Advertisement
ಸೋಮವಾರ ಮಧ್ಯರಾತ್ರಿ 12 ಗಂಟೆ ಆಗುತ್ತಿದ್ದಂತೆ ನಗರಕ್ಕೆ ನಗರವೇ ಖುಷಿಯ ಅಲೆಯಲ್ಲಿ ಮಿಂದೆದ್ದಿತ್ತು. ಹಾಡು, ನೃತೃ, ಶಿಳ್ಳೆ ಚಪ್ಪಾಳೆ ಮೂಲಕ ಜನ ಹೊಸ ವರ್ಷ ಬರಮಾಡಿಕೊಂಡರು. ಹೊಸತನವನ್ನು ಸ್ವಾಗತಿಸುವ ಅಪೂರ್ವ ಕ್ಷಣಗಳಲ್ಲಿ ಭಾಗಿಯಾದ ಸ್ನೇಹಿತರು, ವರ್ಷ ಪೂರ್ತಿ ಇದೇ ಹರ್ಷ ಇರಲೆಂದು ಪರಸ್ಪರ ಆತ್ಮೀಯ ಅಪ್ಪುಗೆ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು.
Related Articles
Advertisement
ಬೆಳಕಲ್ಲೇ ಹೊಸ ವರ್ಷಕ್ಕೆ ಸ್ವಾಗತ: ನಗರದ ಬ್ರಿಗೇಡ್ ರಸ್ತೆಯಲ್ಲಿ 2017ರ ಹೊಸ ವರ್ಷಾಚರಣೆಯ ವೇಳೆ ನೂಕು ನುಗ್ಗಲು ಉಂಟಾಗಿ, ಲೈಂಗಿಕ ದೌರ್ಜನ್ಯದಂತಹ ಘಟನೆಗಳು ವರದಿಯಾಗಿದ್ದವು. ಆ ಹಿನ್ನೆಲೆಯಲ್ಲಿ ಕಳೆದ ಬಾರಿಯದಂತೆ ಈ ವರ್ಷವೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಇದರೊಂದಿಗೆ ಈ ವರ್ಷವೂ ಬ್ರಿಗೇಡ್ ರಸ್ತೆಯಲ್ಲಿ 12 ಗಂಟೆಗೆ ವಿದ್ಯುತ್ ದೀಪಗಳನ್ನು ಆರಿಸಲಿಲ್ಲ. ಬದಲಿಗೆ ವಿದ್ಯುತ್ ದೀಪಗಳ ಬೆಳಕಿನ ನಡುವೆಯೇ ಯುವ ಸಮೂಹ ಸಂಭ್ರಮಾಚರಣೆ ನಡೆಸಿತು. ಜತೆಗೆ ಹೆಚ್ಚು ಜನ ಸೇರಿದ್ದರಿಂದ ಬ್ರಿಗೇಡ್ ರಸ್ತೆಯಲ್ಲಿ ಏಕಪಥ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ರಸ್ತೆಯಲ್ಲಿ ಜನಸಂದಣಿಗೆ ಆಸ್ಪದವೇ ಇರಲಿಲ್ಲ.
ಕುಣಿತ… ಅಪ್ಪುಗೆ… ಸಂಭ್ರಮ…: ನಗರದ ಬಾರ್, ಪಬ್ ಹಾಗೂ ಡಿಸ್ಕೋಥೆಕ್‌ಗಳಲ್ಲಿದ್ದ ಗಡಿಯಾರದ ಮುಳ್ಳು 12ಕ್ಕೆ ಬರುತ್ತಿದ್ದಂತೆ ಯುವಕರ ಹರ್ಷೋದ್ಗಾರ ಜೋರಾಗಿತ್ತು. ಕೆಲವರು ಸ್ನೇಹಿತರೊಂದಿಗೆ ಹೆಜ್ಜೆ ಹಾಕಿದರೆ, ಇನ್ನು ಕೆಲವರು ಕುಡಿತ, ಕುಣಿತದ ಜೊತೆಗೆ ಸ್ನೇಹಿತರನ್ನು ಅಪ್ಪಿಕೊಂಡು ಶುಭ ಕೋರಿದರು. ಇನ್ನು ಪಬ್ ಹಾಗೂ ಡಿಸ್ಕೋಥೆಕ್‌ಗಳಿಂದ ಹೊರ ಹೊಮ್ಮುತ್ತಿದ್ದ ಸಂಗೀತದ ಅಬ್ಬರಕ್ಕೆ ಚಳಿ ಕೂಡ ನಡುಗುವಂತಹ ವಾತಾವರಣ ನಿರ್ಮಾಣವಾಗಿತ್ತು.
ಮೆಟ್ರೋ ರೈಲಲ್ಲಿ ಜನಜಂಗುಳಿ: ಹೊಸ ವರ್ಷದ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಹಾಗೂ ಬಿಎಂಟಿಸಿ ಸೇವೆಯನ್ನು ಮಧ್ಯರಾತ್ರಿ 2ರವರೆಗೆ ವಿಸ್ತರಿಸಲಾಗಿತ್ತು. ವರ್ಷಾಚರಣೆ ಮುಗಿಯುತ್ತಿದ್ದರಂತೆ ಮೆಟ್ರೊ ರೈಲುಗಳ ಎಲ್ಲ ಬೋಗಿಗಳು ತುಂಬಿ ತುಳುಕಿದ್ದವು. ಇನ್ನು ಎಂ.ಜಿ.ರಸ್ತೆಯಿಂದ ಇಂದಿರಾ ನಗರವರೆಗೆ ಮೆಟ್ರೋ ಸೇವೆ ಇಲ್ಲದ ಕಾರಣದಿಂದ ಮೆಟ್ರೋ ಪ್ರಯಾಣಿಕರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿತ್ತು. ಯುವಕರು ಬಸ್‌ಗಳು ಹಾಗೂ ಮೆಟ್ರೋ ಬೋಗಿಗಳಲ್ಲಿಯೂ ಕೇಳೆ ಹಾಕಿ ಸಹ ಪ್ರಯಾಣಿಕರಿಗೆ ಶುಭಾಶಯ ಕೋರಿದ್ದು ಕಂಡುಬಂತು.