ್ತಿಲ್ಲ. ಮ್ಯಾನ್‌ಹೋಲ್‌ ಗಳ ಮೂಲಕ ಅಲ್ಲಲ್ಲಿ ಒಳಚರಂಡಿ ನೀರು ಹೊರಬರುತ್ತಿದೆ. ಒಳಚರಂಡಿಯಲ್ಲಿ ಗಲೀಜು ನೀರು ಸರಾಗವಾಗಿ ಹರಿಯುವುದಕ್ಕೆ ಸಾಧ್ಯವಾಗದೆ ಸುತ್ತಲಿನ ಮನೆಯ ಬಾವಿಗಳಲ್ಲಿ ಸೇರಿಕೊಳ್ಳುತ್ತಿದೆ. ಈ ಭಾಗದಲ್ಲಿ ಒಳಚರಂಡಿ ಸಮಸ್ಯೆ ಇಷ್ಟೊಂದು ಗಂಭೀರ ಸ್ವರೂಪ ಪಡೆದುಕೊಂಡಿದ್ದರೂ, ಪಾಲಿಕೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ. 

ಮನವಿ ಕೊಟ್ಟು-ಕೊಟ್ಟು ಸೋತೆವು!
ನಮ್ಮ ಬಡಾವಣೆಯಲ್ಲಿ ಒಳಚರಂಡಿ ಸರಿಯಾಗಿಲ್ಲ ಎಂಬುದನ್ನು ಪಾಲಿಕೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ಹಲವು ಬಾರಿ ತರಲಾಗಿದೆ. ಸರಿಮಾಡುವ ಭರವಸೆ ನೀಡಿ ಅಧಿಕಾರಿಗಳು ಸುಮ್ಮನಾಗುತ್ತಿದ್ದಾರೆ. ಮೂರು ವರ್ಷಗಳಿಂದ ಈ ಭಾಗದ ಜನರು ಸಮಸ್ಯೆ ಅನುಭವಿಸುತ್ತಿದ್ದು, ಪ್ರತಿಯೊಬ್ಬರ ಮನೆಗಳಲ್ಲಿರುವ ಬಾವಿ ನೀರು ಕಲುಷಿತಗೊಂಡು, ಕುಡಿಯುವುದಕ್ಕೆ ಯೋಗ್ಯವಾಗಿಲ್ಲ. ಸಮಸ್ಯೆಗೆ ಸ್ಪಂದಿಸುವಂತೆ, ಸ್ಥಳೀಯರಿಂದ ಸಹಿ ಸಂಗ್ರಹಿಸಿ ಹಲವು ಬಾರಿ ಸಂಬಂಧಪಟ್ಟವರಿಗೆ ದೂರು ನೀಡಿದ್ದೇವೆ. ಅಷ್ಟಾಗಿಯೂ ಸಮಸ್ಯೆ ಬಗೆಹರಿಸುವುದಕ್ಕೆ ಮುಂದಾಗುತ್ತಿಲ್ಲ ಎನ್ನುವುದು ನೋವಿನ ವಿಚಾರ.
– ಮಹಾಲಿಂಗ, ಸ್ಥಳೀಯರು

Advertisement

ಸಮಸ್ಯೆಗೆ ಪರಿಹಾರ
ಕುಲಶೇಖರ ಮೇಗಿನಪದವಿನಲ್ಲಿ ಒಳಚರಂಡಿ ಸಮಸ್ಯೆ ಇರುವುದು ನಮ್ಮ ಗಮನಕ್ಕೆ ಬಂದಿದೆ. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಎಂಜಿನಿಯರ್‌ ರಿಂದ ಸ್ಥಳ ಪರಿಶೀಲನೆಯನ್ನೂ ನಡೆಸಲಾ ಗಿ ದೆ. ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಿ ಸಮಸ್ಯೆ ಸರಿಪಡಿಸಲಾಗುವುದು. 
ಜುಬೈದಾ,
 ಸ್ಥಳೀಯ ಕಾರ್ಪೋರೇಟರ್‌

ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next