Advertisement

ಕಲುಷಿತ ನೀರಿನ ಉಪದ್ರವ: ಪ್ರಜ್ವಲ ನಗರ: ಬಾವಿ ನೀರೂ ನಿರುಪಯುಕ್ತ

08:56 PM Dec 11, 2019 | mahesh |

ಉಡುಪಿ: ಒಳಚರಂಡಿ ನೀರಿನಿಂದ ಉಡುಪಿ ನಗರಾದ್ಯಂತ ವಿವಿಧ ವಾರ್ಡ್‌ಗಳ ನಿವಾಸಿಗರು ತೊಂದರೆ ಅನುಭವಿಸುತ್ತಿದ್ದು, ಆ ಪಟ್ಟಿಗೆ ಇದೀಗ ಅಂಬಲಪಾಡಿಯ ಪ್ರಜ್ವಲ ನಗರ ಸೇರ್ಪಡೆಗೊಂಡಿದೆ. ಇಲ್ಲಿನ ನಿವಾಸಿಗರ ಮನೆಗಳ ಬಾವಿಗಳ ನೀರು ಕಲುಷಿತಗೊಂಡಿದ್ದು ಹೊಸದಾಗಿ ತೋಡಿದ ಬಾವಿಯ ನೀರು ಕೂಡ ನಿರುಪಯುಕ್ತವಾಗಿದೆ. ಇದರಲ್ಲಿ ಹೊಸದಾಗಿ ಬಂದವರೂ ಇದ್ದಾರೆ. ಈ ಕಲುಷಿತ ನೀರಿನ ಸೇವನೆಯಿಂದಾಗಿ ಆಸ್ಪತ್ರೆ ವಾಸವನ್ನು ಇಲ್ಲಿನ ಜನರು ಅನುಭವಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಸುಮಾರು 7ರಿಂದ 8 ಮನೆಗಳಲ್ಲಿ ಸಮಸ್ಯೆ ಕಂಡು ಬಂದಿದೆ. ರಸ್ತೆಯ ಒಂದು ಬದಿ ನಗರಸಭೆ ವ್ಯಾಪ್ತಿಯಾದರೆ ಮತ್ತೂಂದು ಬದಿ ಅಂಬಲಪಾಡಿ ಗ್ರಾ.ಪಂ. ವ್ಯಾಪ್ತಿಗೊಳಪಟ್ಟಿದೆ. ಇಲ್ಲಿ ವಾಸವಿರುವ ಲತಾ ಅವರ ಮನೆಯ ಪಕ್ಕದಲ್ಲಿ ಖಾಸಗಿ ಕೆರೆ ಯೊಂದಿದ್ದು, ಅದು ಕಲುಷಿತವಾಗಿ ರೋಗ ರುಜಿನಗಳು ಹರಡುವ ಭೀತಿಯಿದೆ. ಈಗಾಗಲೇ ಇಲ್ಲಿನ ಬಾವಿ ನೀರು ಕಲುಷಿತಗೊಂಡಿದ್ದು, ಮನೆಯ ವರಿಗೆ ತುರಿಕೆ ಕಜ್ಜಿ ಕಾಣಿಸಿಕೊಂಡಿದೆ. ಅಕ್ಕಪಕ್ಕದ ಮನೆಗಳ ಬಾವಿನೀರು ಕೂಡ ಇದೇ ರೀತಿ ಕಲುಷಿತವಾಗಿದೆ.

Advertisement

ಪರ್ಯಾಯ ವ್ಯವಸ್ಥೆ ಇಲ್ಲ
ಇಲ್ಲಿ ಬಾವಿಯ ನೀರನ್ನು ಬಿಸಿ ಮಾಡಿದಾಗ ಎಣ್ಣೆಯಂತಾಗಿ ಕುಡಿ ಯಲು ಅಯೋಗ್ಯವಾಗುತ್ತದೆ. ಇಲ್ಲಿನ ಹಲವಾರು ಮನೆಗಳಿಗೆ ಪಂ.ನಿಂದ ಇದುವರೆಗೂ ನೀರಿನ ಸೌಲಭ್ಯವನ್ನು ಕಲ್ಪಿಸಿಲ್ಲ. ಈ ಬಗ್ಗೆ ಹಲವಾರು ಬಾರಿ ಪಂ.ಗೆ ಮನವಿ ಸಲ್ಲಿಸಿದರೂ ಅವರು ಸ್ಪಂದಿಸಿಲ್ಲ ಎನ್ನುತ್ತಾರೆ ಸ್ಥಳೀಯರಾದ ಲತಾ ಅವರು.

ಸೊಳ್ಳೆಯ ಕಾಟ
ಕೊಳಚೆ ನೀರು ಇಲ್ಲಿನ ಪರಿಸರದ ಸುತ್ತ ನಿಂತಿರುವುದರಿಂದ ಸೊಳ್ಳೆಯ ಸಂತತಿ ಕೂಡ ಹೆಚ್ಚಿದೆ. ರಾತ್ರಿ ಹೊತ್ತು ಮನೆ ಕಿಟಿಕಿ ಬಾಗಿಲು ಮುಚ್ಚಿದರೂ ಸೊಳ್ಳೆಗಳ ತೊಂದರೆ ತಪ್ಪುವುದಿಲ್ಲ. ಇದರಿಂದಾಗಿ ರೋಗರುಜಿನಗಳು ಹರಡುವ ಸಾಧ್ಯತೆಗಳೂ ಅಧಿಕವಾಗಿವೆ.

ಚರ್ಮ ರೋಗ
ಮನೆ ಬಾವಿ ನೀರಿನಿಂದಾಗಿ ಇಲ್ಲಿನ ನಿವಾಸಿಗಳು ಮೈ ಕೈ ತುರಿಕೆ, ಕಜ್ಜಿ, ಉಂಟಾಗಿ ವೈದ್ಯರಲ್ಲಿ ಪರಿಶೀಲಿಸಿದಾಗ ನೀರಿನಿಂದಾಗಿ ಅಲರ್ಜಿ ಉಂಟಾಗಿರುವುದು ಸ್ಪಷ್ಟವಾಗಿದೆ. ನೀರಿನ ಉಪಯೋಗದಿಂದ ಚರ್ಮ ರೋಗದ ಕಾಯಿಲೆಗಳು ಇವರನ್ನು ಕಾಡುತ್ತಿವೆ.

ಪರಿಶೀಲನೆ
ಕುಡಿಯುವ ನೀರಿಗೆ ಸಂಬಂಧಿಸಿದಂತೆ ಪ್ರಜ್ವಲ ನಗರದ ನಿವಾಸಿಗಳಿಂದ ಇಲ್ಲಿಯವರೆಗೂ ಯಾವುದೇ ದೂರುಗಳು ಬಂದಿಲ್ಲ. ಈ ಹಿಂದೆ ಈ ಪರಿಸರದಲ್ಲಿದ್ದ ಸಮಸ್ಯೆಗಳನ್ನು ಬಗೆಹರಿಸಲಾಗಿತ್ತು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು.
-ಪ್ರಮೋದ್‌ ಸಾಲ್ಯಾನ್‌, ಅಧ್ಯಕ್ಷರು, ಅಂಬಲಪಾಡಿ ಗ್ರಾ.ಪಂ.

Advertisement

ಸ್ವಚ್ಛತಾ ಕಾರ್ಯ
ಈ ಹಿಂದೆಯೇ ಇಲ್ಲಿನ ಪರಿಸರದ ಕೆರೆಗಳಿಗೆ ಬ್ಲೀಚಿಂಗ್‌ನಂತಹ ವಸ್ತುಗಳನ್ನು ಹಾಕುವ ಮೂಲಕ ಸ್ವಚ್ಛತಾ ಕಾರ್ಯ ಮಾಡಲಾಗಿತ್ತು. ಈಗ ಮತ್ತೆ ಸಮಸ್ಯೆ ಕಂಡುಬಂದಿದೆ. ಇದು ನಮ್ಮ ಗಮನಕ್ಕೆ ಬಂದಿದ್ದು, ನಗರಸಭೆಯ ಗಮನಕ್ಕೆ ತರಲಾಗಿದೆ. ಈ ವ್ಯಾಪ್ತಿಯಲ್ಲಿರುವ ಸಮಸ್ಯೆಯನ್ನು ಪರಿಹರಿಸಲು ಗಮನ
ಹರಿಸಲಾಗುವುದು.
-ಸುನಿಲ್‌ ಕುಮಾರ್‌ ಕಪ್ಪೆಟ್ಟು, ಸದಸ್ಯರು, ಅಂಬಲಪಾಡಿ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next