ಇದೀಗ 2018ನ್ನು ಬೀಳ್ಕೊಟ್ಟು 2019ನ್ನು ಸ್ವಾಗತಿಸುವ ಹೊತ್ತು. ಪ್ರತಿ ವರ್ಷ ಕ್ಯಾಲೆಂಡರ್ ಬದಲಾಗುವುದು ಮಾಮೂಲು ಪ್ರಕ್ರಿಯೆಯಾಗಿದ್ದರೂ, ವರ್ಷಾಂತ್ಯದಲ್ಲಿ ನಡೆದ ಬಂದ ಹಾದಿಯತ್ತ ಒಂದು ನೋಟ ಬೀರುವುದು ಒಂದು ರೀತಿಯಲ್ಲಿ ಆತ್ಮಾವಲೋಕನವೂ ಹೌದು. ಆ ಮೂಲಕ ಭವಿಷ್ಯಕ್ಕೆ ನಮ್ಮನ್ನು ನಾವು ಹುರಿಗೊಳಿಸಿಕೊಳ್ಳುವ ಹೊತ್ತೂ ಹೌದು. ಹಾಗೆ ಮಾಡುವಾಗ ಮುಂದೆ ಸಾಗುವ ಹಾದಿಯ ಕುರಿತಾದ ಹೊಳಹೊಂದು ಸಿಗಬಹುದು.
2018ರಲ್ಲಿ ನೋವು ಮತ್ತು ನಲಿವನ್ನು ಸಾಕಷ್ಟು ಉಂಡಿದ್ದೇವೆ. ಯಾವುದರ ಪಾಲು ಹೆಚ್ಚು ಎಂದು ತೂಗಿ ಅಳೆದು ಹೇಳುವುದು ಕೊಂಚ ಕಷ್ಟ. ಆರ್ಥಿಕತೆ, ಕ್ರೀಡೆ, ರಾಜಕೀಯ ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಸಾಧನೆಗಳು, ಸ್ಥಿತ್ಯಂತರಗಳು ಮತ್ತು ಪಲ್ಲಟಗಳಾಗಿವೆ. ಬಾಹ್ಯಾಕಾಶ ಕ್ಷೇತ್ರದಲ್ಲಂತೂ ನಾವು ನಿಬ್ಬೆರಗಾಗುವಂಥ ಸಾಧನೆ ಮಾಡಿದ್ದೇವೆ. ಇಸ್ರೊ ನಡೆಸಿದ ಹಲವು ಉಡ್ಡಯನಗಳು ನಭದಲ್ಲಿ ನಮ್ಮ ಸಾಧನೆಯ ಮೈಲುಗಲ್ಲುಗಳನ್ನು ನೆಟ್ಟಿವೆ. ಕ್ರೀಡೆಯಲ್ಲೂ ದೇಶ ಹಲವು ಗಮನಾರ್ಹ ಸಾಧನೆಗಳನ್ನು ಮಾಡಿತು. ಅಂಧರ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದದ್ದು, ಮಿಥಾಲಿ ರಾಜ್ ಟಿ-20ಯಲ್ಲಿ 2000 ರನ್ ಗಳಿಸಿದ್ದು, ಜಾಗತಿಕ ಕ್ರೀಡಾಕೂಟವೊಂದರ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ದೀಪಾ ಕರ್ಮಾಕರ್ ಚಿನ್ನ ಗೆದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ವನಿತೆ ಎಂಬ ಹಿರಿಮೆಗೆ ಪಾತ್ರವಾದದ್ದು, ಫುಟ್ಬಾಲ್‌ನಲ್ಲಿ ತೀರಾ ಹಿಂದೆ ಇರುವ ಹೊರತಾಗಿಯೂ ಸುನಿಲ್ ಚೇಟ್ರಿ ಜಗತ್ತಿನ ಮೂರನೇ ಅತಿ ಹೆಚ್ಚು ಗೋಲ್ ಸ್ಕೋರರ್ ಆದದ್ದು, ಒಲಿಂಪಿಕ್ಸ್‌ನಲ್ಲಿ ಕ್ರೀಡಾಪಟುಗಳು ಅತ್ಯುತ್ತಮ ನಿರ್ವಹಣೆ ತೋರಿಸಿದ್ದೆಲ್ಲ ಭವಿಷ್ಯಕ್ಕೆ ಸ್ಫೂರ್ತಿ ತುಂಬುವಂಥದ್ದೇ.
ಆರ್ಥಿಕವಾಗಿಯೂ ಏರಿಳಿತ ಕಂಡಿದ್ದೇವೆ. ವರ್ಷಾರಂಭದಲ್ಲೇ ಆರ್ಥಿಕ ಅಭಿವೃದ್ಧಿ ತುಸು ಹಿಂದೆ ಬಿದ್ದರೂ ಅನಂತರ ಚೇತರಿಸಿಕೊಂಡಿತು. ಪೆಟ್ರೋಲು, ಡೀಸಿಲ್ ಬೆಲೆಗಳೂ ಗರಿಷ್ಠ ಏರಿಕೆಯಾಗಿ ವರ್ಷಾಂತ್ಯದಲ್ಲಿ ದಾಖಲೆ ಕುಸಿತ ಕಂಡಿತು. ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹಲವು ಸಾಧನೆಗಳನ್ನು ಈ ವರ್ಷ ಮಾಡಲಾಯಿತು. ರಸ್ತೆ ಮತ್ತು ಸೇತುವೆಗಳ ನಿರ್ಮಾಣದಲ್ಲಿ ದಾಖಲೆಗಳು ನಿರ್ಮಾಣವಾದವು. ವಿದ್ಯುದೀಕರಣದಲ್ಲಿ ಹೊಸ ಮಜಲನ್ನು ಏರಲಾಯಿತು. ಮೊದಲ ಬಾರಿಗೆ 10 ರಾಷ್ಟ್ರಗಳ ಪ್ರಮುಖರು ಗಣ ರಾಜ್ಯೋ ತ್ಸವದಲ್ಲಿ ಭಾಗವಹಿಸಿದ್ದು, ಪಕ್ಷವೊಂದು ಮೊದಲ ಬಾರಿಗೆ 21 ರಾಜ್ಯಗಳ ಪೈಕಿ 19 ರಾಜ್ಯಗಳ ಅಧಿಕಾರ ಸೂತ್ರ ಹಿಡಿದದ್ದು, ರಿಲಯನ್ಸ್ 8 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯ ಪಡೆದದ್ದೆಲ್ಲ ಪ್ರಮುಖ ಘಟನಾವಳಿಗಳು.
ರಾಜಕೀಯವೂ ಹಲವು ಪಲ್ಲಟಗಳಿಗೆ ಸಾಕ್ಷಿಯಾಯಿತು. ಮುಖ್ಯವಾಗಿ ವರ್ಷಾಂತ್ಯದಲ್ಲಿ ನಡೆದ ಪಂಚರಾಜ್ಯ ಚುನಾವಣೆ ಫಲಿತಾಂಶ, ಇದಕ್ಕೂ ಮೊದಲು ನಡೆದ ಕರ್ನಾಟಕದ ವಿಧಾನಸಭೆ ಫಲಿತಾಂಶಗಳು ಮತದಾರರ ಪ್ರಬುದ್ಧತೆಯನ್ನು ತೋರಿಸಿಕೊಟ್ಟದ್ದು ಮಾತ್ರವಲ್ಲದೆ, ಆಡಳಿತ ಸೂತ್ರ ಹಿಡಿದಿರುವವರಿಗೆ ಎಚ್ಚರಿಕೆಯನ್ನೂ ನೀಡಿದೆ. ಇದೇ ವೇಳೆ ಪಂಜಾಬ್ ರೈಲು ದುರಂತ, ಕೇರಳ ಮತ್ತು ಕೊಡಗಿನ ಪ್ರಳಯ, ಉತ್ತರ ಭಾರತದ ಉಷ್ಣಮಾರುತ, ಮಂಡ್ಯದಲ್ಲಿ ಬಸ್ ದುರಂತದಂಥ ಪ್ರಾಕೃತಿಕ ಮತ್ತು ಮಾನವ ನಿರ್ಮಿತ ದುರಂತಗಳನ್ನೂ ನಾವು ಕಂಡಿದ್ದೇವೆ. ಹೀಗೆ ಸಿಹಿಕಹಿಗಳೊಂದಿಗೆ ಹೊಸ ವರ್ಷವನ್ನು ಎದುರುಗೊಳ್ಳುತ್ತಿದ್ದೇವೆ. ಹಿಂದಿನ ವರ್ಷದಲ್ಲಿನ ಕಹಿ ಘಟನೆಗಳಿಂದ ಕಲಿತ ಪಾಠದಿಂದ ಮುಂಬರುವ ಹೊಸ ವರ್ಷವನ್ನು ಹೆಚ್ಚು ಫಲಪ್ರದಗೊಳಿಸಬೇಕಾದದ್ದು ನಮ್ಮ ಮುಂದಿರುವ ಹೊಣೆಗಾರಿಕೆ.